ಧಾರವಾಡ: ಆಧುನಿಕತೆ ಭರಾಟೆಯಲ್ಲಿರುವ ಯುವ ಪೀಳಿಗೆ ಮಹಾತ್ಮಾ ಗಾಂಧೀಜಿ ಅಂದ್ರೆ ಯಾರು? ಎನ್ನುವ ದಿನಗಳು ದೂರವಿಲ್ಲ. ಖಾದಿ ಬಟ್ಟೆ, ಸ್ವದೇಶಿ ವಸ್ತುಗಳ ಬಳಕೆ ಸೇರಿದಂತೆ ಗಾಂಧೀಜಿಯವರ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಧಾರವಾಡ ತಾಲೂಕು ಸೇವಾ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಇಂದು ಯಾರಿಗೂ ಬೇಕಾಗಿಲ್ಲ. ಎಲ್ಲರೂ ತಮ್ಮ ಮಕ್ಕಳನ್ನು ಡಾಕ್ಟರ್ ಮತ್ತು ಎಂಜಿನೀಯರ್ ಮಾಡಲು ಹೊರಟಿದ್ದಾರೆಯೇ ಹೊರತು ಮನುಷ್ಯರನ್ನಾಗಿ ಮಾಡಲು ಯಾರೂ ಸಿದ್ಧರಿಲ್ಲ. ಶಿಸ್ತು, ದೇಶಪ್ರೇಮದ ವಿಚಾರಗಳು ಇಂದು ಬೇರೆ ಸ್ವರೂಪವನ್ನೇ ಪಡೆದುಕೊಂಡಿವೆ.
ಎಲ್ಲರೂ ಬರೀ ನಾಟಕ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದು ವಿಷಾದಿಸಿದರು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಏನೇನೋ ಮಾಡುತ್ತಿದ್ದರೆ, ಅವರನ್ನು ಆಯ್ಕೆ ಮಾಡುವ ಜನರು ಕೂಡ ತಪ್ಪು ದಾರಿ ಹಿಡಿದು ಆಯ್ಕೆ ಮಾಡುತ್ತಾರೆ. ಸಮಾಜ ಮುನ್ನಡೆಸುವ ಯಾರಲ್ಲಿಯೂ ನೈತಿಕತೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಗಾಂಧೀಜಿ ತತ್ವಗಳು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ ಎಂದರು.
ಖಾದಿ ನಿರ್ಲಕ್ಷ: ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಎಲ್ಲರೂ ದೊಡ್ಡ ದೊಡ್ಡ ಕಂಪನಿಗಳನ್ನು ಬೆಳೆಸಲು ಅಗತ್ಯವಾದ ಭೂಮಿ, ನೀರು, ವಿದ್ಯುತ್ ಕೊಡಲು ಯತ್ನಿಸುತ್ತಿದ್ದಾರೆ. ಅದು ರಾಜ್ಯ, ಕೇಂದ್ರ ಸರ್ಕಾರವಿರಲಿ, ರಾಜಕಾರಣಿಗಳಿರಲಿ, ಅಧಿಕಾರಿಗಳಿರಲಿ, ಎಲ್ಲರಲ್ಲೂ ದೊಡ್ಡ ಕೈಗಾರಿಕೆ ಬೆಳೆಸುವ ಆಸಕ್ತಿ ಇದೆ.
ಆದರೆ ಖಾದಿ ಗ್ರಾಮೋದ್ಯೋಗ ಮತ್ತು ಕೈಮಗ್ಗಗಳ ಅಭಿವೃದ್ಧಿ ಮತ್ತು ಅದನ್ನು ಅವಲಂಬಿಸಿ ಜೀವನ ನಡೆಸುವವರ ಬಗ್ಗೆ ಯಾರೂ ಕಾಳಜಿ ತೋರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸ್ವಾತಂತ್ರ ಹೋರಾಟಗಾರ ಶತಾಯುಷಿ ಶಿವಮೂರ್ತಯ್ಯ ಕಬ್ಬಿಣಕಂತಿಮಠ ಮಾತನಾಡಿ, ಖಾದಿ ಅಂದ್ರೆ ಸ್ವರ್ಗಕ್ಕೆ ಹಾದಿ ಇದ್ದಂತೆ. ನಾನು ಇಂದು ನೂರು ವರ್ಷ ಆರೋಗ್ಯವಾಗಿ ಇರುವುದಕ್ಕೆ ಖಾದಿ ಬಟ್ಟೆ ಧರಿಸುವುದೇ ಕಾರಣ. ನನ್ನ ಆರೋಗ್ಯದ ಗುಟ್ಟು ಖಾದಿ ಮತ್ತು ಗಾಂಧಿ ತತ್ವಗಳೇ ಆಗಿವೆ ಎಂದರು.
ದೊರೆಸ್ವಾಮಿ ಗೈರು: ಸ್ವಾತಂತ್ರ ಹೋರಾಟಗಾರ ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಬೇಕಿತ್ತು. ಅನಾರೋಗ್ಯ ನಿಮಿತ್ತ ಅವರು ಗೈರು ಹಾಜರಿದ್ದರು. ಆದರೆ ಕಾರ್ಯಕ್ರಮದುದ್ದಕ್ಕೂ ಅವರನ್ನು ಎಲ್ಲ ಮುಖಂಡರು ನೆನೆದರು.
ಸನ್ಮಾನ: ಖಾದಿ ಮತ್ತು ಗಾಂಧಿ ತತ್ವ ಪ್ರಸಾರದಲ್ಲಿ ತೊಡಗಿದ್ದ ಅನೇಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಿ.ಜಿ. ಶಿಂಗಟೇರಿ, ಬಿ.ಟಿ. ತಲವಾಯಿ, ಬಿ.ಜೆ. ನಾಯಕ್, ಎ.ಎಂ. ಪದಕಿ, ಗಂಗಯ್ಯ ಹವಾಲ್ದಾರಮಠ, ಬಾಬು ಬಡಿಗೇರ, ಜಿ.ಎಂ. ಕುಲಕರ್ಣಿ, ರಾಮು ಪತ್ತಾರ, ಕಮರುನ್ನಿಸಾ ಟಿನ್ನಿವಾಲೆ, ಸಾವಕ್ಕ ಬಂಡರಗಟ್ಟಿ, ಸಂಕವ್ವ ಶೀಲವಂತರ ಮತ್ತು ಎಂ.ಎಸ್. ರೋಣಿ ಅವರನ್ನು ಗೌರವಿಸಲಾಯಿತು. ಕೃಷ್ಣಾ ಜೋಷಿ ನಿರೂಪಿಸಿದರು. ನೇತ್ರತಜ್ಞ ಡಾ| ಎಂ.ಎಂ. ಜೋಷಿ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ| ಕೆ.ಎಸ್. ಭಸೆ, ಎನ್.ಕೆ. ಕಾಗಿನೆಲ್ಲಿ ಮುಂತಾದವರಿದ್ದರು.