Advertisement
ಕೆ.ಆರ್.ನಗರದ ನಾರಾಯಣಗೌಡ, ಭದ್ರಾವತಿಯ ಅಪ್ಪಾಜಿಗೌಡ, ಗುಬ್ಬಿ ಶ್ರೀನಿವಾಸ್, ಹರಿಹರ ಶಿವಶಂಕರ್, ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ ಅವರನ್ನು ಬಿಜೆಪಿಗೆ ಸೆಳೆಯಲು ಈಗಾಗಲೇ ಬಿಜೆಪಿ ಸೇರಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮೂಲಕ ಕಾರ್ಯಾಚರಣೆಗೆ ಇಳಿಯಲಾಗಿದೆ.
Related Articles
Advertisement
ಮತ್ತೂಂದೆಡೆ ಕಾಂಗ್ರೆಸ್ ಪಕ್ಷವು ಸಹ ಜೆಡಿಎಸ್ ಹಾಲಿ ಶಾಸಕರನ್ನು ಸೆಳೆಯಲು ಕಾರ್ಯಾಚರಣೆಯಲ್ಲಿ ತೊಡಗಿದ್ದು , ಸಚಿವರಾದ ಜಮೀರ್ ಅಹಮದ್, ಚೆಲುವರಾಯಸ್ವಾಮಿ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಈಗಾಗಲೇ ಬೆಳಗಾವಿಯ ಗ್ರಾಮಾಂತರ ಭಾಗದ ಪ್ರಭಾವಿ ಮುಖಂಡ ಸೀಮಂತ್ ಪಾಟೀಲ್ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದು, ಹಾಲಿ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಟಿಕೆಟ್ ಕೊಡುವ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಯಾವ ಪಕ್ಷಕ್ಕೆ ಹೋದರೆ ಲಾಭ ಎಂಬ ಗೊಂದಲ ಹಾಗೂ ಲೆಕ್ಕಾಚಾರದಲ್ಲಿ ಜೆಡಿಎಸ್ ಶಾಸಕರು ಮುಳುಗಿದ್ದಾರೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 40 ಸ್ಥಾನ ಗಳಿಸಿತ್ತು. ಈಗಾಗಲೇ ಏಳು ಶಾಸಕರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಇನ್ನೂ ಹತ್ತು ಶಾಸಕರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಗಾಳ ಹಾಕಿದೆ.
ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರಿಗೂ ಮಾಹಿತಿ ಇದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ಹೋಗುವ ಮನಸ್ಸು ಮಾಡಿರುವ ಶಾಸಕರನ್ನು ಕರೆದು ಮಾತನಾಡಿ ಪಕ್ಷದಲ್ಲೇ ಉಳಿಯುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಅವಕಾಶವಿದೆ. ಒಂದೊಮ್ಮೆ ಅದು ಸಾಧ್ಯವಾಗದಿದ್ದರೂ ಜೆಡಿಎಸ್ ಬಿಟ್ಟು ಯಾರೂ ರಾಜ್ಯದಲ್ಲಿ ಅಧಿಕಾರ ರಚಿಸಲು ಸಾಧ್ಯವಿಲ್ಲ. ನಿಮಗೆಲ್ಲಾ ಉತ್ತಮ ಭವಿಷ್ಯವಿದೆ ಎಂದು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
– ಎಸ್.ಲಕ್ಷ್ಮಿನಾರಾಯಣ