Advertisement

Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್‌ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು

02:05 AM Dec 13, 2024 | Team Udayavani |

ಮಂಗಳೂರು: ಭೌತಿಕ ಅಂಕಪಟ್ಟಿ ಸಿಗದೆ, “ಡಿಜಿಟಲ್‌’ ಅಂಕಪಟ್ಟಿ ಮಾತ್ರ ಲಭ್ಯವಾಗುತ್ತಿರುವುದರಿಂದ ಪದವಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅಂಕ, ಹೆಸರು ಮತ್ತಿತರ ಹಲವು ಅಂಶಗಳು ತಪ್ಪಾಗಿ ನಮೂದಾಗಿರುವುದರಿಂದ ಕೋರ್ಸ್‌ ಮುಗಿಸಿದ ಬಳಿಕ ಅಂಕಪಟ್ಟಿ ಸರಿಪಡಿಸುವುದೇ ವಿದ್ಯಾರ್ಥಿಗಳಿಗೆ ಬಲುದೊಡ್ಡ ತಲೆನೋವಾಗಿದೆ.

Advertisement

ಉನ್ನತ ಶಿಕ್ಷಣ ಇಲಾಖೆಯು 2021-22ರಲ್ಲಿ ಯುಯುಸಿಎಂಎಸ್‌ ಜಾರಿಗೆ ತಂದ ಬಳಿಕ ಪ್ರತೀ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿ ಪಡೆದ ಅಂಕವನ್ನು ಯುಯುಸಿಎಂಎಸ್‌ನಲ್ಲಿಯೇ ನಮೂದಿಸಲಾಗುತ್ತಿದೆ.

ವಿದ್ಯಾರ್ಥಿ ಲಾಗಿನ್‌ ಮೂಲಕ ಪರೀಕ್ಷಾ ಸಂಖ್ಯೆ ನಮೂದಿಸಿ ಆಯಾ ವರ್ಷದ ಡಿಜಿಟಲ್‌ ಅಂಕಪಟ್ಟಿ ಪಡೆಯಬಹುದು.
ಉನ್ನತ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ಯುಯುಸಿಎಂಎಸ್‌ ತಂತ್ರಾಂಶದಲ್ಲಿ ಇರುವ ತಾಂತ್ರಿಕ ತೊಂದರೆಯಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯೇ 2 ವರ್ಷಗಳಿಂದ ಸಂಕಟ ಉಂಟುಮಾಡುತ್ತಿದೆ. ಪ್ರತೀ ಸೆಮಿಸ್ಟರ್‌ನಲ್ಲೂ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿದ್ದ ಕೆಲವು ವಿದ್ಯಾರ್ಥಿಗಳು ಈಗ ಅಂತಿಮ ಅಂಕಪಟ್ಟಿ ಡೌನ್‌ಲೋಡ್‌ ಮಾಡಿದರೆ ಅಂಕಗಳು ಗಾಬರಿ ಹುಟ್ಟಿಸುವಂತಿವೆ. ಕೆಲವು ಸೆಮಿಸ್ಟರ್‌ಗಳಲ್ಲಿ “ಅನುತ್ತೀರ್ಣ’ ಎಂದೂ ತೋರಿಸುತ್ತಿದೆ. ಅಂಕ, ಹೆಸರು, ಸಂಖ್ಯೆ ಇತ್ಯಾದಿ ಎಲ್ಲೆಡೆ ಸರಿ ಇರುವುದಕ್ಕಿಂತ ದೋಷಗಳೇ ಹೆಚ್ಚು ಎಂಬಂತಿದೆ.

ಅಂಕಪಟ್ಟಿ “ಬೇಕು-ಬೇಡ’ದ ಚರ್ಚೆ!
ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿ ಗಳು ಮುಂದಿನ ಉದ್ಯೋಗ ಅಥವಾ ಶಿಕ್ಷಣ ಆಧರಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಈ ಡಿಜಿಟಲ್‌ ಅಂಕಪಟ್ಟಿಯ ಪ್ರಮಾದಗಳು ಮತ್ತು ಭೌತಿಕ ಅಂಕಪಟ್ಟಿಯ ಅಲಭ್ಯತೆ ತ್ರಿಶಂಕು ಸ್ಥಿತಿ ತಂದಿಟ್ಟಿದೆ. ನಾವು ಉದ್ಯೋಗದಿಂದ ವಂಚಿತರಾಗುವ ಅಪಾಯವಿದೆ ಎಂಬುದು ವಿದ್ಯಾರ್ಥಿಗಳ ವಾದ.”ಡಿಜಿ ಲಾಕರ್‌ನ ಡಿಜಿಟಲ್‌ ಅಂಕಪಟ್ಟಿಗೆ ದೇಶದೆಲ್ಲೆಡೆ ಮಾನ್ಯತೆ ಇದೆ. ಕೇಂದ್ರ ಸರಕಾರವೇ ಇದಕ್ಕೆ ಅನುಮೋದನೆ ನೀಡಿದೆ. ಹೀಗಾಗಿ ಭೌತಿಕ ಅಂಕಪಟ್ಟಿ ಅಗತ್ಯವಿಲ್ಲ’ ಎನ್ನುವುದು ವಿ.ವಿ. ಪ್ರತಿವಾದ.

“ವಿ.ವಿ.ಯಿಂದ ಅಂಕಪಟ್ಟಿ ಡಿಜಿಟಲ್‌ ರೂಪದಲ್ಲಿ ನೀಡ ಲಾಗುತ್ತಿದೆ. ಡಿಜಿ ಲಾಕರ್‌ ಮೂಲಕ ಸಿಗುವ ಅಂಕಪಟ್ಟಿಯಲ್ಲಿ ಹಲವು ದೋಷಗಳಿವೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳ ಅಂಕಗಳು ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ನಮೂದಾಗದೆ ಇರುವುದು ಕೂಡ ಗೊಂದಲ ಹುಟ್ಟು ಹಾಕಿದೆ’ ಎನ್ನುವುದು ಪ್ರಾಧ್ಯಾಪಕರೊಬ್ಬರ ಅಭಿಪ್ರಾಯ.

Advertisement

ಮುದ್ರಿತ ಅಂಕಪಟ್ಟಿಗೆ “ಡೇಟಾ’ ಎಡವಟ್ಟು!
ಮುದ್ರಿತ ಅಂಕಪಟ್ಟಿಯ ಬದಲು ಡಿಜಿಲಾಕರ್‌ನಲ್ಲಿ ಡಿಜಿಟಲ್‌ ಅಂಕಪಟ್ಟಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವುದನ್ನು ಮನಗಂಡ ಸ್ಪೀಕರ್‌ ಯು.ಟಿ. ಖಾದರ್‌ ಇತ್ತೀಚೆಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿದ್ದರು. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಡಿಜಿಲಾಕರ್‌ ಅಂಕಪಟ್ಟಿಯ ಜತೆಗೆ ಅಗತ್ಯವಿರುವವರಿಗೆ ಭೌತಿಕ ಅಂಕಪಟ್ಟಿಯನ್ನೂ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಆ ಪ್ರಕಾರ ಅಂಕಪಟ್ಟಿ ಮುದ್ರಿಸಲು ಈಗ ಮಂಗಳೂರು ವಿ.ವಿ. ಸಿದ್ಧವಿದೆ. ಡೌನ್‌ಲೋಡ್‌ ಅವಕಾಶವನ್ನೂ ನೀಡಲಾಗಿದೆ. ಆದರೆ ಯುಯುಸಿಎಂಎಸ್‌ ಡೇಟಾ ಸರಿಯಾಗಿ ವಿ.ವಿ.ಗೆ ದೊರಕದೆ ಸಮಸ್ಯೆಯಾಗುತ್ತಿದೆ. ಕೆಲವರ ಅಂಕ, ಹೆಸರು, ವಿಳಾಸ ಮತ್ತಿತರ ವಿವರಗಳು ತಪ್ಪಾಗಿ ಇರುವ ಕಾರಣ ಇದನ್ನು ಪರಿಶೀಲಿಸಿ ಬಳಿಕ ಭೌತಿಕ ಅಂಕಪಟ್ಟಿ ನೀಡುವುದು ವಿ.ವಿ.ಯ ಚಿಂತನೆ.

ಅಂಕಪಟ್ಟಿ “ನಮೂನೆ’ಗೆ ಆಕ್ಷೇಪ!
ಡಿಜಿಲಾಕರ್‌ನಲ್ಲಿ ಯುಯುಸಿಎಂಎಸ್‌ ಫಾರ್ಮಾಟ್‌ನಂತೆ ಅಂಕಪಟ್ಟಿ ನಮೂನೆ ಇದೆ. ರಾಜ್ಯಕ್ಕೆ ಇದು ಒಂದೇ ಸ್ವರೂಪದ್ದು. ಈ ಹಿಂದೆ ಮಂಗಳೂರು ವಿ.ವಿ.ಯ ಅಂಕ ಪಟ್ಟಿ ಬೇರೆ ಸ್ವರೂಪದಲ್ಲಿತ್ತು. ಇದು ಡಿಜಿಟಲ್‌ ಅಂಕಪಟ್ಟಿಗೆ ಸರಿಹೊಂದುತ್ತಿಲ್ಲ. ಕೆಲವೆಡೆ ಡಿಜಿಟಲ್‌ ಅಂಕಪಟ್ಟಿ ಯನ್ನು ಪರಿಗಣಿಸುತ್ತಿಲ್ಲ ಎಂಬ ವಿದ್ಯಾರ್ಥಿಗಳ ದೂರನ್ನು ವಿ.ವಿ. ಉನ್ನತ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದೆ.

ಕಳೆದ 2 ವರ್ಷಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮುದ್ರಣ ಮಾಡಿ ಕೊಡಲು ಅನುಮತಿ ಇರಲಿಲ್ಲ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯ ಪ್ರಕಾರ ಭೌತಿಕ ಅಂಕಪಟ್ಟಿ ನೀಡುವ ಸಂಬಂಧ ನಿರ್ದೇಶನ ಇದೆ. ಸದ್ಯ ಯುಯುಸಿಎಂಎಸ್‌ನಿಂದ ಸಮರ್ಪಕವಾಗಿ ಡೇಟಾ ಡೌನ್‌ಲೋಡ್‌ ಮಾಡುವಂತಹ ಪ್ರಕ್ರಿಯೆ ಒಂದು ವಾರದಿಂದೀಚೆಗೆ ನಡೆಯುತ್ತಿದೆ. ಪರಿಶೀಲನೆ ನಡೆಸಿದ ಬಳಿಕ ಅಂಕಪಟ್ಟಿ ನೀಡಲು ವಿ.ವಿ. ನಿರ್ಧರಿಸಿದೆ.
– ಎಚ್‌. ದೇವೇಂದ್ರಪ್ಪ, ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next