Advertisement

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

09:48 PM Oct 26, 2024 | Team Udayavani |

ಮಡಿಕೇರಿ: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ತೋಟವೊಂದರಲ್ಲಿ ಅ.8ರಂದು ಪತ್ತೆಯಾದ ಅರೆಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪದಡಿ ಓರ್ವ ಮಹಿಳೆ ಸೇರಿ ಮೂವರ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಅತ್ಯಂತ ಸೂಕ್ಷ್ಮ ಪ್ರಕರಣ ಬೆನ್ನತ್ತಿದ ಪೊಲೀಸರು ಮೂಲತ: ತೆಲಂಗಾಣದ ಯಾದಾದ್ರಿ ಜಿಲ್ಲೆಯ ಮೋಂಗಿರ್ ನಗರದ, ಪ್ರಸ್ತುತ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿರುವ ನಿಹಾರಿಕಾ ಪಿ. (29), ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವಾಸವಿ ನಗರದ ಪ್ರಸ್ತುತ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿರುವ ನಿಖಿಲ್ ಮೈರೆಡ್ಡಿ (28) ಹಾಗೂ ಹರಿಯಾಣದ ಕಾರ್ನಲ್ ಗರುಂದ ನಿವಾಸಿ ಅಂಕೂರ್ ರಾಣ(30) ನನ್ನು ಬಂಧಿಸಿದ್ದಾರೆ.

500 ಸಿಸಿ ಕ್ಯಾಮರಾಗಳ ಪರಿಶೀಲನೆ: 
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿ ಕಾಫಿ ತೋಟದಲ್ಲಿ ಅರೆಸುಟ್ಟ ಮೃತದೇಹದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ಆರೋಪಿಗಳ ಪತ್ತೆಗಾಗಿ ಸುಮಾರು 500 ಸಿಸಿ ಕ್ಯಾಮರಾಗಳ ಪರಿಶೀಲಿಸಲಾಗಿದೆ. ತನಿಖೆ ವೇಳೆ ಮೃತದೇಹ ನಿಹಾರಿಕಾ ಪತಿ ರಮೇಶ್ ಕುಮಾರ್ (54) ಎಂಬುವವರದ್ದು ಎಂದು ಗೊತ್ತಾಗಿದೆ. ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಕಾರಿನ ಮಾಹಿತಿಯ ಕಲೆ ಹಾಕಿದಾಗ ಇದು ರಮೇಶ್ ಕುಮಾರ್ ಹೈದರಾಬಾದ್ ಎಂಬುವವರದ್ದಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಆಧರಿಸಿ ತನಿಖೆ ತೀವ್ರಗೊಳಿಸಿದಾಗ ನಿಹಾರಿಕಾ ರಮೇಶ್ ಕುಮಾರ್ ಅವರ ಎರಡನೇ ಪತ್ನಿ ಎನ್ನುವುದು ಖಾತ್ರಿಯಾಗಿದೆ.

ಆಸ್ತಿ ಮಾರಾಟದಿಂದ ಬಂದ 8 ಕೋಟಿ ರೂ.ಗಳ ಪಡೆಯುವ ಉದ್ದೇಶದಿಂದ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ನಿಹಾರಿಕಾ ತನ್ನ ಸ್ನೇಹಿತ ಹರಿಯಾಣ ಮೂಲದ ಅಂಕೂರ್ ರಾಣನ ಸಹಾಯ ಪಡೆದಿದ್ದಾಳೆ. ಡ್ರಾಪ್ ಮಾಡುವ ನೆಪದಲ್ಲಿ ಪತಿ ರಮೇಶ್ ಕುಮಾರ್ ನ ಕಾರಿನಲ್ಲಿ ಬಂದ ಇಬ್ಬರು ಉಪ್ಪಳ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿದ್ದಾರೆ. ನಂತರ ಇಬ್ಬರು ಸೇರಿ ರಮೇಶ್ ಕುಮಾರ್ ನನ್ನು ಕೊಲೆ ಮಾಡಿದ್ದಾರೆ.

Advertisement

ಸ್ನೇಹಿತನ ಸಲಹೆಯಂತೆ ಪತಿ ಶವಕ್ಕೆ ಬೆಂಕಿ: 
ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬರುವ ನಿಹಾರಿಕಾ ತನ್ನ ಮತ್ತೊಬ್ಬ ಸ್ನೇಹಿತ ನಿಖಿಲ್ ಬಳಿ ಕೊಲೆಯ ವಿಚಾರ ತಿಳಿಸುತ್ತಾಳೆ. ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿಯ ತೋಟಕ್ಕೆ ತಂದು ಬೆಂಕಿ ಹಚ್ಚಿ ಆರೋಪಿಗಳು ಕಾರಿನಲ್ಲಿ ಮರಳಿದ್ದಾರೆ. ಈ ಘಟನೆ ಇದೇ ಅ.3ರಂದು ನಡೆದಿದೆ ಎಂದು ಎಸ್‌ಪಿ ಕೆ.ರಾಮರಾಜನ್ ವಿವರಿಸಿದರು. ಸತತ 10 ದಿನಗಳ ತನಿಖೆಯ ನಂತರ ಮೊದಲಿಗೆ ನಿಹಾರಿಕಾ ಹಾಗೂ ನಿಖಿಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ನಂತರ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಂಕೂರ್ ರಾಣನನ್ನು ಹರಿದ್ವಾರದಲ್ಲಿ ಬಂಧಿಸಲಾಯಿತು ಎಂದು ತಿಳಿಸಿದರು.

ಹೆಚ್ಚುವರಿ ಎಸ್‌ಪಿ ಸುಂದರ್ ರಾಜ್.ಕೆ.ಎಸ್ ಹಾಗೂ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಗಂಗಾಧರಪ್ಪ ಆರ್.ಎ. ಮಾರ್ಗದರ್ಶನದಲ್ಲಿ 16 ಪೊಲೀಸ್ ಅಧಿಕಾರಿಗಳ ಒಟ್ಟು 4 ವಿಶೇಷ ತನಿಖಾ ತಂಡ ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next