Advertisement

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

03:37 PM Dec 20, 2024 | Team Udayavani |

ಮಂಡ್ಯ ಜಿಲ್ಲೆಯ ಸುಂದರ ಪ್ರಕೃತಿ ತಾಣದಲ್ಲಿರುವ ಬ್ರಹ್ಮ ಹಾಗೂ ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ (ಬ್ರಹ್ಮೇಶ್ವರ) ದೇಗುಲ ಕಿಕ್ಕೇರಿಯಲ್ಲಿರುವುದು ಜಿಲ್ಲೆಗೆ ನೀಡಿದ ಪ್ರಖ್ಯಾತಿಯಲ್ಲಿ ಒಂದಾಗಿದೆ. ಪ್ರೇಮ ಕವಿ ಕೆ.ಎಸ್‌. ನರಸಿಂಹಸ್ವಾಮಿ ಅವರ ತವರೂರು ಇದಾಗಿದ್ದು, ಕವಿಗಳ ನೆಚ್ಚಿನ ತಾಣವಾಗಿದ್ದು ತುಸು ದೂರದಲ್ಲಿರುವ ಅಶ್ವಥಕಟ್ಟೆ ಪ್ರಕೃತಿ ಸೆಲೆ ಇವರ ಸಿರಿಗೆರೆಯ ನೀರಿನಲ್ಲಿ ಮತ್ತಿತರ ಕವನಗಳ ಸ್ಫೂರ್ತಿಗೆ ಪ್ರೇರಣೆ ನೀಡಿದ ಸ್ಥಳವಾಗಿದೆ.

Advertisement

ಮಂಡ್ಯ ಜಿಲ್ಲೆಯ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ, ಜೈನಕಾಶಿ ಶ್ರವಣಬೆಳಗೊಳಕ್ಕೆ ಅತಿ ಸನಿಹದ ಧಾರ್ಮಿಕ ತಾಣವಾಗಿದೆ. ಹೊಯ್ಸಳರ ಒಂದನೆ ನರಸಿಂಹನ ಕಾಲದಲ್ಲಿ ಸಾಮಂತ ಪಾಳೇಗಾರ ಭರಮಯ್ಯನಾಯಕನ ಪತ್ನಿ ಬೊಮ್ಮವೆನಾಯಕಿ
ನಿರ್ಮಿಸಿದ್ದಾಳೆ. ಪ್ರಸಿದ್ಧ ಶಿಲ್ಪಿ ಬಳ್ಳಿಗಾವೆಯ ದಾಸೋಜನ ಮಗ ಮಸಣಿತಮ್ಮನ ಕೈಚಳಕದಲ್ಲಿ ಕಲಾಕುಸುರಿ ದೇಗುಲ ಮೂಡಿದೆ. 1171ರಲ್ಲಿ ಆಮೆಯಾಕೃತಿಯ ತಳಹದಿಯ ಮೇಲೆ ದೇಗುಲ ನಿರ್ಮಿತವಾಗಿದೆ. ಈ ಸ್ಥಳ ಮಹಾತಪಸ್ವಿ, ಸತ್ಯಸಂತ ಕಾಳಮುಖಿಯತಿವರ್ಯರು ತಪೋಗೈದ ಪುಣ್ಯಭೂಮಿ ಕೂಡ ಆಗಿದೆ.

ವಿಶೇಷ ಶೈಲಿಯ ದೇಗುಲ
ಬೊಮ್ಮವಿನಾಯಕಿಗೆ ಸ್ವಪ್ನದಲ್ಲಿ ಶಿವ ಕಾಣಿಸಿಕೊಂಡ ಫ‌ಲವಾಗಿ ದೇಗುಲ ನಿರ್ಮಾಣಕ್ಕೆ ಬೇಲೂರು, ಹಳೆಬೀಡು, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ವೀಕ್ಷಣೆ ಮಾಡಿ ಇದಕ್ಕಿಂತಲೂ ಉನ್ನತವಾದ ವಿಶೇಷ ಶೈಲಿಯ ದೇಗುಲ ನಿರ್ಮಿಸಲು ಮುಂದಾದರು. ತತ್ಪಲವಾಗಿ ಇಷ್ಟೊಂದು ಮುದ್ದಾದ ಶಿವಲಿಂಗ ರಾಜ್ಯದಲ್ಲಿಯೇ ಕಾಣಸಿಗದಿರುವುದು ವಿಶೇಷವಾಗಿದೆ.

ನುಣುಪಾದ ಕಲ್ಲಿನಲ್ಲಿ ನೂರಾರು ಚಿತ್ತಾರ, ಮದನಿಕೆ, ದೇವತೆಗಳು ಭಂಗಿಗಳು ಮೋಹಕವಾಗಿ ಅರಳಿದೆ. ದೇಗುಲದಲ್ಲಿನ ಬೆಳಕಿನ ಜಾಲಂಧ್ರಗಳು ಸುಂದರವಾಗಿ ದೇಗುಲದೊಳಗೆ ತಣ್ಣನೆ ಗಾಳಿ ಬೀಸುವಂತಿದೆ. ಹೆಬ್ಬಾಗಿಲಿನ ದ್ವಾರದಲ್ಲಿ ಕಲ್ಲಿನ ಕುಸುರಿ ಇದ್ದು ಮೇಲ್ಭಾಗದಲ್ಲಿ ಈಶ್ವರ ಪಾರ್ವತಿ ಮೂರ್ತಿಗಳಿವೆ. ಪಂಚದೇವರಿಗೆ ಸಮಾನತೆ ಪೂಜೆ ಸಲ್ಲಿಸಲು ಪರಿವಾರ ದೇವರುಗಳು ಇಲ್ಲಿವೆ. ಸೂರ್ಯ(ಸೌರರು), ಅಂಬಿಕಾದುರ್ಗಾದೇವಿ (ಶಾಕ್ತೆಯರು), ಗಣನಾಥ(ಗಣಪತಿ-ಗಾಣಪತ್ಯರಿಂದ ಪೂಜೆ), ವಿಷ್ಣು(ವೈಷ್ಣರು), ಶಿವ(ಶೈವರು)ನ ಸುಂದರ ಪುಟ್ಟ ಗುಡಿಗಳಿದ್ದು ಮೂರ್ತಿಗಳು ಸುಂದರವಾಗಿದೆ.

Advertisement

ಗರ್ಭಗುಡಿ, ಪೂಜಾ ಸಾಮಾಗ್ರಿ ಇಡುವ ಅಂತರಾಳದ ಸುಖನಾಸಿ, ಭಕ್ತರು ವೀಕ್ಷಣೆ ಮಾಡಲು ನವರಂಗ, ನಂದಿ ಇರುವ ಮುಖಮಂಟಪ ಇದ್ದು ಒಂದೊಂದು ಮಂಟಪಗಳು ಸಕರಾತ್ಮಕ ಶಕ್ತಿಯನ್ನು ಪ್ರಜ್ವಲಿಸುವಂತಿವೆ.

ಕೃಷ್ಣ ಶಿಲೆಯ ಅಪರೂಪದ ಬ್ರಹ್ಮೇಶ್ವರ ಲಿಂಗ
ಗರ್ಭಗುಡಿಯಲ್ಲಿ ಐದು ಅಡಿಯ ಕೃಷ್ಣಶಿಲೆಯ ಬೃಹತ್‌ ಬ್ರಹ್ಮದೇವರ ಹೆಸರಿನಲ್ಲಿ ಪೂಜಿಸುವ ಅಪರೂಪದ ಬ್ರಹ್ಮೇಶ್ವರ ಲಿಂಗ ಇದೆ. ಇಡೀ ರಾಜ್ಯದಲ್ಲಿ ಇಷ್ಟು ಸುಂದರವಾದ ಲಿಂಗ ಕಾಣದಿರುವುದು ದೇಗುಲದ ವಿಶೇಷತೆಯಾಗಿದೆ. ಮುಖಮಂಟಪದಲ್ಲಿ ವಿವಿಧ ಅಸ್ತ್ರಗಳನ್ನು ಹೊಂದಿರುವ ಸೂರ್ಯನಾರಾಯಣ, ಬೃಹತ್‌ ನಂದಿ ವಿಗ್ರಹ, ನಂದಿ, ಭೃಂಗಿ ವಿಗ್ರಹವಿದೆ.

ನಂದಿಯ ಮುಖ ಶಿವ, ಪಾರ್ವತಿ ಗುಡಿಯನ್ನು ನೋಡುವಂತಿದೆ. ದೇಗುಲದ ವಾಯುವ್ಯ ದಿಕ್ಕಿನಲ್ಲಿ ಪ್ರತ್ಯೇಕವಾಗಿ ಪಾರ್ವತಿ ಗುಡಿ, ಈಶಾನ್ಯ ದಿಕ್ಕಿನಲ್ಲಿ ಪುಷ್ಕರಿಣ, ನಾಗಬನ, ಕಾಲಭೈರವೇಶ್ವರ ಮೂರ್ತಿ, ಒಕೈ ಮಾಸ್ತಿಗಲ್ಲು ಇದೆ. ಸಂಕ್ರಾಂತಿಯಂದು ಸೂರ್ಯದೇವರು ಇರುವ ಮುಖಮಂಟಪದಿಂದ ಬ್ರಹ್ಮೇಶ್ವರ ಲಿಂಗಕ್ಕೆ ಮುಂಜಾನೆಯ ಸೂರ್ಯರಶ್ಮಿ ಪ್ರವೇಶಲಿದ್ದು ದೇಗುಲದ ವಿಶೇಷ ಆಕರ್ಷಣೆಯಾಗಿದೆ. ನಮ್ಮ ಇತಿಹಾಸ ಪರಂಪರೆ ಬಿಂಬಿಸುವ ಈ ದೇಗುಲದಲ್ಲಿ ವಿಶ್ವಕ್ಕೆ ಸವಲೊಡ್ಡುವ ಹಲವು ವಿಸ್ಮಯಗಳಿವೆ. ಎಲ್ಲವನ್ನು ಜಥನ ಮಾಡಲು ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರ್ಪಡೆಯಾಗಬೇಕಿದೆ ಎನ್ನುತ್ತಾರೆ ಶಾಸನ ತಜ್ಞ ಸಂತೆಬಾಚಹಳ್ಳಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಸೂಕ್ತ ರಕ್ಷಣೆಯೇ ಇಲ್ಲ
ದೇಗುಲದ ಒಳಾಲಯದಲ್ಲಿ ಶಿಲ್ಪಕಲೆ ಇರುವ ಸುಂದರ ನಾಲ್ಕು ಕಂಬಗಳಿವೆ. ಕಂಬಗಳ ಬೋದಿಗೆಯಲ್ಲಿ 16 ಸುಂದರ ಶಿಲಾಬಾಲಿಕೆ ಇದ್ದು ಸೂಕ್ತ ರಕ್ಷಣೆಯಿಲ್ಲದೆ ಬ್ರಿಟಿಷರ ಕಾಲದಲ್ಲಿ ಒಂದೆರಡು ಹಾಗೂ ಆರೇಳು ವರ್ಷಗಳ ಹಿಂದೆ 6 ಶಿಲಾಬಾಲಿಕೆ ವಿಗ್ರಹ ಕಳುವಾಗಿದೆ. ಈಗ ಕೇವಲ ಬಿನ್ನವಾಗಿರುವ 4 ಶಿಲಾಬಾಲಿಕೆ ವಿಗ್ರಹವಿದ್ದು ನೋಡಲು ಮೋಹಕವಾಗಿದೆ. ದಕ್ಷಿಣ ಭಾರತದಲ್ಲಿ ಅತಿ ಅಪರೂಪದ ಸುಂದರ ಶಿಲಾಬಾಲಿಕೆಯರು ಇಲ್ಲಿರುವುದು ವಿಶೇಷವಾಗಿದ್ದು ಸೂಕ್ತ ರಕ್ಷಣೆ ಅವಶ್ಯವಿದೆ.

ದೇಗುಲದಲ್ಲಿ ವಿಷ್ಣು, ಶಿವಮೂರ್ತಿ ಇರುವ ವಿಶೇಷ ದೇಗುಲ ಇದಾಗಿದ್ದು ಎರಡು ದೇವರನ್ನು ಸಮಾನವಾಗಿ ಪೂಜಿಸಲಾಗುತ್ತದೆ. ಒಳಪ್ರಾಂಗಣದ ನವರಂಗದ ಮೇಲ್ಭಾಗದಲ್ಲಿ ಅಷ್ಟದಿಕಾ³ಲಕರು, ಯುದ್ಧಕ್ಕೆ ಸಂಬಂಧಿಸಿದ ರಾಮಾಯಣ, ಮಹಾಭಾರತ ಕಥಾ ಚಿತ್ರಕಲಾ ಶಿಲ್ಪಗಳಿವೆ. ಒಂದು ಕಂಬದಲ್ಲಿ ಇಡೀ ದೇಗುಲದ ಚಿತ್ರಣವನ್ನು ಒಂದು ಇಂಚಿನಲ್ಲಿ ಸೂಕ್ಷ್ಮಾತಿ ಸೂಕ್ಷತೆಯಲ್ಲಿ ಕೆತ್ತಲ್ಪಟ್ಟಿರುವುದು ಶಿಲ್ಪಿಯ ಜಾಣ್ಮೆಯಾಗಿದೆ. ಜೊತೆಗೆ ಮಹಿಷಾ ಮರ್ಧಿನಿ ಚಾಮುಂಡೇಶ್ವರಿ, ಚನ್ನಕೇಶವ, ಅರ್ಜುನೇಶ್ವರ, ಕಾರ್ತಿಕೇಯ(ಸುಬ್ರಹ್ಮಣ್ಯ), ಗಣಪತಿ, ಸಪ್ತಮಾತೃಕೆ, ನಂದಿ ವಿಗ್ರಹವಿದೆ. ಈಶಾನ್ಯ ಭಾಗದ ಕಂಬದಲ್ಲಿರುವ ಮುಷ್ಟಿಯಷ್ಟಿರುವ ಗಣೇಶಾನಿ(ಗಂಡು, ಹೆಣ್ಣು ಶರೀರ) ಮೂರ್ತಿ ಕಾರ್ಯಸಿದ್ಧಿಗೆ ವರಪ್ರಸಾದ ಎನ್ನುವುದುಂಟು.

ಹೊರಾಲಯದಲ್ಲಿ ಭೂವರಾಹ, ಕಾಳಭೈರವಿ, ಜನಾರ್ಧನ, ಗೋವರ್ಧನ, ಕೃಷ್ಣ, ಉಗ್ರನರಸಿಂಹ, ಮೈಷಾಸುರ ಮರ್ಧಿನಿ, ಶಿವಪಾರ್ವತಿ, ವಜ್ರಾಹಾರ, ಕಂಠಿಹಾರ, ತೋಳ್ಬಂದಿ, ಕೈಬೆರಳಿನ ಸೂಕ್ಷ್ಮತೆ, ನಿಲುವು ಭಂಗಿ ಇರುವ ವಿಭಿನ್ನ ಮದನಿಕೆ, ನಾಟ್ಯರಾಣಿ, ದರ್ಪಣ ಸುಂದರಿ ಶಿಲಾಬಾಲಿಕೆ, ಡಮರುಗ ಮದನಿಕೆ, ನವಿಲು ಗಣಪ ಶಿಲ್ಪ, ತಾಂಡವ ನೃತ್ಯ ನಟರಾಜ, ವಿಷ್ಣು, ಅರ್ಧನಾರೀಶ್ವರ, ಶಿವತಾಂಡವ ನೃತ್ಯ. ಬಲಿಚಕ್ರವರ್ತಿ, ಬ್ರಹ್ಮ ಸರಸ್ವತಿ, ಮತ್ಸ್ಯ ಭೇದ ಅರ್ಜುನ, ವಿದೇಶಿ ಪ್ರಜೆ ಯಾತ್ರಿಕ ಶಿಲ್ಪಗಳನ್ನು ನೋಡಲು ದಿನಗಳೆ ಬೇಕಾಗಲಿದೆ.

■ ತ್ರಿವೇಣಿ

Advertisement

Udayavani is now on Telegram. Click here to join our channel and stay updated with the latest news.

Next