Advertisement

Desi Swara: ಪುರಾತನ ನಾಣ್ಯದಿಂದ ಪ್ರವಾಸಿಗರನ್ನು ಆಕರ್ಷಿಸುವ ಸರೋವರಗಳ ನಗರ

11:52 AM Jan 06, 2024 | Team Udayavani |

ಕೆನಡಾದ ಟೊರಂಟೊ ನಗರದಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಸಡ್ಬರೀ ಎನ್ನುವ ನಗರದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ನಾಣ್ಯದ ಪ್ರತಿರೂಪವಿದೆ. ಇದು 1951 ಇಸವಿಯಲ್ಲಿ ಕೆನಡಾದಲ್ಲಿ ಚಲಾವಣೆಗೆ ಬಂದ 5 ಸೆಂಟ್ಸ್‌ (100 ಸೆಂಟ್ಸ್‌ ಎಂದರೆ ಒಂದು ಡಾಲರು) ನಾಣ್ಯದ ಪ್ರತಿರೂಪವಾಗಿದ್ದು ಸುಮಾರು 9 ಮೀಟರ್‌ ಎತ್ತರದ ರಚನೆಯಾಗಿದೆ. ಕೆನಡಾದ 5 ಸೆಂಟ್ಸ್‌ನ ನಾಣ್ಯ ನಿಕ್ಕೆಲ್‌ ಧಾತುವಿನಿಂದ ಮಾಡಲ್ಪಡುವುದರಿಂದ ಅದರ ಪ್ರತಿರೂಪವಾದ ಈ ನಾಣ್ಯ “ಬಿಗ್‌ ನಿಕ್ಕೆಲ್‌’ ಎಂದು ಪ್ರಸಿದ್ಧವಾಗಿದೆ.
1964ನೇ ಇಸವಿಯಲ್ಲಿ ಈ ನಾಣ್ಯದ ರಚನೆ ಮಾಡಲಾಗಿದ್ದು ಆ ಸಮಯದಲ್ಲಿ ನಾಣ್ಯದ ತಯಾರಿಕೆಗೆ ಕೇವಲ 25,000 ಡಾಲರ್‌ಗಳು ಖರ್ಚಾಗಿತ್ತು. ಆದರೆ ಪ್ರಸ್ತುತ ಇದರ ಮೌಲ್ಯ ಸುಮಾರು 360,000 ಡಾಲರ್‌ಗಳಾಗಿವೆ. ಡೈನಾಮಿಕ್‌ ಅರ್ಥ್ ವೈಜ್ಞಾನಿಕ ಕೇಂದ್ರದ ಹೊರವಲಯದಲ್ಲಿ ಸ್ಥಾಪಿಸಲಾದ ಈ ರಚನೆಯನ್ನು ವೀಕ್ಷಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. (ವೈಜ್ಞಾನಿಕ ಕೇಂದ್ರದ ಒಳಗೆ ಪ್ರವೇಶಕ್ಕೆ ಶುಲ್ಕವಿದೆ).

Advertisement

ಸಡ್ಬರೀ ಒಂಟಾರಿಯೋ ಪ್ರಾಂತದ ಕೇವಲ ಒಂದು ಲಕ್ಷದ ಅರವತ್ತೈದು ಜನಸಂಖ್ಯೆಯ ನಗರವಾದರೂ ಭೌಗೋಳಿಕವಾಗಿ ಒಂಟಾರಿಯೋದ ಅತ್ಯಂತ ಹೆಚ್ಚು ವಿಶಾಲವಾದ ನಗರವಾಗಿದೆ. ಪ್ರಪಂಚದ ಮೂರನೇ ಅತೀ ದೊಡ್ಡ ಕುಳಿ (crater) ಅಥವಾ ಹೊಂಡ ಸಡºರೀಯಲ್ಲಿದೆ. ಸುಮಾರು 1.8 ಬಿಲಿಯನ್‌ ವರ್ಷಗಳ ಹಿಂದೆ ಹತ್ತು ಕಿಲೋಮೀಟರ್‌ ವ್ಯಾಸದ ಒಂದು ಆಕಾಶಕಾಯ ಭೂಮಿಗೆ ಅಪ್ಪಳಿಸಿದಾಗ ಈ ಕುಳಿ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಕುಳಿ 60 ಕಿಲೋ ಮೀಟರ್‌ ಉದ್ದ 30 ಕಿಲೋ ಮೀಟರ್‌ ಅಗಲ ಹಾಗೂ 15 ಕಿಲೋ ಮೀಟರ್‌ ಆಳವಾಗಿ ನಿರ್ಮಾಣವಾಗಿದ್ದರೂ ಕಾಲಾಂತರದಲ್ಲಿ ಭೂಪದರದ ಚಲನೆಗಳಿಂದಾಗಿ ಈಗ ಕೆಲವೇ ಮೀಟರ್‌ಗಳಷ್ಟು ಆಳ ಗೋಚರಿಸುತ್ತದೆ. ಬಾಹ್ಯಾಕಾಶದಿಂದ ವೀಕ್ಷಿಸುವಾಗ ಕಾಣುವ ಈ ಕುಳಿಯ ಆಕೃತಿಯಿಂದಾಗಿ ಈ ಕುಳಿಗೆ ಸಡ್ಬರೀ ಬೇಸಿನ್‌ ಎಂದೂ ಹೆಸರಿಸಲಾಗಿದೆ. ಆರಂಭದಲ್ಲಿ ಇಲ್ಲಿ ಢಿಕ್ಕಿ ಹೊಡೆದ ಆಕಾಶಕಾಯ ಒಂದು ಕ್ಷುದ್ರ ಗ್ರಹ ಎಂದು ನಂಬಲಾಗಿತ್ತಾದರೂ ಇತ್ತೀಚೆಗಿನ ಸಂಶೋಧನೆಯಲ್ಲಿ ಅದೊಂದು ಧೂಮಕೇತು ಎಂದು ನಿರೂಪಿಸಲಾಗಿದೆ.

ಹತ್ತೊಂಬತ್ತನೇ ಶತಮಾನದ ಮಧ್ಯದ ಕಾಲಾವಧಿಯಲ್ಲಿ ಸಡ್ಬರೀ ಪ್ರದೇಶದ ಭೌಗೋಳಿಕ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಇಲ್ಲಿ ಕಾಂತೀಯ ಕ್ಷೇತ್ರದಲ್ಲಿ ವ್ಯತ್ಯಯ ಇರುವುದು ತಿಳಿದು ಬಂದಿತ್ತಂತೆ. ಆಕಾಶಕಾಯ ಹೊಡೆದ ಢಿಕ್ಕಿಯ ರಭಸಕ್ಕೆ ನಿಕ್ಕೆಲ್‌, ತಾಮ್ರ, ಚಿನ್ನ, ಪ್ಲಾಟಿನಂ ಮುಂತಾದ ಧಾತುಗಳ ನಿಕ್ಷೇಪವಿರುವ ಭೂಮಿಯ ಶಿಲಾಪಾಕ (magma) ಸಡ್ಬರೀ ಬೇಸಿನ್‌ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆಯೆಂದು ಗೊತ್ತಾದಂತೆ ಇಲ್ಲಿ ಗಣಿಗಾರಿಕೆ ಆರಂಭವಾಯಿತು. ನುರಿತ ಕೆಲಸಗಾರರನ್ನು ಐರೋಪ್ಯ ದೇಶಗಳಿಂದ ಕರೆಸಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಸಲಾಯಿತು. ಪ್ರಸ್ತುತ ಸುಮಾರು 5,000 ಕಿಲೋ ಮೀಟರ್‌ ಉದ್ದದ ಗಣಿಗಾರಿಕೆಗಾಗಿ ನಿರ್ಮಿಸಲಾದ ಭೂಗತ ಸುರಂಗ ಮಾರ್ಗ ಸಡ್ಬರೀಯಲ್ಲಿದೆ.

Advertisement

1961ನೇ ಇಸವಿಯಲ್ಲಿ ಕೆನಡಾ ಸರಕಾರವು ಸ್ವಾತಂತ್ರ್ಯದ 100ನೇ ವಾರ್ಷಿಕೋತ್ಸವದ ಅಂಗವಾಗಿ 850ಕ್ಕಿಂತಲೂ ಮಿಕ್ಕಿ ಸ್ಮಾರಕ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ಹಾಕಿತ್ತು. ಇದರ ಅಂಗವಾಗಿ ಸಡ್ಬರೀ ನಗರದ ಜನತೆಗೆ ಅಲ್ಲಿಯ ಸಮಿತಿಯು ಸಲಹೆಗಳನ್ನು ಆಹ್ವಾನಿಸಿತ್ತು. ಟೆಡ್‌ ಸಿಲ್ವಾ ಎಂಬ ಹೆಸರಿನ ಅಗ್ನಿ ಶಾಮಕ ದಳದ ಸಿಬಂದಿಯೋರ್ವರು 1951ನೇ ಇಸವಿಯಲ್ಲಿ ನಿಕ್ಕೆಲ್‌ ಧಾತುವನ್ನು ಕಂಡು ಹಿಡಿದು 200ನೇ ವರ್ಷದ ಸ್ಮರಣಾರ್ಥವಾಗಿ ಬಿಡುಗಡೆ ಮಾಡಲಾದ 5 ಸೆಂಟ್ಸ್‌ ನಾಣ್ಯದ ಪ್ರತಿರೂಪ ಹಾಗೂ ವೈಜ್ಞಾನಿಕ ಕೇಂದ್ರಗಳನ್ನು ನಿರ್ಮಿಸುವ ತನ್ನ ಯೋಜನೆಯನ್ನು ಸಲಹೆಯಾಗಿ ನೀಡಿದರು.

ಆದರೆ ಈ ಸಲಹೆಯನ್ನು ಶತಮಾನೋತ್ಸವದ ಸಮಿತಿಯು ನಿರಾಕರಿಸಿದುದರಿಂದ ಮೊದಲು ನಿರಾಸೆ ಹೊಂದಿದ ಟೆಡ್‌ ಅವರು ಈ ರಚನೆಯನ್ನು ನಿರ್ಮಿಸಲೇ ಬೇಕೆಂದು ಹಠ ತೊಟ್ಟು ಅದಕ್ಕಾಗಿ ನಿಧಿ ಸಂಗ್ರಹಣೆಗೆ ಆರಂಭಿಸಿದರು. ಸಮಾನ ಮನಸ್ಕರ ಜತೆ ಸೇರಿ ಅವರು 35,000 ಡಾಲರ್‌ಗಳಷ್ಟು ನಿಧಿ ಸಂಗ್ರಹಣೆ ಮಾಡಿ ಈ ನಾಣ್ಯದ ಪ್ರತಿರೂಪವನ್ನು 1964ರಲ್ಲಿ ನಿರ್ಮಿಸಿ ಸಾರ್ವಜನಿಕರಿಗೆ ವೀಕ್ಷಿಸಲು ಅನುವು ಮಾಡಿ ಕೊಟ್ಟರು. ಬಿಗ್‌ ನಿಕ್ಕೆಲ್‌ ನಾಣ್ಯ ಪ್ರತಿರೂಪ ನಿಜವಾದ 5 ಸೆಂಟ್ಸ್‌ ನಾಣ್ಯದ ಗಾತ್ರಕ್ಕಿಂತ 64,607,747 ಪಾಲು ದೊಡ್ಡದಾಗಿದೆ.

ನಾಣ್ಯ ತಲೆಬದಿಯಲ್ಲಿ ಕಿಂಗ್‌ ಜಾರ್ಜ್‌ VI ಮತ್ತು ಇನ್ನೊಂದು ಬದಿಯಲ್ಲಿ ನಿಕ್ಕೆಲ್‌ ಧಾತುವಿನ ಸಂಸ್ಕರಣಾಗಾರ ಹಾಗೂ ಮೇಪಲ್‌ ವೃಕ್ಷದ ಮೂರು ಎಲೆಗಳನ್ನೂ ಹೊಂದಿದೆ. ಒಂಬತ್ತು ಮೀಟರ್‌ ಎತ್ತರದ ನಾಣ್ಯವನ್ನು ಉಕ್ಕಿನ ಹಾಳೆಗಳನ್ನು ಜೋಡಿಸಿ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಪಾರ್ಕ್‌, ಡೈನಾಮಿಕ್‌ ಅರ್ಥ್ ವೈಜ್ಞಾನಿಕ ಕೇಂದ್ರ, ನೆಲದಡಿಯಲ್ಲಿರುವ ಗಣಿಗಾರಿಕಾ ವಸ್ತು ಸಂಗ್ರಹಾಲಯಗಳನ್ನೊಳಗೊಂಡ ಈ ಸಂಕೀರ್ಣ ಒಂದು ಪ್ರಮುಖ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿ ಪರಿಣಮಿಸ ತೊಡಗಿತು.

ಈ ಪ್ರವಾಸಿ ಸಂಕೀರ್ಣದಲ್ಲಿ ಅನಂತರ ಬಿಗ್‌ ನಿಕ್ಕೆಲ್‌ನ ಜತೆಗೆ 1 ಸೆಂಟ್ಸ್‌ನ ಎರಡು, 50 ಸೆಂಟ್ಸ್‌ನ ಒಂದು ಹಾಗೂ 20 ಡಾಲರುಗಳ ಒಂದು ಹೀಗೆ ಮತ್ತೆ ನಾಲ್ಕು ದೊಡ್ಡ ನಾಣ್ಯಗಳನ್ನು ನಿರ್ಮಿಸಲಾಗಿತ್ತಾದರೂ ಅವುಗಳು ಹವಾಮಾನದ ವೈಪರೀತ್ಯಕ್ಕೆ ಬಲಿಯಾಗಿ ಗುಜರಿ ಸೇರಿದ್ದವು. 1980ನೇ ಇಸವಿಯಲ್ಲಿ ಸಡ್ಬರೀ ನಗರ ನಿಗಮವು ಈ ಸಂಕೀರ್ಣವನ್ನು ಖರೀದಿಸಿ ಇದರ ನಿರ್ವಹಣೆಯ ಭಾರವನ್ನು ಹೊತ್ತಿತು. ಏಳು ನೆಲ ಅಂತಸ್ತುಗಳನ್ನು ಹೊಂದಿದ ಡೈನಾಮಿಕ್‌ ಅರ್ಥ್ ವೈಜ್ಞಾನಿಕ ಕೇಂದ್ರ ಶಾಲಾ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಗಣಿಗಾರಿಕೆಯ ಪ್ರಾತ್ಯಕ್ಷಿಕೆಯ ಜತೆಗೆ ಗಣಿಗಾರಿಕೆಯಲ್ಲಡಗಿದ ಅಪಾಯದ ಬಗ್ಗೆಯೂ ತಿಳಿಸುತ್ತದೆ. ಅಲ್ಲದೆ ಇಲ್ಲಿ ಒಂದು ಶಿಲಾ ವಸ್ತು ಸಂಗ್ರಹಾಲಯವೂ ಇದೆ.

ಬಿಗ್‌ ನಿಕ್ಕೆಲ್‌ ಸಣ್ಣ ನಗರವಾದ ಸಡºರೀಯನ್ನು ಒಂದು ಪ್ರವಾಸೀ ತಾಣವನ್ನಾಗಿ ಮಾಡಿ ಇದರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ನಗರದಲ್ಲಿ 150ಕ್ಕಿಂತಲೂ ಹೆಚ್ಚು ಸರೋವರಗಳಿರುವುದರಿಂದ “ಸರೋವರಗಳ ನಗರ’ ಎಂದೂ ಕರೆಯಲಾಗುತ್ತದೆ. ವಿಶ್ವದಲ್ಲೇ ಅತೀ ದೊಡ್ಡ ನಾಣ್ಯರೂಪ ಎಂದು ಹೆಗ್ಗಳಿಕೆಯನ್ನು ಪಡೆದುಕೊಂಡು ಸಡ್ಬರೀಯ ಸ್ಥಳೀಯ ನಾಗರಿಕರಿಗೆ ಹೆಮ್ಮೆಯ ರಚನೆಯಾಗಿ ಉಳಿದುಕೊಂಡಿದೆ.

*ಕೃಷ್ಣ ಪ್ರಸಾದ್‌ ಬಾಳಿಕೆ
ಬ್ರಾಂಪ್ಟನ್‌

Advertisement

Udayavani is now on Telegram. Click here to join our channel and stay updated with the latest news.

Next