Advertisement

ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್‌

01:52 AM Oct 21, 2020 | mahesh |

ಬೆಂಗಳೂರು/ವಿಜಯಪುರ: ಉತ್ತರ ಕರ್ನಾಟಕ ಭಾಗದವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ 2023ರ ವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಎಲ್ಲ ವಿವಾದಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ತೆರೆ ಎಳೆದಿದ್ದಾರೆ.

Advertisement

2023ರ ಸಾರ್ವತ್ರಿಕ ಚುನಾವಣೆಯವರೆಗೂ ಬಿಜೆಪಿ ಸರಕಾರಕ್ಕೆ ಏನೂ ಆಗುವುದಿಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಅಂತಿಮ ಎಂದೂ ನಳಿನ್‌ ಕುಮಾರ್‌ ಕಟೀಲು ಸ್ಪಷ್ಟವಾಗಿ ಹೇಳಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದೂ ತಿಳಿಸಿದ್ದಾರೆ.

ಇದಕ್ಕೆ ಮುನ್ನ ವಿಜಯಪುರದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌, ಬಿ.ಎಸ್‌. ಯಡಿಯೂರಪ್ಪ ಅವರು ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂಬ ಬಾಂಬ್‌ ಸಿಡಿಸಿದ್ದರು. ಪಕ್ಷದ ವರಿಷ್ಠಗೂ ಬಿಎಸ್‌ವೈ ಬೇಕಾಗಿಲ್ಲ. ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದಿದ್ದರು.

ಇದು ಬಿಜೆಪಿ ನಾಯಕರ ಆಕ್ರೋಶಕ್ಕೂ ಕಾರಣವಾಗಿತ್ತು. ಇದರ ನಡುವೆಯೇ ಸಿಎಂ ಯಡಿಯೂರಪ್ಪ ಅವರು ಯತ್ನಾಳರನ್ನು ಮನೆಗೆ ಕರೆಸಿ ಮಾತನಾಡುವುದಾಗಿ ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಬಿಎಸ್‌ವೈ ನಮ್ಮ ಸರ್ವಾನುಮತದ ನಾಯಕರಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಯಾರು ಏನೆಂದರು?
ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಸಿಎಂ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಪಕ್ಷದ ಅಧ್ಯಕ್ಷರು, ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ.
-ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಡಿಸಿಎಂ

Advertisement

ಯಡಿಯೂರಪ್ಪ ಅವರು ಬಿಜೆಪಿಯ ಪ್ರಶ್ನಾತೀತ ನಾಯಕರು. ವರಿಷ್ಠರು ಅವರ ನಾಯಕತ್ವವನ್ನು ಒಪ್ಪಿದ್ದಾರೆ. ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಅಂತಹ ಚರ್ಚೆಯೂ ನಡೆದಿಲ್ಲ.
-ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಬದಲಾಯಿಸಲು ಬಿಜೆಪಿಯಲ್ಲಿ ಬಹುದೊಡ್ಡ ಚರ್ಚೆ ನಡೆದಿದೆ. ಸರಕಾರ ತಾನಾಗಿಯೇ ಬಿದ್ದರೆ ನಾವು ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಲೇ ಇದೆ. ಆರೆಸ್ಸೆಸ್‌ ತಂತ್ರದಿಂದ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆದಿದೆ. ಯತ್ನಾಳ್‌ ಅವರನ್ನು ಆರೆಸ್ಸೆಸ್‌ನವರೇ ಎತ್ತಿ ಕಟ್ಟುತ್ತಿದ್ದಾರೆ. ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆದರೆ ನಮಗೂ ಖುಷಿ.
-ಆರ್‌.ಬಿ. ತಿಮ್ಮಾಪುರ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.