ಕುಂದಗೋಳ: ಡೈರಿ ಹಗರಣಗಳ ಮಧ್ಯೆ ರೈತರು ಬಡವಾಗುತ್ತಿದ್ದಾರೆ. ಇದನ್ನು ಬಲವಾಗಿ ಖಂಡಿಸಿ ಜೆಡಿಎಸ್ ಪಕ್ಷದಿಂದ ಮಾ.9ರಂದು ಬೆಳಗ್ಗೆ 10ಕ್ಕೆ ಬೃಹತ್ ಡೈರಿ ಚಳವಳಿ ನಡೆಸಲಾಗುವುದು ಎಂದು ಮಾಜಿ ಶಾಸಕ ಎಂ.ಎಸ್. ಅಕ್ಕಿ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಬರದಿಂದ ರೈತರು ತತ್ತರಿಸುತ್ತಿರುವಾಗ ಅವರ ಕಷ್ಟಗಳಿಗೆ ಸ್ಪಂದಿಸುವುದು ಬಿಟ್ಟು ಆ ಡೈರಿ, ಈ ಡೈರಿ ಎಂದು ಆರೋಪದ ಹೇಳಿಕೆ ನೀಡುತ್ತಿರುವುದರಿಂದ ಗಂಡ-ಹೆಂಡರ ನಡುವೆ ಕೂಸು ಬಡವಾದಂತೆ ರಾಜ್ಯದ ಜನರ ಸ್ಥಿತಿಯಾಗಿದೆ ಎಂದರು.
ತಾಲೂಕಿನ 14 ಹಳ್ಳಿಗಳಿಗೆ ನೀರು ಪೂರೈಸುವ ಬಹುಗ್ರಾಮ ಯೋಜನೆಯ ಪೈಪ್‌ಲೈನ್ ಗಳು ಕಳಪೆಯಾಗಿದ್ದರಿಂದ ಗ್ರಾಮೀಣ ಜನತೆ ಪರದಾಡುವಂತಾಗಿದೆ. ತಾಲೂಕಿನ ಈ ಹಳ್ಳಿಗಳಿಗೆ ಕಳೆದ 10 ದಿನಗಳಿಂದ ನೀರಿನ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು ತೆರೆದಿರುವ ಮೇವು ಬ್ಯಾಂಕ್‌ಗಳಲ್ಲಿ ಗುಣಮಟ್ಟದ ಮೇವು ಇಲ್ಲ.
ಕೂಡಲೇ ರೈತರಿಗ ಉಚಿತವಾಗಿ ಗುಣಮಟ್ಟದ ಮೇವು ವಿತರಿಸಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ಭಾಗ್ಯದ ಯೋಜನೆಗಳು ವಿಫಲವಾಗಿವೆ. ತಾಲೂಕಿನ ಬಡವರಿಗೆ ಅಂತ್ಯ ಸಂಸ್ಕಾರಕ್ಕೆ ನೀಡುವ 5 ಸಾವಿರ ರೂ. ನೆರವು ಕಳೆದ 6-7 ತಿಂಗಳುಗಳಿಂದ ಯಾರಿಗೂ ಲಭ್ಯವಾಗಿಲ್ಲ. ಕಚೇರಿಗೆ ಅಲೆದಾಡಿದರೂ ಹಣ ವಿತರಿಸುತ್ತಿಲ್ಲ.
ತಾಲೂಕಿನ ಗುಡಗೇರಿ-ಗೌಡಗೇರಿ ರಸ್ತೆ ಕಾಮಗಾರಿ ಮುಗಿದು ತಿಂಗಳೊಳಗಾಗಿ ಹಾಳಾಗಿದೆ ಎಂದು ಆರೋಪಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ರುದ್ರಪ್ಪ ಗಾಣಗೇರ, ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ, ವಾ.ಬಿ. ಬಿಳೆಬಾಳ, ರಮೇಶ ಕಮತದ, ಶಂಕರಗೌಡ ದೊಡ್ಡಮನಿ, ಶೇಖಪ್ಪ ಹರಕುಣಿ, ವೆಂಕನಗೌಡ ಪಾಟೀಲ, ಸಿದ್ದಪ್ಪ ಉಳ್ಳಾಗಡ್ಡಿ ಇದ್ದರು.