Advertisement

ಅವೈಜ್ಞಾನಿಕ ರಸ್ತೆಯಲ್ಲಿ ನಿತ್ಯ ವಾಹನ ಸವಾರರ ಸಂಕಟ

03:58 PM Feb 06, 2018 | Team Udayavani |

ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆ ಅಗಲೀಕರಣವಾಗಿ 2 ವರ್ಷ ಕಳೆದರೂ ಮುಖ್ಯ ರಸ್ತೆಯಿಂದ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅವೈಜ್ಞಾನಿಕವಾಗಿ ಕೂಡಿದ್ದು, ಪಾದಚಾರಿಗಳು, ಸವಾರರು ತೊಂದರೆ ಅನುಭವಿಸುವಂತಾಗಿದೆ.

Advertisement

ಪಟ್ಟಣದ ಮುಖ್ಯ ರಸ್ತೆಯಿಂದ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಎರಡೂ ಬದಿ ರಸ್ತೆಗಳು ಎತ್ತರ ದಿಂದ ಕೂಡಿದೆ. ಲೋಕೋಪಯೋಗಿ ಇಲಾಖೆ, ಪಪಂ ಬೇಜವಾಬ್ದಾರಿ ತೋರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆ ಅಗಲೀ ಕರಣದ ನಂತರ 4.5 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿ 2 ವರ್ಷವಾದರೂ ಅನೇಕ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಪಟ್ಟ ಣದ ಹಲವು ಕಡೆ ಕಾಮಗಾರಿಗಳು ಸ್ಥಗಿತಗೊಂಡಿದ್ದು ಸಂಚಾರಕ್ಕೆ ಅಡಚಣೆ ಯಾಗುತ್ತಿದೆ.
 
ಪ್ರವಾಸಿ ಮಂದಿರ, ಪೊಲೀಸ್‌ ಠಾಣೆ, ಪಿಕಾರ್ಡ್‌ ಬ್ಯಾಂಕ್‌, ಹಳೇ ಮೈಸೂರು ಬ್ಯಾಂಕ್‌, ಕುಂಬಾರಪೇಟೆ, ಸೇರಿ ಅಂಬೇಡ್ಕರ್‌ ನಗರದವರೆಗೂ ರಸ್ತೆಯ ಎರಡೂ ಬದಿಗಳ ಡಾಂಬರು ಹಾಕಲಾಗಿದೆ. ಆದರೆ, ಸಂಪರ್ಕ ಕಲ್ಪಿಸುವ ವಿವಿಧ ವಾರ್ಡ್‌ಗಳ ರಸ್ತೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣ: ಮುಖ್ಯ ರಸ್ತೆ 2 ಬದಿಗಳಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಕೈಗೊಂಡಿದ್ದು, ರಸ್ತೆ ಯಿಂದ 3 ಅಡಿ ಎತ್ತರವಾಗಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದ ರಿಂದ ಪ್ರತಿದಿನ ಸಾರ್ವಜನಿಕರು ಸಂಚರಿಸಲು ಕಷ್ಟವಾಗುತ್ತಿದೆ. ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನಗಳೂ ಇವೆ.

ಪಾದಚಾರಿ ಮಾರ್ಗವಿಲ್ಲ: ರಸ್ತೆ 82 ಅಡಿ ಅಗಲವಾಗಿದ್ದರೂ ಸಾರ್ವಜನಿಕರು ಓಡಾಡಲು ಪಾದಚಾರಿ ಮಾರ್ಗವಿಲ್ಲ. ರಸ್ತೆ ಯಿಂದ 3 ಅಡಿ ಎತ್ತರಕ್ಕೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿ ರುವುದರಿಂದ ಸಾರ್ವಜನಿಕರು ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿ ಪಪಂ ವತಿಯಿಂದ ನಿರ್ಮಿಸಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಇದರಿಂದ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ದೂರುಗಳನ್ನು ನೀಡುತ್ತಿದ್ದಾರೆ. ಮುಖ್ಯ ರಸ್ತೆಯಿಂದ ಇತರೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯನ್ನು ಹೊಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
 ಶ್ರೀನಿವಾಸ ಮೂರ್ತಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ

ಪಪಂ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಸಂಚರಿಸಲು ಅಡಚಣೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 
 ಲಕ್ಷ್ಮೀಕಾಂತಮ್ಮ, ಪಪಂ ಸದಸ್ಯೆ

ರಾಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next