ಧಾರವಾಡ: 68ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿಯವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಅಂದು ಬೆಳಗ್ಗೆ 7:30ಗಂಟೆಗೆ ಎಲ್ಲ ಶಾಲೆ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ನೌಕರರು ಬೆಳಗ್ಗೆ 8:00ಗಂಟೆಗೆ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಬೇಕು.
ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡುವರು. ಪೊಲೀಸ್, ಗೃಹರಕ್ಷಕ ದಳ, ಎನ್ ಸಿಸಿ, ಭಾರತ ಸೇವಾ ದಳ, ಸ್ಕೌಟ್ಸ್ ,ಗೈಡ್ಸ್ ಮತ್ತಿತರ ತುಕಡಿಗಳಿಂದ ಪಥ ಸಂಚಲನ ನಡೆಸಲು ಜ.21ರಿಂದ ತರಬೇತಿ ನಡೆಸುವದು.
ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನ. ಸರಕಾರಿ ಕಚೇರಿ, ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಸೇರಿದಂತೆ ಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಜಿಪಂ ಉಪಕಾರ್ಯದರ್ಶಿ ವೈ.ಡಿ. ಕುನ್ನಿಭಾವಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ಮುನಿರಾಜು, ತಹಶೀಲ್ದಾರ ಆರ್.ವಿ. ಕಟ್ಟಿ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಾರದಾ ಕೋಲಕಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಸ್.ಕೆ.ರಂಗಣ್ಣವರ್ ಸ್ವಾಗತಿಸಿ, ನಿರೂಪಿಸಿದರು.