ಬೀದರ: ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದ್ದು, ಎಚ್ಚರಿಕೆಯಿಂದ ಇರಬೇಕಾಗಿದೆ. ಒಳ್ಳೆಯವರ ಮೌನ ಇಡೀ ದೇಶವನ್ನೇ ಸರ್ವನಾಶ ಮಾಡುತ್ತದೆ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ನಗರದ ಸಿದ್ಧಾರ್ಥ ಕಾಲೇಜ ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ಮತ್ತು ಸಮತಾ ಸೈನಿಕ ದಳ ಆಶ್ರಯದಲ್ಲಿ ಆಯೋಜಿಸಿದ್ದ 10ನೇ ದಿನದ ಧಮ್ಮ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತಕ್ಕೆ ಈಗ ಎರಡು ಅನಿವಾರ್ಯಗಳಿವೆ. ಒಂದು ಬುದ್ಧ, ಎರಡನೇಯದು ಯುದ್ಧ. ಬುದ್ಧನನ್ನು ಆಯ್ಕೆ ಮಾಡಿಕೊಂಡರೆ ದೇಶ ಶಾಂತಿ, ಕರುಣೆ, ಮೈತ್ರಿಯಿಂದ ಉಳಿಯುತ್ತದೆ. ಒಂದೊಮ್ಮೆ ಪ್ರಧಾನಿ ಯುದ್ಧ ಮಾಡಿದರೆ, ಇಡೀ ದೇಶವೇ ನಾಶವಾಗುತ್ತದೆ ಎಂದು ಹೇಳಿದರು.
ದೇಶಕ್ಕೆ ಬುದ್ಧನೊಬ್ಬನೇ ಉತ್ತರ, ಬುದ್ಧನೊಬ್ಬನೇ ಎತ್ತರ. ಕಾಮ, ಕ್ರೋಧ, ಮೋಹ, ಮದ, ದ್ವೇಷ, ಕಳ್ಳತನ, ಸುಳ್ಳುತನ, ಮದ್ಯಪಾನಗಳಿಂದ ಮುಕ್ತನಾಗಲು ಬುದ್ಧ ತಿಳಿಸಿದ್ದಾನೆ. ಮನುಷ್ಯ ಇವೆಲ್ಲವುಗಳನ್ನು ಪಾಲಿಸಿದ್ದೇ ಆದರೆ, ದೇಶದಲ್ಲಿ ಶಾಂತಿ, ಕರುಣೆ, ಪ್ರೇಮ, ಮೈತ್ರಿ ಮನೋಭಾವ ಬೆಳೆದು ಯುದ್ಧದ ಅನಿವಾರ್ಯತೆಯೇ ಬರುವುದಿಲ್ಲ ಎಂದರು.
ಶ್ರೀ ಭಂತೆ ಮೇಧಾಂಕರ್ ಮುಂಬಯಿ, ಭಂತೆ ಜ್ಞಾನಸಾಗರ, ಭಂತೆ ಧಮ್ಮಪಾಲ, ಭಂತೆ ಸಂಘಕೀರ್ತಿ, ಭಂತೆ ಸಂಘಜ್ಯೋತಿ, ಭಂತೆ ಸಂಘಸೈನಿಕ ಅವರ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಜನರು ಬೌದ್ಧ ಧಮ್ಮ ದೀಕ್ಷೆ ಸ್ವೀಕಾರ ಮಾಡಿದರು. ಚಂದ್ರಕಲಾ ಬಡಿಗೇರ ಅವರ 22 ಪ್ರತಿಜ್ಞೆಗಳ ಕುರಿತ ಸ್ವರಚಿತ ಗ್ರಂಥ ಬಿಡುಗಡೆ ಮಾಡಲಾಯಿತು.
ಮಹಾಸಭೆಯ ಅಧ್ಯಕ್ಷ ಜಗನ್ನಾಥ ಬಡಿಗೇರ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಸಾಗರ ದಾಂಡೇಕರ್, ಪ್ರಾಧ್ಯಾಪಕ ಪ್ರಭು, ಸತೀಶ ಕಾಂಬಳೆ, ಆನಂದರಾವ್ ಸಿಪಿಐ, ಡಾ| ವೆಂಕಟಗಿರಿ, ಬಿಎಸ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ದೀನೆ, ಪುಟ್ಟರಾಜ ಮೈಸೂರು ಇದ್ದರು. ತಾಲೂಕು ಅಧ್ಯಕ್ಷ ಭೀಮಷಾ ನಾಟೀಕರ್ ಸ್ವಾಗತಿಸಿದರು. ರಾಜಪ್ಪಾಗೂನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬು ಆಣದೂರೆ ಮತ್ತು ಕಾಶಿನಾಥ ಚೆಲವಾ ವಂದಿಸಿದರು.