Advertisement

ಹೊಸ ಅಂಕಪಟ್ಟಿ ಕೊಡಲು ನಿರ್ಧಾರ

12:52 PM Mar 14, 2017 | Team Udayavani |

ಬೆಂಗಳೂರು: ಕಾಗುಣಿತ ದೋಷವಿರುವ ಅಂಕಪಟ್ಟಿಗಳನ್ನು ಹಿಂಪಡೆದು ಹೊಸದಾಗಿ ಮುದ್ರಿಸಿ ಕೊಡಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧಾರ ಕೈಗೊಂಡಿದೆ. ಸೋಮವಾರ ಸೆಂಟ್ರಲ್‌ ಕಾಲೇಜಿನ ಸೆನೆಟ್‌ಹಾಲ್‌ನಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

 ಬೆಂಗಳೂರು ವಿಶ್ವವಿದ್ಯಾಲಯ ಈಗಾಗಲೇ ವಿದ್ಯಾರ್ಥಿಗಳಿಗೆ ನೀಡಲಾಗಿರುವ 2015-16 ಮತ್ತು 2016-17ನೇ ಸಾಲಿನ ಅಂಕಪಟ್ಟಿಗಳಲ್ಲಿ ಕಾಗುಣಿತ ದೋಷ ಕಂಡುಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯ ಎಂಬ ಹೆಸರಿನಲ್ಲಿ “ಐ’ ಅಕ್ಷರ ತಾಂತ್ರಿಕ ದೋಷದಿಂದ ಬಿಟ್ಟು ಹೋಗಿದೆ.

ಇದರಿಂದ ಉದ್ಯೋಗಕ್ಕೆ ಸೇರಲು ಹೋಗುವ ವಿದ್ಯಾರ್ಥಿಗಳಿಗೆ “ಇದು ನಕಲಿ ಅಂಕಪಟ್ಟಿ’ ಎಂದು ವಾಪಸ್‌ ಕಳುಹಿಸುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಆದ್ದರಿಂದ ಈಗಾಗಲೇ ವಿತರಣೆಯಾಗಿರುವ ಸುಮಾರು 5 ಲಕ್ಷ ಅಂಕಪಟ್ಟಿಗಳ ದೋಷ ಸರಿಪಡಿಸಿ ಕೊಡಲು ತೀರ್ಮಾನಿಸಲಾಗಿದೆ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

 ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 10 ವಿದ್ಯಾರ್ಥಿ ನಿಲಯಗಳಲ್ಲಿ  ಮಾಹಿತಿ ಪೂರಕ ಗ್ರಂಥಾಲಯ ಆರಂಭಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕಗಳು, ಸಾಮಾನ್ಯ ಜ್ಞಾನ ಹೆಚ್ಚಿಸುವ ಕೈಪಿಡಿಗಳು, ದಿನ ಪತ್ರಿಕೆಗಳು ಸೇರಿದಂತೆ ವಿವಿಧ ಮಹತ್ವದ ಮಾಹಿತಿ ಪೂರಕ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಇಡುವಂತೆ ಕ್ರಮಕೈಗೊಳ್ಳಲಾಗುವುದು ಎಂದು ವಿವಿಯ ಹಂಗಾಮಿ ಕುಲಪತಿ ಜಗದೀಶ್‌ ಪ್ರಕಾಶ್‌ ತಿಳಿಸಿದರು.

ವಿವಿಯ ಮೌಲ್ಯಮಾಪನದಲ್ಲಿ ದೋಷವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನದ ನಂತರ ಯಾವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆಯೋ ಅಂತವರಿಗೆ ಮರುಮೌಲ್ಯಮಾಪನದ ಶುಲ್ಕವನ್ನು ವಾಪಸ್‌ ನೀಡಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

Advertisement

ಮರು ಮೌಲ್ಯಮಾಪನಕ್ಕೆ ಒತ್ತಾಯ
ಬೆಂಗಳೂರು:
ಪದವಿ ಪರೀಕ್ಷೆಗೆ ಸಂಬಂಧಿಸಿದಂತೆ ಮೌಲ್ಯಮಾಪನ ದೋಷದಿಂದ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಈ ಬಾರಿಯ ಫ‌ಲಿತಾಂಶ ತಡೆಹಿಡಿದು ಉಚಿತವಾಗಿ ಮರು ಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ನಡೆಸಿದರು.

ಸೆಂಟ್ರಲ್‌ಕಾಲೇಜಿನ ಜ್ಞಾನಜ್ಯೋತಿ ಸಭಾಂ ಗಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, “ಬೆಂಗಳೂರು ವಿವಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಬಿಕಾಂ 3ನೇ ಸೆಮಿಸ್ಟರ್‌ನ ಕಾರ್ಪೊರೇಟ್‌ ಅಕೌಂಟಿಂಗ್‌, ಬಿಬಿಎ 3ನೇ ಸೆಮಿಸ್ಟರ್‌ ಕಾರ್ಪೊರೇಟರ್‌ ಎನ್ವರ್ನ್ಮೆಂಟ್‌ ಮತ್ತು ಬಿಜಿನೆಸ್‌ ಎಥಿಕ್ಸ್‌ ವಿಷಯಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಬರೆದಿದ್ದರು, ಕೇವಲ ಒಂದಂಕಿ ನೀಡಲಾಗಿದೆ. ಇದರಿಂದ ಬಹುಪಾಲು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮೌಲ್ಯಮಾಪನ ಸರಿಯಾಗಿ ಮಾಡದೇ ಇರುವುದೇ ಇದಕ್ಕೆ ಕಾರಣ,” ಎಂದು ಆರೋಪಿಸಿದರು. 

ಸಮಸ್ಯೆ ಇತ್ಯರ್ಥ ಭರವಸೆ: ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಜಗದೀಶ್‌ ಪ್ರಕಾಶ್‌, ಯಾವ ಕಾಲೇಜಿನಲ್ಲಿ ಸಮಸ್ಯೆ ಉಂಟಾಗಿದೆಯೋ ಆಯಾ ಕಾಲೇಜಿಗೆ ಖುದ್ದಾಗಿ ಬಂದು, ಪರಿಶೀಲನೆ ನಡೆಸುತ್ತೇನೆ. ಮೌಲ್ಯಮಾಪನದ ಗೊಂದಲ ನಿವಾರಣೆಗಾಗಿ ಉಚಿತವಾಗಿ ಮರುಮೌಲ್ಯಮಾಪನ ಮಾಡಿಸಿ, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next