Advertisement

ದೇಶದ ಸಾಮರ್ಥ್ಯವು ಕಳೆದ 8 ವರ್ಷಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದೆ : ಜೈಶಂಕರ್

10:00 PM Jun 10, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಪರಿಣಾಮವಾಗಿ ಕಳೆದ 8 ವರ್ಷಗಳಲ್ಲಿ ಜನಪರ ವಿದೇಶಾಂಗ ನೀತಿಯನ್ನು ಭಾರತ ಅನುಷ್ಠಾನಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದರು.

Advertisement

ಬಿಜೆಪಿ ವತಿಯಿಂದ ಏರ್ಪಡಿಸಿದ್ದ “2014ರ ಬಳಿಕ ಭಾರತದ ವಿದೇಶಾಂಗ ನೀತಿ” ಕುರಿತಂತೆ ಅವರು ಮಾತನಾಡಿ, ಬೆಂಗಳೂರು ನಗರವು ಭಾರತಕ್ಕೆ ಉತ್ತಮ ಹೆಸರು ಮತ್ತು ಬ್ರ್ಯಾಂಡಿಂಗ್‍ನಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು. ದೇಶದಲ್ಲಿ ಬೇಗನೆ ಪಾಸ್‍ಪೋರ್ಟ್ ಸಿಗುವಂತೆ ಮಾಡಿದ್ದು ಸೇರಿದಂತೆ ಆದ್ಯತೆಗಳು ಕೂಡ ಬದಲಾಗಿವೆ. ಇದು ಮಹತ್ವದ ಕೊಡುಗೆ ಎಂದು ನುಡಿದರು.

ಹಿಂದೆ ಹಲವು ತಿಂಗಳ ಬಳಿಕ ಪಾಸ್‍ಪೋರ್ಟ್ ಸಿಗುತ್ತಿತ್ತು. ಈಗ ಬೇಗನೆ ಪಾಸ್‍ಪೋರ್ಟ್ ಸಿಗುವಂತಾಗಿದೆ. ಜನರ ನಿಟ್ಟಿನಲ್ಲಿ ನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಧಾನಿ ಇರುವ ಕಾರಣ ಇದೆಲ್ಲ ಸಾಧ್ಯವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಹೊರದೇಶಗಳಿಂದ 70 ಲಕ್ಷ ಜನರನ್ನು ಕರೆತರಲಾಯಿತು. ಮಾಸ್ಕ್, ವೆಂಟಿಲೇಟರ್ ಮತ್ತು ಆಮ್ಲಜನಕ ಕೊರತೆಯ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಲಾಯಿತು. ಉಕ್ರೇನ್ ಯುದ್ಧಕಾಲದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವುದರಲ್ಲೂ ಜನರ ಬಗೆಗಿನ ಕಳಕಳಿ ಇರುವ ನೀತಿಯನ್ನು ನಾವು ಕಾಣಬಹುದು ಎಂದು ವಿಶ್ಲೇಷಿಸಿದರು.

ನೇಪಾಳದಲ್ಲಿ ಭೂಕಂಪನ, ಯೆಮನ್‍ನಲ್ಲಿ ಯುದ್ಧ, ಮೊಜಾಂಬಿಕ್‍ನಲ್ಲಿ ನೆರೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮದಾಗಿತ್ತು ಎಂದ ಅವರು, ಯೋಗವನ್ನು ವಿಶ್ವದಾದ್ಯಂತ ಹಬ್ಬಿಸುವಲ್ಲಿ ಪ್ರಧಾನಿ ಮೋದಿಯವರ ಚಿಂತನೆ ಮಹತ್ವದ ಪಾತ್ರ ವಹಿಸಿದೆ ಎಂದರು.

Advertisement

ಭಾರತದಿಂದ ವಿದೇಶಕ್ಕೆ ಪ್ರವಾಸ ಮತ್ತು ಹೊರದೇಶಗಳಿಂದ ಭಾರತಕ್ಕೆ ಬರಲು ಇದ್ದ ನೀತಿಯನ್ನು ಸರಳಗೊಳಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಿದೆ ಎಂದರು.

ಭಾರತದ ಏಕತೆ, ಸಮಗ್ರತೆ, ರಕ್ಷಣಾ ಕ್ಷೇತ್ರ ಮತ್ತು ಅಭಿವೃದ್ಧಿ ವಿಚಾರದಲ್ಲಿ ಕಳೆದ 8 ವರ್ಷಗಳಲ್ಲಿ ದೊಡ್ಡ ಸಾಧನೆ ಸಾಧ್ಯವಾಗಿದೆ. ನಮ್ಮ ಜನರು ದೇಶ ಮಾತ್ರವಲ್ಲದೆ ಹೊರದೇಶಗಳಲ್ಲೂ ಮಾನ್ಯತೆ ಮತ್ತು ಅಭಿವೃದ್ಧಿ ಸಾಧಿಸಬೇಕೆಂಬ ಚಿಂತನೆ ಕೇಂದ್ರದ ಬಿಜೆಪಿ ಸರಕಾರದ್ದು ಎಂದು ನುಡಿದರು. ಶ್ರೀಲಂಕಾದ ಬಿಕ್ಕಟ್ಟು ಪರಿಹರಿಸುವಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದರು. ಜನಕಲ್ಯಾಣ ಮತ್ತು ಜಗಕಲ್ಯಾಣದ ನಿಟ್ಟಿನಲ್ಲಿ ನಮ್ಮ ಪ್ರಧಾನಿ ಮೋದಿಯವರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ದೇಶದ ಪ್ರತಿಷ್ಠೆ, ಹೊರಜಗತ್ತಿನಲ್ಲಿ ಭಾರತಕ್ಕಿರುವ ಸ್ಥಾನ, ನಮ್ಮ ರಾಷ್ಟ್ರಕ್ಕಿರುವ ಪ್ರಭಾವ, ದೇಶದ ಸಾಮರ್ಥ್ಯವು ಕಳೆದ 8 ವರ್ಷಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದೆ ಎಂದು ವಿವರಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next