Advertisement

ಜೀವನದ ವಾಸ್ತವ ಬಿಂಬಿಸುವ ನಾಟಕ ಐಸಿಯು …ನೋಡುವೆ ನಿನ್ನ

03:13 PM Jan 19, 2018 | |

ಉಡುಪಿಯ ರಂಗಭೂಮಿ(ರಿ.) ನಾಟಕ ಸಂಸ್ಥೆಯ ರವಿರಾಜ್‌.ಎಚ್‌.ಪಿ.ಯವರು ನಿರ್ದೇಶಿಸಿದ ನಾಟಕ “ಐಸಿಯು… ನೋಡುವೆ ನಿನ್ನ’. ನಾಟಕದ ಕತೃì ಶಶಿರಾಜ್‌ ಕಾವೂರು. ಜ. 6ರಂದು ಉಡುಪಿಯ ಎಮ್‌.ಜಿ.ಎಮ್‌ ಕಾಲೇಜಿನ ಮುದ್ದಣ ಮಂಟಪ‌ದಲ್ಲಿ ಪ್ರದರ್ಶನಗೊಂಡ ಈ ನಾಟಕ ಜೀವನದ ವಾಸ್ತವತೆಯನ್ನು ಬಿಂಬಿಸಿತು. 

Advertisement

ನಾಟಕ ಆಸ್ಪತ್ರೆಯ ಐಸಿಯು ಎದುರಲ್ಲಿ ನಡೆಯುತ್ತದೆ. ಐಸಿಯು ಒಳಗಿರುವ ಅಪ್ಪನನ್ನು ನೋಡಲು ಬಂದಿರುವ ಆರು ಮಕ್ಕಳ ಮಾತುಕತೆಯಲ್ಲಿ ಬೆಳೆದ‌ ನಾಟಕದ ಎಲ್ಲ ಸನ್ನಿವೇಶಗಳೂ ಒಂದೇ ರಂಗಸಜ್ಜಿಕೆಯಲ್ಲಿ ನಡೆಯುವುದರಿಂದ ಕಥೆಯನ್ನೆಲ್ಲ ಮಾತುಗಳೇ ಹೇಳ ಬೇಕಾಗುತ್ತದೆ. ಕಿರಿಯ ಮಗ ಮೌನೇಶನ ಪಾತ್ರದಲ್ಲಿ ಮಹೇಶ್‌ ಮಲ್ಪೆಯವರ ನಟನೆ ಮತ್ತು ಮಾತುಗಾರಿಕೆ ಲವಲವಿಕೆಯಿಂದ ಕೂಡಿದೆ. ಸಂಸಾರಸ್ಥ ಮಕ್ಕಳಾದ ಗಿರೀಶ್‌ ಪಾತ್ರದಲ್ಲಿ ರಾಜೇಶ್‌ ಭಟ್‌ ಪಣಿಯಾಡಿ ಮತ್ತು ರಮೇಶ್‌ ಪಾತ್ರದಲ್ಲಿ ವಿವೇಕಾನಂದ ಎನ್‌. ಹೊಣೆಗಾರಿಕೆಯರಿತು ನಟಿಸಿದ್ದಾರೆ . ಆಸ್ಪತ್ರೆಯ ಅಟೆಂಡರ್‌ ಪಾತ್ರವನ್ನು ಜಯಕರ ಮಣಿಪಾಲ ನಿಭಾಯಿಸಿದ್ದಾರೆ. ಉಳಿದಂತೆ ಮಗಂದಿರಾದ ಸತೀಶ್‌ ಪಾತ್ರದಲ್ಲಿ ರಾಘವೇಂದ್ರ ರಾವ್‌ ಕಟಪಾಡಿ, ದಿನೇಶ್‌ ಪಾತ್ರದಲ್ಲಿ ಅಶೋಕ್‌ ಕೋಟ್ಯಾನ್‌,ಡಾಕ್ಟರ್‌ ಪಾತ್ರದಲ್ಲಿ ಶ್ರೀಪಾದ ಹೆಗಡೆ, ನರ್ಸ್‌ ಪಾತ್ರದಲ್ಲಿ ಲಕ್ಷ್ಮೀ ಆಚಾರ್ಯ ಹಾಗೂ ಆಸ್ಪತ್ರೆಯ ಗ್ರಾಹಕರಾದ ವಿಲ್‌ಫ್ರೆಡ್‌ ಪಾತ್ರದಲ್ಲಿ ದಿನೇಶ್‌ ಬಾಂಧವ್ಯ, ಜಸಿಂತಾ ಪಾತ್ರದಲ್ಲಿ ರûಾ ಭಟ್‌,ಮಂಗಳಾ ಪಾತ್ರದಲ್ಲಿ ಅನ್ವಿತಾ ಭಟ್‌ ಅಭಿನಯ ಮೆಚ್ಚುವಂತಿತ್ತು.  ಬಾಲ್ಯದ ಕೆಲವು ಸುಂದರ ನೆನಪುಗಳನ್ನು ತಮ್ಮ ಭಾವಲೋಕದಲ್ಲಿ ಅಪ್ಪನೊಂದಿಗೆ ಸ್ಥಾಪಿಸಿಕೊಂಡಿರುವ ಮಕ್ಕಳು ಒಬ್ಬೊಬ್ಬರಾಗಿ ಒಂದೊಂದೇ ನೆನಪುಗಳನ್ನು ಬಿಚ್ಚಿಡುವ ಪರಿ ಪ್ರೇಕ್ಷಕರನ್ನು ಬಾಲ್ಯಕಾಲಕ್ಕೆ ಕೊಂಡೊಯ್ಯುತ್ತದೆ. ಆದರೆ  ವೃದ್ಧಾಪ್ಯದಲ್ಲಿ, ಅಪ್ಪನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳುವಲ್ಲಿ ನುಣುಚಿಕೊಳ್ಳುವ ಯತ್ನ ಪ್ರೇಕ್ಷಕನ ಭಾವಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ.ನಾಟಕದ ಕೊನೆಯಲ್ಲಿ ನೆನಪಲ್ಲಿ ಉಳಿಯುವ ಮುಖ್ಯ ಅಂಶವೆಂದರೆ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರ ರಚನೆ ಮತ್ತು ಗೀತಂ ಗಿರೀಶ್‌ರವರ ಸಂಗೀತ‌ದಲ್ಲಿ ಮೂಡಿ ಬಂದ ಕಣ್ಣಾಮುಚ್ಚಾಲೆ… ಹಾಗೂ ಬೆಂಕಿ ಮುಟ್ಟಿಲ್ಲ ರೆಕ್ಕೆ ಸುಟ್ಟಿಲ್ಲ… ಹಾಡುಗಳ ಸಾಲು. ಸನ್ನಿವೇಶಗಳ ನಡುವೆ ದೃಶ್ಯಗಳು ಮತ್ತು ರಂಗಸಜ್ಜಿಕೆಯ ಬದಲಾವಣೆಗೆ ಈ ಕಥಾವಸ್ತುವಿನಲ್ಲಿ ಅವಕಾಶವಿಲ್ಲದಿದ್ದರೂ ಬೆಳಕಿನ ಬದಲಾವಣೆ ಮಾಡಿದ್ದು ಒಳ್ಳೆಯ ಪ್ರಯೋಗ. ನಾಟಕದಲ್ಲಿ ದೂರವಾಣಿ ಸಂಭಾಷಣೆ ಮತ್ತು ಆಸ್ಪತ್ರೆಗೆ ಬರುವವರು ಲಿಫ್ಟಿನಿಂದ ಹೊರಬರುವಂತೆ ತೋರಿಸಲು ಬಳಸಿದ ತಂತ್ರಗಾರಿಕೆ ಪರಿಣಾಮಕಾರಿಯಾಗಿತ್ತು. ಡಿಜಿಟಲ್‌ ತಂತ್ರಗಾರಿಕೆಯ ಬಳಕೆ ಇಂದಿನ ಕಾಲಮಾನಕ್ಕೆ ಹೊಂದುವಂತಿದ್ದು ನಾಟಕದ ನೈಜತೆಯನ್ನು ಹೆಚ್ಚಿಸಲು ಸಹಕರಿಸಿತು. ಬಾಸುಮ ಕೊಡಗು ಅವರ ಆಸ್ಪತ್ರೆಯ ಐಸಿಯು ರಂಗವಿನ್ಯಾಸ ಕಥೆಯ ಓಟಕ್ಕೆ ಪೂರಕವಾಗಿತ್ತು. 

ಕೊನೆಯಲ್ಲಿ ಕಥೆ ಅಂತ್ಯವಾಗದೆ ಪ್ರೇಕ್ಷಕರ ಮನೋಭೂಮಿಕೆಯಲ್ಲಿ ವಿವಿಧ ಪ್ರಶ್ನೆಗಳು ಹುಟ್ಟುವಂತೆ ಮಾಡಿ, ವಿಭಿನ್ನ ಅಂತ್ಯದ ಊಹಾತ್ಮಕತೆಯ ಸಾಧ್ಯತೆಗಳನ್ನು ಉಳಿಸಿಬಿಡುತ್ತದೆ. ಪ್ರಥಮ ಬಾರಿ ಮಂಗಳಮುಖೀ ಕಾಜಲ್‌ರವರಿಗೂ ಒಂದು ಗಮನಾರ್ಹ ಪಾತ್ರವನ್ನು ನೀಡಿ ಅವರ ನಟನೆಗೆ ಅವಕಾಶ ಕಲ್ಪಿಸಿ ಅವರ ಮನೋಜ್ಞ ಅಭಿನಯವನ್ನು ರಂಗಾಸಕ್ತರಿಗೆ ಪರಿಚಯಿಸಿದ ಹೆಮ್ಮೆ ಈ ನಾಟಕದ್ದಾಗಿದೆ. ಈ ನಿಟ್ಟಿನಲ್ಲಿ ನಾಟಕ ತಂಡದ ನಿರ್ದೇಶಕರ ಸಾಮಾಜಿಕ ಪ್ರಜ್ಞೆಯನ್ನೂ, ಜೀವನ್ಮುಖೀ ಕಾಳಜಿಯನ್ನೂ ಮೆಚ್ಚಿಕೊಳ್ಳ ಬೇಕು. 

ವಿದ್ಯಾ ಕಾರ್ಕಳ 

Advertisement

Udayavani is now on Telegram. Click here to join our channel and stay updated with the latest news.

Next