ಬೆಂಗಳೂರು: ವಾರದ ಬಿಡುವಿನ ಬಳಿಕ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನವರೆಗೂ ಮಳೆ ಸುರಿದಿದ್ದು, ನಗರದ ಜನತೆ ಮತ್ತೂಮ್ಮೆ ಇಡೀ ರಾತ್ರಿ ನಿದ್ದೆಗೆಟ್ಟಿದ್ದಾರೆ. ರಾತ್ರಿ ಪೂರಾ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ನಿಂತಿದ ಪರಿಣಾಮ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು.
ಹಾಗೇ ಗಾಂಧಿನಗರದ ಅಣ್ಣಮ್ಮ ದೇವಿ ದೇವಾಲಯಕ್ಕೆ ನೀರು ನುಗ್ಗಿ, ಶರನ್ನವರಾತ್ರಿ ವಿಶೇಷ ಪೂಜೆ ವಿಳಂಬವಾಯಿತು. ಭಾನುವಾರ ತಡರಾತ್ರಿ 1 ಗಂಟೆಗೆ ಆರಂಭವಾದ ಮಳೆ, ಸೋಮವಾರ ಬೆಳಗ್ಗೆ 9.30ರವರೆಗೂ ಬಿಡಲೇ ಇಲ್ಲ. ಪರಿಣಾಮ ಬೆಳಗ್ಗೆ ಶಾಲೆ-ಕಾಲೇಜು ಹಾಗೂ ಕಚೇರಿಗಳಿಗೆ ಹೋಗುವವರಿಗೆ ತೊಂದರೆಯಾಯಿತು.
ಶಿವಾನಂದ ವೃತ್ತ, ಮಲ್ಲೇಶ್ವರ, ಯಶವಂತಪುರ, ಶಾಂತಿನಗರ, ಜಯನಗರ, ವಿಜಯನಗರ, ಬಸವನಗುಡಿ, ಶೇಷಾದ್ರಿಪುರ, ಮೇಖೀ ವೃತ್ತ, ಹೆಬ್ಟಾಳ, ಬನಶಂಕರಿ, ಸೋನಿ ವರ್ಲ್ಡ್ ಜಂಕ್ಷನ್, ಶ್ರೀನಿವಾಗಿಲು ಜಂಕ್ಷನ್, ಕಾಫಿಡೇ ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
ಎರಡು ಮರ ಧರೆಗೆ: ಯಲಹಂಕ ಹಾಗೂ ಜಯನಗರ 7ನೇ ಬ್ಲಾಕ್‌ನಲ್ಲಿ ಸೋಮವಾರ ಬೆಳಗ್ಗೆ ತಲಾ ಒಂದು ಬೃಹದಾಕಾರದ ಮರಗಳು ಧರೆಗುರುಳಿದ್ದು, ಪಾಲಿಕೆಯ ಅಧಿಕಾರಿಗಳು ಕೂಡಲೇ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ ಕೆಲವೆಡೆ ಮುರಿದು ಬಿದ್ದಿದ್ದ ಮರದ ಕೊಂಬೆಗಳನ್ನೂ ತೆರವುಗೊಳಿಸಲಾಗಿದೆ.
ಎರಡು ದಿನ ಮಳೆ ವಾತಾವರಣ: ಭಾನುವಾರ ತಡರಾತ್ರಿ ನಗರದಲ್ಲಿ 14.5 ಮಿ.ಮೀ ಮಳೆಯಾಗಿದ್ದು, ಇನ್ನೂ ಎರಡು ದಿನಗಳ ಕಾಲ ನಗರದಲ್ಲಿ ಇದೇ ವಾತಾವರಣ ಮುಂದುವರಿಯಲಿದೆ. ನಗರದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಣ್ಣಮ್ಮನ ಗುಡಿ ಹೊಕ್ಕ ಗಂಗೆ: ರಾತ್ರಿಯಿಡೀ ನಿಲ್ಲದೆ ಮಳೆ ಸುರಿದ ಪರಿಣಾಮ ಗಾಂಧಿನಗರದ ಪ್ರಸಿದ್ಧ ಅಣ್ಣಮ್ಮ ದೇವಿ ದೇವಾಲಯದ ಗರ್ಭಗುಡಿಗೆ ಮಳೆ ನೀರು ನುಗ್ಗಿ, ವಿಶೇಷ ಪೂಜೆಗೆ ವಿಳಂಬವಾಯಿತು. ಮುಂಜಾನೆಯೇ ದೇವಾಲಯಕ್ಕೆ ಬಂದ ಪಾಲಿಕೆ ಸಿಬ್ಬಂದಿ, ಪಂಪಸ್‌ಸೆಟ್‌ಗಳ ಮೂಲಕ ಮಳೆ ನೀರನ್ನು ಹೊರಹಾಕಿದರು. ಶರನ್ನವರಾತ್ರಿ ಹಿನ್ನೆಲೆಯಲ್ಲಿ ಭಾನುವಾರ ಅಣ್ಣಮ್ಮ ದೇವಿಗೆ ಗಾಯತ್ರಿ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಳೆನೀರು ಗರ್ಭಗುಡಿ ಪ್ರವೇಶಿಸಿದ್ದರಿಂದ ಬೆಳಗ್ಗೆ 6.30ಕ್ಕೆ ನಡೆಯಬೇಕಿದ್ದ ಪೂಜೆಗೆ ತಡವಾಗಿದ್ದು, ಮತ್ತೆ ದೇವಾಲಯಕ್ಕೆ ಮಳೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅರ್ಚಕರು ತಿಳಿಸಿದ್ದಾರೆ.