Advertisement
ರಾಜ್ಯ ಕಾಂಗ್ರೆಸ್ ಕೂಡ ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರದ ಆಂತರಿಕ ವರದಿಯನ್ನು ಪಡೆದುಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ಮತದಾನದ ನಂತರದ ಆಂತರಿಕ ಸಮೀಕ್ಷೆಯ ವರದಿ ನೀಡಿದ್ದಾರೆಂದು ತಿಳಿದು ಬಂದಿದೆ.
Related Articles
Advertisement
ಈ ಬಾರಿಯ ಚುನಾವಣೆಯಲ್ಲಿಯೂ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ಕಡೆಗೆ ಬಂದಿರುವ ಬಗ್ಗೆ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿಗೆ ಹೆಚ್ಚಿನ ಆದ್ಯತೆ ದೊರೆತಿರುವ ಮಾಹಿತಿ ಇದೆ. ಅದೇ ಕಾರಣಕ್ಕೆ ಲಿಂಗಾಯತ ಸಮುದಾಯದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬಂದಿರುವುದು ಅನುಮಾನ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ, ಲಿಂಗಾಯತ ಸಮುದಾಯದ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಗುಪ್ತಗಾಮಿನಿಯಾಗಿ ಹರಿದು ಬಂದಿರುವ ಸಾಧ್ಯತೆ ಇದೆ. ಅದೇ ಕಾರಣದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಕೆಲ ನಾಯಕರು ವ್ಯಕ್ತಪಡಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ನಾಯಕರು ನೀಡಿರುವ ವರದಿ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಂದ ಹದಿನೈದರಿಂದ ಹದಿನಾರು ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಹದಿನೈದಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಉತ್ತಮ ಫಲಿತಾಂಶ ಬಂದಂತೆ ಎನ್ನುವ ಆಲೋಚನೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
3 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ: ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ನಾಯಕರು ಜೆಡಿಎಸ್‌ನ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳ ಗೆಲುವಿನ ಲೆಕ್ಕಾಚಾರವನ್ನೂ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಏಳು ಕ್ಷೇತ್ರಗಳಲ್ಲಿ ತುಮಕೂರು, ಹಾಸನ ಹಾಗೂ ಶಿವಮೊಗ್ಗ ಸೇರಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸಕಾರಾತ್ಮಕ ವರದಿ ನೀಡಿಲ್ಲ ಎಂದು ತಿಳಿದು ಬಂದಿದೆ.
* ಶಂಕರ ಪಾಗೋಜಿ