ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಗಳಿಗೆ ಹೊರಗಿ ನಿಂದ ಬಾಂಡ್ ರೂಪದಲ್ಲಿ ಸಾಲ ಪಡೆಯುವ ಕ್ರಮ ಅಷ್ಟು ಸೂಕ್ತವಲ್ಲ. ಏಕೆಂದರೆ ಈಗಾಗಲೇ ಜಿಡಿಪಿ ಬೆಳವಣಿಗೆ ದರ ಆಶಾದಾಯಕವಾಗಿಲ್ಲದ ಸಂದರ್ಭ ದಲ್ಲಿ ಮೂಲ ಸೌಕರ್ಯಕ್ಕೆ ಸಾಲ ರೂಪದಲ್ಲಿ ಸಂಪನ್ಮೂಲ ಹೊಂದಿಸುವುದು ಆರೋಗ್ಯಕರವೆನಿಸದು.
ಆದರೆ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗ ಗಳಿದ್ದಂತಿಲ್ಲ. ಈಗಾಗಲೇ ಆದಾಯ ತೆರಿಗೆ ಏರಿಕೆ ಪ್ರಮಾಣ ಶೇ.67ರಷ್ಟಿದ್ದರೆ, ಜಿಎಸ್‌ಟಿ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣಕ್ಕಿಂತ ಶೇ. 24ರಷ್ಟು ಕಡಿಮೆ ಇದೆ. ಆಂತರಿಕವಾಗಿ ಸಂಪನ್ಮೂಲ ಸೃಷ್ಟಿಗೆ ಅವಕಾಶವಿಲ್ಲದ ಕಾರಣ ಬಾಹ್ಯ ಮೂಲ ಸಂಪನ್ಮೂಲದ ಮೊರೆ ಹೋಗಿರಬಹುದು. ದೇಶದ ಎಲ್ಲ ರಾಜ್ಯಗಳಲ್ಲೂ ಕನಿಷ್ಠ ಮೂಲ ಸೌಕರ್ಯವನ್ನು ಏಕ ಪ್ರಕಾರವಾಗಿ ಕಲ್ಪಿಸಲು ಕೇಂದ್ರದೊಂದಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಸಹಕಾರವೂ ಅಗತ್ಯ.
ಆದರೆ ದೇಶದೆಲ್ಲೆಡೆ ಕನಿಷ್ಠ ಸಮಾನ ಮೂಲ ಸೌಕರ್ಯ ಒದಗಿಸಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ವೆಚ್ಚವೂ ದುಬಾರಿಯಾಗಿ ಸ್ವಲ್ಪ ಆರ್ಥಿಕ ಹೊರೆ ಬೀಳಬಹುದು. ಹಿಂದಿನ ಐದು ವರ್ಷಗಳಲ್ಲೇ ರಸ್ತೆ, ಹೆದ್ದಾರಿ, ರೈಲು ಮಾರ್ಗ, ಜಲ ಸಾರಿಗೆ ಮೂಲ ಸೌಕರ್ಯಕ್ಕೆ ಸಾಕಷ್ಟು ಬಂಡವಾಳ ಹೂಡಿಕೆಯಾಗಿದ್ದು, ಅದು ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಿರುವ ಆಶಾದಾಯಕ ಬೆಳವಣಿಗೆ ಸದ್ಯ ಕಾಣುತ್ತಿದೆ. ಹಾಗಾಗಿ ಈ ಬಾರಿ ರಕ್ಷಣಾ ಕ್ಷೇತ್ರದ ಮೂಲ ಸೌಕರ್ಯಕ್ಕೆ ಹೆಚ್ಚು ಹಣ ವಿನಿಯೋಗವಾಗಲಿದ್ದು,
ದೇಶದ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸಿದಂತಾಗಲಿದೆ. ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆ ಜನಪ್ರಿಯವಲ್ಲದ ಆರ್ಥಿಕ ಶಿಸ್ತಿನ ಬಜೆಟ್ ಮಂಡನೆ ಯಾಗಿದೆ. ಮೊದಲ ಬಜೆಟ್‌ನಲ್ಲೇ ಖರ್ಚಿನ ನಿರ್ವಹಣೆಯನ್ನು ಕೇಂದ್ರ ಹಣಕಾಸು ಸಚಿವರು ಶಿಸ್ತುಬದ್ಧವಾಗಿ ಮಾಡಿದ್ದಾರೆ. ಮುಂದಿನ 4 ವರ್ಷಗಳಲ್ಲಿ ಯೋಜಿತ ಬೆಳವಣಿಗೆಗೆ ಪೂರಕವಾದ ವೇದಿಕೆಯನ್ನು ಸಜ್ಜುಗೊಳಿಸುವ ಪ್ರಯತ್ನ ಈ ಬಜೆಟ್‌ನಲ್ಲಿ ಮಾಡಿದಂತಿದೆ.
* ಆರ್.ಜಿ. ಮುರಳೀಧರ್, ಆರ್ಥಿಕ ತಜ್ಞರು