Advertisement

Sagara: ನಗರಸಭೆ ಬಿಜೆಪಿ ಸದಸ್ಯರ ದಲಿತ ವಿರೋಧಿ ನೀತಿ; ಕಾಂಗ್ರೆಸ್ ಖಂಡನೆ, ಪ್ರತಿಭಟನೆ

08:01 PM Oct 15, 2024 | Kavyashree |

ಸಾಗರ: ನಗರಸಭೆ ಬಿಜೆಪಿ ಸದಸ್ಯರ ದಲಿತ ವಿರೋಧಿ ನೀತಿ ಮತ್ತು ಮಹಿಳಾ ದಮನಕಾರಿ ಧೋರಣೆಯನ್ನು ಖಂಡಿಸಿ ಅ.15ರ ಮಂಗಳವಾರ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಬಿಜೆಪಿ ಅಧಿಕಾರದಲ್ಲಿ ಸಮಾನತೆ, ಮಹಿಳಾ ಗೌರವ ಸಿಗುವುದಿಲ್ಲ. ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿ, ದಲಿತ ಮಹಿಳೆ ಲಲಿತಮ್ಮ ವಿರುದ್ಧ ಟಿ.ಡಿ.ಮೇಘರಾಜ್ ಅಗೌರವದಿಂದ ನಡೆದುಕೊಂಡಿದ್ದಾರೆ. ಬಿಜೆಪಿಯವರ ಮನಸ್ಥಿತಿಯೇ ಅಂತಹದ್ದು. ದಲಿತರು, ಮಹಿಳೆಯರನ್ನು ಅವರು ಪಶುಗಳಂತೆ ನಡೆಸಿಕೊಳ್ಳುತ್ತಾರೆ. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಿದ ಲಲಿತಮ್ಮ ವಿರುದ್ಧ ಮೇಘರಾಜ್ ಮತ್ತಿತರರು ನಡೆದುಕೊಂಡ ರೀತಿ ಖಂಡನೀಯವಾದದ್ದು. ಇಂತಹದ್ದನ್ನು ಪ್ರಜ್ಞಾವಂತ ಸಮಾಜ ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ ಮಾತನಾಡಿ, ಹಿಂದೆ ಬಂದಿದ್ದ ಮೀಸಲಾತಿ ಮತ್ತೆ ಬಂದಿರುವುದರಿಂದ ಲಲಿತಮ್ಮ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅದನ್ನು ತಪ್ಪು ಎಂದು ಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ನ್ಯಾಯಾಲಯಕ್ಕೆ ಹೋಗಿರುವ ಲಲಿತಮ್ಮ ಅವರನ್ನು ಹೊರಗೆ ಕಳಿಸಿ ಎಂದು ಹೇಳಿ, ಅಪರಾಧಿ ಎಂದು ಹೇಳಿರುವುದು ತಪ್ಪು. ನಮ್ಮ ಸದಸ್ಯೆ ಬಗ್ಗೆ ಹೀಗೆಲ್ಲಾ ಮಾತನಾಡಿದರೆ ಹುಷಾರ್ ಎಂದ ಅವರು, ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ ಲಲಿತಮ್ಮ ಆಯ್ಕೆಯಾಗಿದ್ದು ಬಿಜೆಪಿಯವರಿಗೆ ಮರೆತು ಹೋಗಿದೆ. ನಾವು ಜನಪರವಾಗಿದ್ದು ಮುಂದಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಸಾಮಾಜಿಕ ನ್ಯಾಯದಡಿ ನ್ಯಾಯಾಲಯಕ್ಕೆ ಹೋಗಿದ್ದ ಲಲಿತಮ್ಮ ಅವರಿಗೆ ಬಿಜೆಪಿ ಅವಮಾನ ಮಾಡಿರುವುದು ದಲಿತ ಸಮುದಾಯಕ್ಕೆ ಅವಮಾನ ಮಾಡಿದಂತೆ. ಹೆಣ್ಣನ್ನು ತಾಯಿಗೆ ಹೋಲಿಸುವ ಬಿಜೆಪಿಯವರು ದಲಿತ ಮಹಿಳೆಗೆ ಅವಮಾನ ಮಾಡಿರುವುದು ಅವರ ದ್ವಿಮುಖನೀತಿಗೆ ಸಾಕ್ಷಿಯಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.

Advertisement

ಪ್ರತಿಭಟನೆಯಲ್ಲಿ ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಈಶ್ವರ್, ನಾರಾಯಣ ಗೋಳಗೋಡು, ಲಕ್ಷ್ಮಣ್ ಸಾಗರ್, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ಉಷಾ ಎನ್., ಸೈಯದ್ ಜಾಕೀರ್, ಕೆ.ಸಿದ್ದಪ್ಪ, ಅನ್ವರ್ ಭಾಷಾ, ಡಿ.ದಿನೇಶ್, ಮಹ್ಮದ್ ಖಾಸಿಂ, ಸುಮಂಗಲಾ ರಾಮಕೃಷ್ಣ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next