Advertisement

ವಿದೇಶದಲ್ಲೇ ಉಳಿದ ಗಣ್ಯರ ಮಕ್ಕಳು

01:01 AM Mar 21, 2020 | Team Udayavani |

ವಿಧಾನ ಪರಿಷತ್‌: ವಿಶ್ವವ್ಯಾಪಿ ಹರಡಿರುವ ಕೊರೊನಾನಿಂದ ಶಿಕ್ಷಣ ಮತ್ತು ಇತರ ಉದ್ದೇಶಗಳಿಗೆ ವಿದೇಶಕ್ಕೆ ಹೋಗಿರುವ ರಾಜ್ಯದ ಜನ ಪ್ರತಿನಿಧಿಗಳ ಮಕ್ಕಳು ತಾಯ್ನಾಡಿಗೆ ವಾಪಸ್ಸಾಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು, ರಾಜ್ಯ ಸರ್ಕಾರ ನಮ್ಮ ಮಕ್ಕಳ ರಕ್ಷಣೆಗೆ ಮುಂದಾಗಲಿ ಎಂದು ಪಕ್ಷಭೇದ ಮರೆತು ಸದಸ್ಯರು ಮನವಿ ಮಾಡಿದರು.

Advertisement

ಸದಸ್ಯೆ ಡಾ.ಜಯಮಾಲಾ ಮಾತನಾಡಿ, ನನ್ನ ಪುತ್ರಿ ಲಂಡನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಕೊಂಡಿದ್ದಾಳೆ. ಕರ್ನಾಟಕಕ್ಕೆ ಬರಲಾಗದೆ ಸಂಕಷ್ಟ ಎದುರಿಸುತ್ತಿದ್ದಾಳೆ. ಈ ಬಗ್ಗೆ ಗಮನ ನೀಡಿ ಎಂದು ಮನವಿ ಮಾಡಿದರು. ಬಿಜೆಪಿ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ, ನನ್ನ ಪುತ್ರ ಪ್ಯಾರೀಸ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಅಲ್ಲೀಗ ನಿಷೇಧಾಜ್ಞೆ ಹೇರಲಾಗಿದೆ.

ಊಟದ ವ್ಯವಸ್ಥೆಗೂ ಕಷ್ಟಕರ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪರಿಷತ್‌ನ ಗಮನಕ್ಕೆ ತಂದರು. ಬುಧವಾರ ಬೆಳಗ್ಗೆ ನಮ್ಮ ಮಗಳು ವಿದೇಶದಿಂದ ಬಂದಿದ್ದಾಳೆ ಎಂದು ಸದಸ್ಯ ಆರ್‌.ಬಿ.ತಿಮ್ಮಾಪುರ ಹೇಳಿದರು. ಬಸವರಾಜ್‌ ಹೊರಟ್ಟಿ ಮಾತನಾಡಿ, ವಿದೇಶದಲ್ಲಿರುವ ಭಾರತೀಯರಿಗೆ ಅಲ್ಲೆ ಉಳಿಯುವ ವ್ಯವಸ್ಥೆಯನ್ನು ರಾಯಭಾರಿ ಕಚೇರಿ ಮೂಲಕ ಮಾಡಬೇಕು.

ಅಲ್ಲದೆ, ಇಲ್ಲಿಗೆ ಬಂದವರನ್ನು ಪ್ರತ್ಯೇಕವಾಗಿಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು. ವಿದೇಶದಿಂದ ಬರುವ ವಿಮಾನಗಳನ್ನು ರದ್ದು ಮಾಡಬೇಕು. ಪ್ರವಾಸಿಗರಿಗೆ ಅವಕಾಶ ನೀಡಬಾರದು. ಎಲ್ಲರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆ ನಡೆಸಿ, ಪ್ರತ್ಯೇಕ ವ್ಯವಸ್ಥೆಯಲ್ಲಿ ಇಡಬೇಕು ಎಂದು ಐವಾನ್‌ ಡಿಸೋಜಾ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗಿರುವ ವಿದ್ಯಾರ್ಥಿಗಳಲ್ಲಿ 90 ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಇನ್ನು ಸುಮಾರು 100 ವಿದ್ಯಾರ್ಥಿಗಳಿಂದ ಯಾವುದೇ ಉತ್ತರ ಬಂದಿಲ್ಲ. ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.
-ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next