Advertisement

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

12:10 AM Jan 10, 2025 | Team Udayavani |

ಔರಾದ: ಬೀದರ್‌ ಜಿಲ್ಲೆಯ ಕಮಲನಗರ-ಔರಾದ ತಾಲೂಕಿನಲ್ಲಿ ಶಿಕ್ಷಣ ಪಡೆಯುತ್ತಿರುವ 14,700 ವಿದ್ಯಾರ್ಥಿಗಳ ಶಾಲಾ ದಾಖಲಾತಿ ನೆರೆಯ ಮಹಾರಾಷ್ಟ್ರದಲ್ಲೂ ಆಗಿರುವ ವಿಚಾರ ಬೆಳಕಿಗೆ ಬಂದಿದೆ! ಹಣದಾಸೆಗಾಗಿ ವಿದ್ಯಾರ್ಥಿಗಳ ದ್ವಿದಾಖಲಾತಿ ಹೆಸರಿನಲ್ಲಿ “ಮಹಾ’ ವಂಚನೆ ನಡೆದಿರುವ ಅನುಮಾನ ಇದ್ದು, ಪಾಲಕರು-ಶಿಕ್ಷಕರನ್ನು ದಂಗಾಗಿಸಿದೆ. ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟದ ಹಿಂದೆ ಶಿಕ್ಷಣ ಇಲಾಖೆ ಸಿಬಂದಿಯೂ ಇರುವ ಆರೋಪ ಕೇಳಿ ಬಂದಿದೆ.

Advertisement

1ರಿಂದ 10ನೇ ತರಗತಿವರೆಗೆ ಎರಡು ತಾಲೂಕುಗಳನ್ನೊ ಳಗೊಂಡು ಒಟ್ಟು 42,800 ವಿದ್ಯಾರ್ಥಿಗಳ ದಾಖಲಾತಿ ಇದೆ. ಈ ಪೈಕಿ ಶೇ. 30ಕ್ಕಿಂತ ಹೆಚ್ಚು ಮಕ್ಕಳ ಶಾಲಾ ದಾಖಲಾತಿ ಮಹಾರಾಷ್ಟ್ರದ ನಾಶಿಕ್‌, ಔರಂಗಾಬಾದ್‌, ಬೀಡ್‌, ಪರಬಾಣಿಯ ಆಶ್ರಮ ಶಾಲೆಗಳಲ್ಲಿ ಪತ್ತೆಯಾಗಿದೆ. ಒಮ್ಮೆಯೂ ಆ ಶಾಲೆಯ ಮುಖ ನೋಡಿಲ್ಲ. ಆದರೂ ನಮ್ಮ ಮಕ್ಕಳ ದಾಖಲಾತಿ ಅಲ್ಲಿ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ.

ಯಾರ ಕೈವಾಡ?
ವಿದ್ಯಾರ್ಥಿಗಳ ದ್ವಿದಾಖಲಾತಿಯನ್ನು ಶಿಕ್ಷಣ ಇಲಾಖೆಯೇ ಖಚಿತಪಡಿಸಿದೆ. ಇದರಲ್ಲಿ ಸ್ಥಳೀಯ ಶಿಕ್ಷಣ ಇಲಾಖೆ ಮತ್ತು ಮಹಾ ಆಶ್ರಮ ಶಾಲೆ ಮುಖ್ಯಸ್ಥರ ಕೈವಾಡವಿದೆ ಎನ್ನಲಾಗಿದೆ.

ಬಹಿರಂಗ ಹೇಗಾಯ್ತು?
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಳಿಕ ದೇಶದ ಎಲ್ಲ ವಿದ್ಯಾರ್ಥಿಗಳ ದಾಖಲಾತಿ ಒಂದೇ ಕಡೆ ಲಭ್ಯವಾಗುವಂತೆ ಕೇಂದ್ರ ಸರಕಾರ ಅಟೋಮ್ಯಾಟಿಕ್‌ ಪರ್ಮನೆಂಟ್‌ ಅಕಾಡೆಮಿಕ್‌ ಅಕೌಂಟ್‌ ರಿಜಿಸ್ಟ್ರಿ (ಅಪಾರ್‌) ಎಂಬ ತಂತ್ರಾಂಶ ರೂಪಿಸಿದೆ. ಔರಾದ್‌ನ ಖಾಸಗಿ ಶಾಲೆಯೊಂದು ತಮ್ಮ ವಿದ್ಯಾರ್ಥಿಗಳ ದಾಖಲಾತಿ ವಿವರವನ್ನು ಅಪಾರ್‌ ತಂತ್ರಾಂಶದಲ್ಲಿ ಸೇರಿಸುವಾಗ ತಮ್ಮ ವಿದ್ಯಾರ್ಥಿಗಳ ದಾಖಲಾತಿ ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಇರುವುದು ಗೊತ್ತಾಗಿದೆ.

ದಾಖಲಾತಿ ಮಾಫಿಯಾ!
ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶ್ರಮ ಶಾಲೆಗಳಲ್ಲಿ ಪ್ರತೀ ವಿದ್ಯಾರ್ಥಿಗೆ 1,800ರಿಂದ 2,200 ರೂ. ಪ್ರೋತ್ಸಾಹಧನವನ್ನು ಅಲ್ಲಿನ ಸರಕಾರ ನೀಡುತ್ತದೆ. ಹಾಗಾಗಿ ಕನಿಷ್ಠ ಮಕ್ಕಳ ದಾಖಲಾತಿ ತೋರಿಸಲು ಮಕ್ಕಳ ದಾಖಲಾತಿ ಮಾಫಿಯಾ ನಡೆಯುತ್ತಿದೆ ಎನ್ನಲಾಗಿದೆ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈಗ ಬಯಲಿಗೆ ಬಂದಿದೆ.

Advertisement

ನನ್ನ ಮಗ ಔರಾದ್‌ನ ಖಾಸಗಿ ಶಾಲೆಗಳಲ್ಲಿ ಓದುತ್ತಿರುವಾಗ ಮಹಾರಾಷ್ಟ್ರದ ಶಾಲೆಯಲ್ಲಿ ದಾಖಲಾತಿ ತೋರಿಸುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದನ್ನು ಸರಿಪಡಿಸುವಂತೆ ಬಿಇಒ ಕಚೇರಿಗೆ ಅಲೆದಾಡುತ್ತಿದ್ದೇವೆ. ಕೂಡಲೇ ಇದನ್ನು ಸರಿಪಡಿಸಬೇಕು. ದ್ವಿದಾಖಲಾತಿಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು.
– ಸತೀಶ್‌ ಔರಾದ್‌, ಪಾಲಕರು

ದ್ವಿದಾಖಲಾತಿ ನಮ್ಮ ಶಿಕ್ಷಣ ಇಲಾಖೆಯಿಂದ ಆಗಿರುವ ತಪ್ಪಲ್ಲ. ಕೋಚಿಂಗ್‌ ಸೆಂಟರ್‌ ಮತ್ತು ಪಾಲಕರು ಮಾಡಿರುವ ಸಾಧ್ಯತೆ ಇದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ 2 ಕಡೆಗೆ ಹೇಗೆ ಆಗಲು ಸಾಧ್ಯ ಎಂಬುದು ಗೊತ್ತಾಗುತ್ತಿಲ್ಲ.
– ಸುಧಾರಾಣಿ,
ಪ್ರಭಾರಿ ಬಿಇಒ, ಔರಾದ

– ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next