Advertisement
ಹಳೇ ಮದ್ರಾಸ್ ರಸ್ತೆಯಲ್ಲಿ ಉಂಟಾಗುತ್ತಿದ್ದ ವಾಹನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಮಿಸಿರುವ ಕೆ.ಆರ್.ಪುರ ತೂಗು ಸೇತುವೆಯ ಟಿನ್ ಫ್ಯಾಕ್ಟರಿ ಬಳಿ ನಿತ್ಯ ಕಂಡುಬರುವ ದೃಶ್ಯಗಳಿವು.
Related Articles
Advertisement
ಖಾಸಗಿ ಬಸ್‌ಗಳಿಗೆ ಅರ್ಧ ರಸ್ತೆ ಮೀಸಲು!: ಕೇವಲ 40 ಅಡಿ ಅಗಲವಿರುವ ಮೇಲ್ಸೇತುವೆ ರಸ್ತೆಯಲ್ಲಿ ಎರಡು ಬಸ್‌ಗಳು ಒಟ್ಟಿಗೆ ಸಂಚರಿಸಲು ಅವಕಾಶವಿದೆ. ಆದರೆ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೋಗುವ ಖಾಸಗಿ ಬಸ್‌ಗಳು ಮೇಲ್ಸೇತುವೆಯ ಅರ್ಧ ರಸ್ತೆ ಅಕ್ರಮಿಸುತ್ತಿವೆ. ಪರಿಣಾಮ ಉಳಿದ ಅರ್ಧ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲಾಗದೆ ಕಿಲೋ ಮೀಟರ್‌ಗಟ್ಟಲೇ ದಟ್ಟಣೆ ಸೃಷ್ಟಿಯಾಗುತ್ತಿದೆ.
ದಟ್ಟಣೆಯ ಪರಿಣಾಮವೇನು?: ಟಿನ್‌ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ಕೇವಲ ಐದು ನಿಮಿಷ ದಟ್ಟಣೆ ಉಂಟಾದರೆ ಹೊರವರ್ತುಲ ರಸ್ತೆ ಹಾಗೂ ಹಳೆಮದ್ರಾಸ್‌ನ ರಸ್ತೆಯ ಎರಡೂ ಬದಿ, ಐಟಿಪಿಎಲ್ ಹಾಗೂ ಸಿಲ್ಕ್ಬೋಡ್ ರಸ್ತೆಯಲ್ಲಿ 20-30 ನಿಮಿಷಗಳ ಕಾಲ ದಟ್ಟಣೆ ಉಂಟಾಗುತ್ತದೆ. ಇನ್ನು ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟಣೆ ದುಪ್ಪಟ್ಟಾದ ಉದಾಹರಣೆಗಳಿವೆ.
ದಟ್ಟಣೆ ಹೆಚ್ಚಿಸಿದೆಯೇ ವೈಟ್‌ಟಾಪಿಂಗ್: ನಾಗಾವಾರ ಹೊರ ವರ್ತುಲ ರಸ್ತೆಯಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯೂ ಟಿನ್‌ಫ್ಯಾಕ್ಟರಿಯಲ್ಲಿ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಬಾಣಸವಾಡಿಯಿಂದ ಟಿನ್‌ಫ್ಯಾಕ್ಟರಿ ರ್‍ಯಾಂಪ್‌ವರೆಗೆ ವೈಟ್‌ಟಾಪಿಂಗ್ ರಸ್ತೆಯಾಗಿರುವುದರಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದ್ದು, ಒಮ್ಮೆಗೆ ನೂರಾರು ವಾಹನಗಳು ಟಿನ್‌ಫ್ಯಾಕ್ಟರಿಗೆ ಬರುತ್ತಿರುವುದು ಸಹ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ.
ಖಾಸಗಿ ಬಸ್‌ಗಳಿಗೆ ಕಡಿವಾಣವೊಂದೆ ಪರಿಹಾರ!: ಕೆ.ಆರ್.ಪುರ ತೂಗು ಸೇತುವೆ ಪ್ರವೇಶಿಸುವ ಆರಂಭದಲ್ಲಿಯೇ ಹತ್ತಾರು ಖಾಸಗಿ ವಾಹನಗಳು ನಿಲುಗಡೆಯಾಗಿರುತ್ತವೆ. ಟಿಕೆಟ್ ಬುಕ್ಕಿಂಗ್ ಮಾಡಿರುವ ಪ್ರಯಾಣಿಕರು ಬರುವವರೆಗೆ ವಾಹನ ಮುಂದೆ ಹೋಗುವುದಿಲ್ಲ.
ಆದರೆ, ಸಂಚಾರ ಪೊಲೀಸರು ಮಾತ್ರ ಇಂತಹ ಬಸ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದ್ದು, ಸಿಸಿ ಕ್ಯಾಮೆರಾ ಅಳವಡಿಸಿ ಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.
2 ಕಿ.ಮೀ. ಸಾಗಲು 30 ನಿಮಿಷ!: ಬೆನ್ನಿಗಾನಹಳ್ಳಿಯ ರೈಲ್ವೆ ಅಂಡರ್ ಪಾಸ್‌ನಿಂದ ಹಳೆ ಮದ್ರಾಸ್ ರಸ್ತೆಯ ಐಟಿಐ ಬಸ್ ನಿಲ್ದಾಣದವರೆಗಿನ 2 ಕಿ.ಮೀ. ರಸ್ತೆ ಸಾಗಲು ಕನಿಷ್ಠ 30 ನಿಮಿಷಗಳಾಗುತ್ತಿದೆ. ದಟ್ಟಣೆ ನಿವಾರಣೆಗಾಗಿ ಸಿಗ್ನಲ್ ಅಳವಡಿಕೆ ಮಾಡಲಾಗಿದ್ದರೂ, ದಟ್ಟಣೆ ಮಾತ್ರ ಬಗೆಹರಿದಿಲ್ಲ.
* ವೆಂ. ಸುನೀಲ್‌ಕುಮಾರ್