ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಕರ್ನಾಟಕ ಮುಕುಟಮಣಿ ಇದ್ದಂತೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
“ಏಕ್ ಭಾರತ್ ಶ್ರೇಷ್ಠ ಭಾರತ್’ ಕಲ್ಪನೆಯಡಿ ಕೇಂದ್ರ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯಕ್ಕೆ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮುಕುಟಮಣಿ ಇದ್ದಂತೆ. ದೇಶದಲ್ಲಿ ಇರುವ ಪುರತತ್ವ ಸ್ಮಾರಕಗಳಲ್ಲಿ ಅತಿ ಹೆಚ್ಚು ಕರ್ನಾಟಕದಲ್ಲೇ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಭಾರತ ಒಂದೇ ಭಾರತ, ಶ್ರೇಷ್ಠ ಭಾರತ ಎಂದು ಬಣ್ಣಿಸಿದರು.
ಸಂಸ್ಕೃತಿ, ಕಲೆ, ನಾಟಕ, ಸಾಹಿತ್ಯ, ಸಿನಿಮಾ, ನೃತ್ಯ ಇತ್ಯಾದಿ ಕೇವಲ ಮನೋರಂಜನೆಯಲ್ಲ. ಇದು ಭಾರತೀಯ ಸಂಸ್ಕೃತಿ ಹಾಗೂ ವಿವಿಧತೆಯಲ್ಲಿನ ಏಕತೆಯನ್ನು ಬಿಂಬಿಸುತ್ತದೆ ಎಂದರು. ಕೇಂದ್ರ ಸಂಸ್ಕೃತಿ ಹಾಗೂ ಪರಿಸರ ಇಲಾಖೆ ಸಚಿವ ಡಾ.ಮಹೇಶ್ ಶರ್ಮ ಮಾತನಾಡಿ, ಭಾರದ ಪ್ರತಿ 100 ಕಿ.ಮೀಟರ್‌ಗೆ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ಸಂವೇದನೆ ಬದಲಾಗುತ್ತದೆ.
ಆದರೂ ನಾವೆಲ್ಲರೂ ಭಾರತೀಯರು. ದೇಶದಲ್ಲಿ 3686 ಪುರಾತತ್ವ ಸ್ಮಾರಕಗಳಿವೆ. ಅವುಗಳ ಪೈಕಿ 506 ಸ್ಮಾರಕ ಕರ್ನಾಟಕದಲ್ಲಿದೆ. ಪಟ್ಟದಕಲ್ಲು, ಹಂಪಿ, ಐಹೊಳೆ, ಪಶ್ಚಿಮಘಟ್ಟ, ಬೀದರ್ ಹಾಗೂ ಗುಲ್ಬರ್ಗದ ಕೋಟೆಗಳು ಕರ್ನಾಟಕದ ಕಲೆ ಮತ್ತು ಪರಂಪರೆಯನ್ನು ವಿವರಿಸುತ್ತದೆ ಎಂದು ಹೇಳಿದರು.
ಸಚಿವೆ ಉಮಾಶ್ರೀ ಮಾತನಾಡಿ, ಯುವ ಪೀಳಿಗೆ ಸಂಸ್ಕೃತಿಯ ಬೇರಿನಿಂದ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಜಾತ ಪ್ರಸಾದ್ ಮೊದಲಾವರು ಉಪಸ್ಥಿತರಿದ್ದರು.
ಕನ್ನಡದಲ್ಲಿ ಮಾತನಾಡಿದ ಕೇಂದ್ರ ಸಚಿವ: ಕೇಂದ್ರ ಸಂಸ್ಕೃತಿ ಸಚಿವ ಡಾ. ಮಹೇಶ್ ಶರ್ಮ ಉತ್ತರ ಪ್ರದೇಶದವರಾದರೂ, ಸುಮಾರು ಒಂದುವರೆ ನಿಮಿಷ ಕನ್ನಡದಲ್ಲೇ ಮಾತನಾಡಿದರು. ಕಾರ್ಯಕ್ರಮದ ಉದ್ದೇಶ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಭಿಕರು ಖುಷಿಯಿಂದ ಚಪ್ಪಾಳೆ ತಟ್ಟಿದರು.