Advertisement

Kinnigoli: ಪಕ್ಷಿಕೆರೆ: ಮೊಬೈಲ್‌, ಕೋಣೆಯಲ್ಲಿ ಸಿಕ್ಕಿದ ಚೂರಿ ಪೊಲೀಸರ ವಶಕ್ಕೆ

07:41 AM Nov 12, 2024 | Team Udayavani |

ಕಿನ್ನಿಗೋಳಿ: ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಕ್ಷಿಕೆರೆ ನಿವಾಸಿ ಕಾರ್ತಿಕ್‌ ಭಟ್‌ (32) ತನ್ನ ಪುಟ್ಟ ಮಗು ಹೃದಯ್‌ (4) ಹಾಗೂ ಪತ್ನಿ ಪ್ರಿಯಾಂಕಾ (28) ಅವರನ್ನು ಕೊಂದು ತಾನು ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ರೈಲ್ವೇ ಟ್ರ್ಯಾಕ್‌ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದ್ದು, ಸೋಮವಾರ ಪೊಲೀಸ್‌ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ಕಾರ್ತಿಕ್‌ ಹಾಗೂ ಪ್ರಿಯಾಂಕ್‌ ಬಳಸುತ್ತಿದ್ದ ಮೊಬೈಲ್‌ ಫೋನ್‌ಗಳು ಹಾಗೂ ಮನೆಯಲ್ಲಿ ಅವರಿದ್ದ ಕೋಣೆಯಲ್ಲಿ ಪತ್ತೆಯಾದ 2 ಚೂರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೋಲೀಸ್‌ ಮೂಲಗಳು ತಿಳಿಸಿವೆ.

Advertisement

ಕೆಮ್ರಾಲ್‌ ಗ್ರಾಮ ಪಂಚಾಯತ್‌ನ ಹತ್ತಿರದ ವನಜಾಕ್ಷಿ ಫ್ಲ್ಯಾಟ್‌ನಲ್ಲಿ ಜನಾರ್ದನ-ಶ್ಯಾಮಲಾ ಭಟ್‌ ಹಾಗೂ ಪುತ್ರ ಕಾರ್ತಿಕ್‌ ಕುಟುಂಬ ವಾಸವಿದ್ದರು. ಸೋಮವಾರ ಪೋಲೀಸ್‌ ಇಲಾಖೆ ತನಿಖೆಯ ದೃಷ್ಟಿಯಲ್ಲಿ 2-3 ದಿನ ಫ್ಲ್ಯಾಟ್‌ನಲ್ಲಿ ತಾವು ವಾಸ ಮಾಡುವಂತಿಲ್ಲ ಎಂದು ಕಾರ್ತಿಕ್‌ ಹೆತ್ತವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಒಂದೇ ಮನೆಯ ಬೇರೆ ಬೇರೆ ಕೋಣೆಯಲ್ಲಿ ಕಾರ್ತಿಕ್‌ ಹಾಗೂ ಅವರ ಹೆತ್ತವರು ವಾಸ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಕೊಣೆಯಲ್ಲಿ ನೇತು ಹಾಕಲಾಗಿದ್ದ ಗ್ರೂಪ್‌ ಫೋಟೋದಲ್ಲಿ ಕಾರ್ತಿಕ್‌ ಭಟ್‌, ಪತ್ನಿ ಹಾಗೂ ಮಗುವಿನ ಫೋಟೋಗೆ ಮಸಿ ಬಳಿಯಲಾಗಿರುವುದು ಪತ್ತೆಯಾಗಿದೆ. ಕುಟುಂಬದ ಒಳಗಿನ ಮನಸ್ತಾಪ ಎಷ್ಟು ತೀವ್ರವಾಗಿತ್ತೆಂದು ಇದರಿಂದ ತಿಳಿದು ಬರುತ್ತದೆ. ಮರಣೋತ್ತರ ಪರೀಕ್ಷೆಗಳು ನಡೆದಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಿದೆ. ಕಾರ್ತಿಕ್‌ ಅವರ ಪತ್ನಿ ಮತ್ತು ಮಗು ಮೃತದೇಹ ತಮ್ಮದೇ ಮನೆಯ ಕೋಣೆಯಲ್ಲಿ ದಿನವಿಡೀ ಬಿದ್ದುಕೊಂಡಿದ್ದರೂ, ಮನೆಯಲ್ಲಿದ್ದ ಕಾರ್ತಿಕ್‌ ಅವರ ಹೆತ್ತವರಿಗೆ ತಿಳಿದಿಲ್ಲವೆಂದರೆ ವಿಶೇಷ.

ಸಿಸಿ ಕೆಮರಾಗಳ ಪರಿಶೀಲನೆ
ಕಾರ್ತಿಕ್‌ ಭಟ್‌ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ನಡೆಸಿದ ಘಟನೆಯ ಬಳಿಕ ದ್ವಿಚಕ್ರ ವಾಹನವನ್ನು ಕಲ್ಲಾಪು ದೇವಸ್ಥಾನ ಬಳಿ ಇಟ್ಟು ರೈಲು ಹಳಿಯ ಮೇಲೆ ಕೈಗೆ ಬಟ್ಟೆ ಸುತ್ತಿಕೊಂಡು ಹೋಗುವ ದೃಶ್ಯ ಅಲ್ಲಿನ ಪರಿಸರದ ಸಿಸಿ ಕೆಮರಾದಲ್ಲಿ ದಾಖಗಿದೆ ಎನ್ನಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇನ್ನೊಂದು ಆಯಾಮ
ಶುಕ್ರವಾರ ಮುಂಜಾನೆ ಪತಿ-ಪತ್ನಿ ಮಧ್ಯೆ ಗಲಾಟೆಯಾಗಿ ಪತ್ನಿ ಪ್ರಿಯಾಂಕಾಳೇ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಇದನ್ನು ಕಂಡು ತಾನೂ ಉಳಿಯಬಾರದು ಎಂದು ನಿರ್ಧರಿಸಿ ರೈಲು ಹಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ಈ ದಿಕ್ಕಿನಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.

Advertisement

ಆತ್ಮಹತ್ಯೆಗೆ ಪ್ರಚೋದನೆ: ತಾಯಿ, ಅಕ್ಕನ ಮೇಲೆ ಕೇಸು
ಮೂಲ್ಕಿ, ನ. 11: ಶುಕ್ರವಾರ ನಡೆದ ಪಕ್ಷಿಕೆರೆಯ ಕಾರ್ತಿಕ್‌ ಆತ್ಮಹತ್ಯೆ, ಮಗು ಹಾಗೂ ಪತ್ನಿ ಸಾವಿನ ಪ್ರಕರಣದಲ್ಲಿ ಮೃತ ಕಾರ್ತಿಕ್‌ನ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.

ಮೃತ ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ಅವರು ನೀಡಿದ ದೂರಿನಂತೆ ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಾವಿತ್ರಿಯವರು ಶಿವಮೊಗ್ಗದ ಪುರಲೆ ಗ್ರಾಮದ ನಿವಾಸಿಯಾಗಿದ್ದಾರೆ. ಪಕ್ಷಿಕೆರೆಯಲ್ಲಿರುವ ಕಾರ್ತಿಕ್‌ ವಾಸ ಇದ್ದ ಮನೆಯು ಆತನ ಅಕ್ಕ ಕಣ್ಮಣಿಯ ಪತಿಯ ಹೆಸರಿನಲ್ಲಿ ಇದೆ. ಆಕೆ ತನ್ನ ತಾಯಿ ಜತೆ ಸೇರಿಕೊಂಡು ಮನೆ ಬಿಡುವಂತೆ ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ಒತ್ತಡ ಹಾಕುತ್ತಿರುವುದಾಗಿ ತನ್ನ ಪುತ್ರಿ ಪ್ರಿಯಾಂಕಾ ತನ್ನಲ್ಲಿ ತಿಳಿಸಿರುವುದನ್ನು ಸಾವಿತ್ರಿಯವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.

ಇಬ್ಬರಿಗೂ ಒಮ್ಮಲೆ ಬಂತು ತಲೆಸುತ್ತು!
ಆರೋಪಿಗಳಾದ ಕಾರ್ತಿಕ್‌ನ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪೊಲೀಸರು ಸೋಮವಾರ ಬಂಧಿಸಿ ಮೂಡುಬಿದಿರೆಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. ನ್ಯಾಯಾಲಯದಿಂದ ಜೈಲಿಗೆ ಕರೆದೊಯ್ಯುವ ವೇಳೆ ಇಬ್ಬರೂ ಆರೋಪಿಗಳು ತಲೆ ತಿರುಗಿದಂತೆ ಬಿದ್ದು ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರನ್ನೂ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next