Advertisement

ಗರಡಿ ಮನೆಗಳ ಸ್ಥಿತಿ ಶೋಚನೀಯ

06:40 AM Jun 29, 2018 | |

ಬೆಂಗಳೂರು: ರಾಜ ಮಹಾರಾಜರ ಕಾಲದಲ್ಲಿ ಖ್ಯಾತಿ ಪಡೆದಿದ್ದ ಗರಡಿ ಮನೆಗಳು ಇಂದು ದುಃಸ್ಥಿತಿಗೆ ತಲುಪಿವೆ. ರಾಜಾಶ್ರಯವನ್ನು ಪಡೆದಿದ್ದ ಗರಡಿ ಗಳು ಸರ್ಕಾರದ ನೆರವಿಲ್ಲದೆ ಸೊರಗಿ ಹೋಗಿವೆ. ಇವುಗಳ ಜಾಗದಲ್ಲಿ ಮಲ್ಟಿಜಿಮ್‌ಗಳು ತಲೆ ಎತ್ತಿವೆ. ಹೀಗಾಗಿ, ಗರಡಿ ಮನೆ ಸಂಸ್ಕೃತಿ ನಿಧಾನವಾಗಿ ವಿಮುಖವಾಗುತ್ತಿದೆ.

Advertisement

ಸಿಲಿಕಾನ್‌ ಸಿಟಿ ಬೆಂಗಳೂರು, ಗರಡಿ ಮನೆಗಳಿಗೆ ಹೆಸರುವಾಸಿ. ಬಳೆಪೇಟೆ, ನಗರ್ತ ಪೇಟೆ, ಕಬ್ಬನ್‌ ಪೇಟೆ,
ರಾಣಾಸಿಂಗ್‌ ಪೇಟೆ, ಪೋಲಿಸ್‌ ರಸ್ತೆ, ಶೇಷಾದ್ರಿಪುರ, ಚಿಕ್ಕಪೇಟೆ, ಶಿವಾಜಿ ನಗರ ಸೇರಿ ಇದರ ಆಸುಪಾಸಿನ ಪ್ರದೇಶಗಳು ಘಟಾನುಘಟಿ ಪೈಲ್ವಾನರನ್ನು ತಯಾರು ಮಾಡುವ ಕೇಂದ್ರಗಳಾಗಿದ್ದವು.

ಪೈಲ್ವಾನ್‌ ದಾಸಪ್ಪ, ದೊಡ್ಡಸ್ವಾಮಿ,ಹುಚ್ಚಪ್ಪ, ಕಾಶ್ಮೀರಿ ಮೆಹಬೂಬ್‌ ಅವರಂತಹ ಘಟಾನುಘಟಿಗಳು ಕುಸ್ತಿಗೆ ಹೆಸರುವಾಸಿ ಆಗಿದ್ದರು. ಅಂದಿನ ಮೈಸೂರು ಮಹಾರಾಜರ ರಾಜಾಶ್ರಯ ಪಡೆದಿದ್ದ, ಚಿಕ್ಕಪೇಟೆ, ಬಳಪೇಟೆ, ತಿಂಗಳರ ಪೇಟೆಯ ಗರಡಿಗಳಲ್ಲಿ ಹೆಸರಾಂತ ಪೈಲ್ವಾನರು ನೆಲೆಸಿ ದ್ದರು. ಸ್ವತಃ ರಾಜರೇ ಗರಡಿಗಳಿಗೆ ಬಂದು ಪೈಲ್ವಾನರ ಯೋಗಕ್ಷೇಮವನ್ನು ವಿಚಾರಸುತ್ತಿದ್ದ ನಿದರ್ಶನಗಳಿವೆ.

ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಈಗಲೂ ಹತ್ತಕ್ಕೂ ಅಧಿಕ ಗರಡಿ ಮನೆಗಳಿವೆ. ಇವುಗಳಲ್ಲಿ ಮುನ್ನೂರು ವರ್ಷದಷ್ಟು ಹಳೆಯದಾದ ಗರಡಿ ಮನೆ ಕೂಡ ಸೇರಿದೆ. ಬಳೆಪೇಟೆ ಸಂದಿಯಲ್ಲಿ ಪ್ರವೇಶಿಸಿದರೆ ಬಳೆಗರಡಿ ಮನೆ ಸಿಗುತ್ತದೆ. ಇದು, ಬೆಂಗಳೂರಿನಲ್ಲಿಯೆ ಇರುವ ಹಳೆಕಾಲದ ಗರಡಿ ಮನೆ. ಎಚ್‌.ಎ.ಎಲ್‌ ನಿವೃತ್ತ ಉದ್ಯೋಗಿ ಆಗಿರುವ ಪೈಲ್ವಾನ್‌ ರೇವಣ್ಣ ಇದರ ಉಸ್ತುವಾರಿಯನ್ನು ಈಗ ನೋಡಿಕೊಳ್ಳುತ್ತಿದ್ದಾರೆ.

ಐತಿಹಾಸಿಕತೆಯನ್ನು ಹೊಂದಿರುವ ಈ ಗರಡಿ ಮನೆಯಲ್ಲಿ ಪೈಲ್ವಾನರು ಬಳಸುತ್ತಿದ್ದ ಪರಿಕರಗಳ ಜತೆಗೆ ಮಲ್ಟಿ ಜಿಮ್‌ ಪರಿಕರಗಳೂ ಕಾಲಿರಿಸಿವೆ. ಅಲ್ಲದೆ, ಮಲ್ಟಿಜಿಮ್‌ ಬೋರ್ಡ್‌ ಕೂಡ ಗರಡಿ ಮನೆಯ ಗೋಡೆ ಏರಿದೆ. ಕಂಪ್ಯೂಟರ್‌
ಯುಗದಲ್ಲಿ ಗರಡಿ ಮನೆಗಳು ಹಳೇ ಸಂಪ್ರದಾಯವನ್ನು ಕಳೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಹಳೆ ಕಾಲದ ಗರಡಿ ಮನೆಯೊಳಗಿನ ಪರಿಕರಗಳ ಜತೆಗೆ,ಮಲ್ಟಿ ಜಿಮ್‌ ಸಾಧನಗಳನ್ನು ಇರಿಸಲಾಗಿದೆ ಎಂದು ಪೈಲ್ವಾನ್‌ ರೇವಣ್ಣ ಹೇಳುತ್ತಾರೆ.

Advertisement

ತಿಂಗಳರ ಪೇಟೆಯಲ್ಲಿರುವ ಕುಂಜಣ್ಣ ಗರಡಿ, ರಾಣಿ ಪೇಟೆಯ ಬೀರ್‌ ರೇವಣ್ಣ ಗರಡಿ, ಶೇಷಾದ್ರಿಪುರದ ಮಾರುತಿ ಗರಡಿ, ಕಬ್ಬನ್‌ಪೇಟೆಯ ದೊಡ್ಡ ಗರಡಿ ಮತ್ತು ಚಿಕ್ಕಗರಡಿ ಇಂದಿಗೂ ತನ್ನ ಪಳೆಯುಳಿಕೆಯನ್ನು ಉಳಿಸಿಕೊಂಡಿವೆ. ಆದರೆ, ಹಿಂದಿದ್ದಷ್ಟು ಪೈಲ್ವಾನರ ಸಂಖ್ಯೆ ಈಗಿಲ್ಲ. ಒಂದು ಕಾಲದಲ್ಲಿ ಈ ಗರಡಿ ಮನೆಗಳಲ್ಲಿ 50 ರಿಂದ ನೂರು ಪೈಲ್ವಾನರು ಇರುತ್ತಿದ್ದರು. ಆದರೆ, ಈಗ 7 ರಿಂದ 8 ಪೈಲ್ವಾನರನ್ನು ಕಾಣಬಹುದಾಗಿದೆ.

ಗರಡಿಗಳ ದುಃಸ್ಥಿತಿ: ಚಿಕ್ಕಪೇಟೆಯ ಖಲೀಲ್‌ ಬಿಲ್ಡಿಂಗ್‌ ಸಮೀಪ ಈ ಹಿಂದೆ ಒಂದು ಗರಡಿ ಮನೆಯಿತ್ತು.ಆದರೆ, ಇದು ಶಿಥಿಲಗೊಂಡ ಹಿನ್ನೆಲೆಯಲ್ಲಿ ನೆಲೆಸಮ ಮಾಡಲಾಗಿದೆ. ಈ ಗರಡಿ ಮನೆ ಕೂಡ ಹೆಸರಾಂತ ಕುಸ್ತಿ ಪೈಲ್ವಾನರನ್ನು ಕೊಡುಗೆಯಾಗಿ ನೀಡಿತ್ತು. ಆದರೆ, ಸರ್ಕಾರದ ಆಶ್ರಯ ಇಲ್ಲದೆ ಮತ್ತು ಆರ್ಥಿಕ ಸಹಾಯವಿಲ್ಲದೆ ಇದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಕೆಲವು ಗರಡಿ ಮನೆಗಳನ್ನು ಆರ್ಥಿಕ ಮುಗ್ಗಟ್ಟಿನಿಂದಾಗಿ ನೋಡಿಕೊಳ್ಳುವವರೇ
ಇಲ್ಲವಾಗಿದ್ದಾರೆ. ಇವುಗಳಿಗೆ ಸರ್ಕಾರದ ಆರ್ಥಿಕ ಸಹಾಯಬೇಕಾಗಿದೆ ಎಂದು ಬಳೆಪೇಟೆಯ ಯುವ ಪೈಲ್ವಾನ್‌ ದರ್ಶನ ಹೇಳುತ್ತಾರೆ.

ಮಲ್ಟಿಜಿಮ್‌ ಆಕರ್ಷಣೆ: ಇತ್ತೀಚಿನ ದಿನಗಳಲ್ಲಿ ಗರಡಿ ಮನೆ ಸಂಸ್ಕೃತಿ ಮರೆಯಾಗುತ್ತಿದ್ದು, ಆ ಜಾಗದಲ್ಲಿ ಮಲ್ಟಿಜಿಮ್‌ಗಳು ತಲೆ ಎತ್ತಿವೆ. ಇವು ಯುವ ಜನರನ್ನು ಹೆಚ್ಚು ಆಕರ್ಷಿಸುತ್ತಿರುವುದರಿಂದ ಗರಡಿ ಮನೆಯೊಳಗೆ ಕಸರತ್ತು ಮಾಡುವರ ಸಂಖ್ಯೆ ದಿನೇದಿನೆ ಕಡಿಮೆಯಾಗಿದೆ. ಕೆಂಪು ಮಣ್ಣಿನಲ್ಲಿ ಕಸರತ್ತು ಆರಂಭವಾಗುತ್ತಿದ್ದ ಗರಡಿ ಮನೆಗಳು ಈಗ ಹಳೆಯ ಕಾಲದ್ದಾಗಿವೆ. ಹೀಗಾಗಿ, ಇವು ದುಃಸ್ಥಿತಿಯಲ್ಲಿದ್ದು, ಯುವ ಜನರು ಆಧುನಿಕ ಉಪಕರಣಗಳನ್ನು ಹೊಂದಿರುವ ಜಿಮ್‌ನತ್ತ ಮುಖ ಮಾಡಿದ್ದಾರೆ ಎನ್ನುತ್ತಾರೆ ಪೈಲ್ವಾನ್‌ ಜಯರಾಂ.

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next