Advertisement

ಶಾ ಪುತ್ರನ ಅಕ್ರಮ ಬಯಲಿಗೆಳೆದಾಗ ಬಿಜೆಪಿಯವರೇ ಅಭಿನಂದಿಸಿದ್ದರು!

07:58 AM Nov 06, 2017 | |

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಶಾ ಒಡೆತನದ ಗುಜರಾತ್‌ನಲ್ಲಿರುವ ಕಂಪನಿ ದಿಢೀರ್‌ ಲಾಭಗಳಿದ್ದನ್ನು ಬಯಲಿಗೆಳೆದದ್ದು ಚೆನ್ನೈ ಮೂಲದ ಪತ್ರಕರ್ತ ಸಿದ್ಧಾರ್ಥ ವರದರಾಜನ್‌ ಅವರ ಸಂಪಾದಕತ್ವದ “ದಿ ವೈರ್‌’ ಸುದ್ದಿತಾಣ. ಈ ಪ್ರಕರಣದ ಮೂಲಕ ದಿ ವೈರ್‌ ದೇಶಾದ್ಯಂತ ಸುದ್ದಿ ಮಾಡಿದ್ದು ಮಾತ್ರವಲ್ಲ ಬಿಜೆಪಿಗೆ ಶಾಕ್‌ ನೀಡಿದೆ. ಪ್ರಕರಣದ ಹಿನ್ನೆಲೆಯಲ್ಲಿ ಜಯ್‌ ಶಾ ತಿರುಗಿಬಿದ್ದಿದ್ದು, ಬರೋಬ್ಬರಿ 100 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ಈ ಪ್ರಕರಣದ ಬಗ್ಗೆ ಸಿದ್ಧಾರ್ಥ್ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದ್ದು, ಅದರ ವಿವರ ಇಲ್ಲಿದೆ.

Advertisement

ಯಾವ ದಾಖಲೆ ಆಧಾರದಲ್ಲಿ ನೀವು ಜಯ್‌ ಶಾ ವಿರುದ್ಧ ಆರೋಪಿಸಿದ್ದೀರಿ?
ಸೂಕ್ತ ದಾಖಲೆ ಇಟ್ಟುಕೊಂಡೇ ವರದಿ ಮಾಡಿದ್ದೇವೆ. ದಾಖಲೆಗಳ ಬಗ್ಗೆ ನಾನು ಈಗ ಏನನ್ನೂ ಹೇಳುವುದಿಲ್ಲ. 

ಈ ವರದಿಗೆ ಬಿಜೆಪಿ ವಲಯದಿಂದ ವಿರೋಧ ಇತ್ತೇ?
ಖಂಡಿತ ಇಲ್ಲ. ಅದೇ ವಿಶೇಷ. ಜಯ್‌ ಶಾ ವಿರುದ್ಧದ ವರದಿಗೆ ಬಿಜೆಪಿಯ ಕೆಲ ನಾಯಕರು ಖುದ್ದು ಮೆಸೇಜ್‌, ದೂರವಾಣಿ ಕರೆ ಮಾಡಿ “ಒಳ್ಳೆಯ ವರದಿ, ಉತ್ತಮ ಕೆಲಸ ಮಾಡಿದ್ದೀರಿ’ ಎಂದು ಅಭಿನಂದಿಸಿದ್ದರು.

ನಿಮ್ಮ ವಿರುದ್ಧ ಅಮಿತ್‌ ಶಾ ತಿರುಗಿ ಬಿದ್ದಿದ್ದಾರಾ?
ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರು ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಭರವಸೆ ನೀಡುತ್ತ ಬಂದಿದ್ದಾರೆ. ಆದರೆ ಈಗ ತಮ್ಮ ಪುತ್ರನ ವಿರುದ್ಧವೇ ಆರೋಪ ಬಂದಿರುವುದನ್ನು ಅಮಿತ್‌ ಶಾ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. 

ಮಾನನಷ್ಟ ಮೊಕದ್ದಮೆಗೆ ನಿಮ್ಮ ಪ್ರತಿಕ್ರಿಯೆ?
ಈ ಕೇಸನ್ನು ಸಮರ್ಥವಾಗಿ ಎದುರಿಸುತ್ತೇನೆ. ನಮ್ಮಲ್ಲಿ ಸಮರ್ಥ ವಕೀಲರಿದ್ದಾರೆ. ಅದಕ್ಕೂ ಹೆಚ್ಚಾಗಿ ನಮಗೆ ಜನ ಬೆಂಬಲ ಸಿಕ್ಕಿದೆ. ಕಾನೂನು ಹೋರಾಟದಲ್ಲಿ ಗೆಲ್ಲುವ ವಿಶ್ವಾಸವಿದೆ. 

Advertisement

ಪತ್ರಕರ್ತರಾಗಿ ಮೋದಿ ಆಡಳಿತವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಪ್ರಧಾನಿ ಮೋದಿ ಒಂದು ರೀತಿ ಪ್ರಶ್ನಾತೀತ ನಾಯಕ ಆಗಿರಬಹುದು. ಪ್ರಧಾನಿ ಆಗಿದ್ದಾಗ ಅವರಿಗಿದ್ದ ವರ್ಚಸ್ಸು ಈಗಿಲ್ಲ. ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿ, ಸ್ವತ್ಛ ಭಾರತ ಅಭಿಯಾನ ಇತ್ಯಾದಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳು ವಿಫ‌ಲವಾಗಿವೆ. ಕಾಂಗ್ರೆಸ್ಸಿನ 60 ವರ್ಷದ ಸಾಧನೆ 6 ತಿಂಗಳಲ್ಲಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ಈಗ ಏನಾಗಿದೆ? ಈ ಎಲ್ಲ ಕಾರಣಗಳಿಂದಾಗಿ ಮತ್ತೂಂದು ಅವಧಿಗೆ ಪ್ರಧಾನಿ ಆಗುತ್ತೇನೆ ಎಂದು ನೇರವಾಗಿ ಹೇಳಲು ಸಾಧ್ಯವಾಗದೇ 2022, 2023ರ ಟಾರ್ಗೆಟ್‌ ಫಿಕ್ಸ್‌
ಮಾಡುತ್ತಿದ್ದಾರೆ.

ಮೋದಿ ಮಾಧ್ಯಮದವರನ್ನು ದೂರವಿಟ್ಟಿದ್ದಾರೆಯೇ?
ಕಳೆದ ಮೂರು ವರ್ಷದಲ್ಲಿ ನಾಲ್ಕು ಚಾನೆಲ್‌ಗೆ ಸಂದರ್ಶನ ನೀಡಿದ್ದು ಬಿಟ್ಟರೆ ಮಾಧ್ಯಮದವರೊಂದಿಗೆ ಎಲ್ಲೂ ಮುಕ್ತವಾಗಿ ಮಾತಾಡಿಲ್ಲ. ಹಿಂದಿನ ಪ್ರಧಾನಿಗಳು ಹೀಗಿರಲಿಲ್ಲ. ಪ್ರಧಾನಿ ಮೋದಿ ಟ್ವಿಟರ್‌ನಲ್ಲೇ ಮಾತನಾಡುತ್ತಾರೆ. ಅದು ಏಕಮುಖ ಸಂವಹನ.

ನಿಮ್ಮ ಪ್ರಕಾರ ಮೋದಿ ಆಡಳಿತ ಸರ್ವಾಧಿಕಾರದತ್ತ ಸಾಗುತ್ತಿದೆಯೇ?
ಅಂತಹ ಸ್ಥಿತಿ ಇಲ್ಲ. ಆದರೆ, ಚುನಾವಣಾ ಆಯೋಗ, ನ್ಯಾಯಾಂಗ, ವಿಶ್ವವಿದ್ಯಾಲಯಗಳಂಥಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾರ್ಯ ನಡೆಯುತ್ತಿದೆ. ಗುಜರಾತ್‌ ಚುನಾವಣೆ ವೇಳಾಪಟ್ಟಿ ಘೋಷಣೆ ವಿಳಂಬ ಮಾಡಿದ್ದು ನೋಡಿದರೆ, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಗೌರಿ ಲಂಕೇಶ್‌ ಸೇರಿ ದೇಶದಲ್ಲಿ ಪತ್ರಕರ್ತರ ಹತ್ಯೆ, ಪತ್ರಿಕಾ ಸ್ವಾತಂತ್ರ್ಯದ ಹರಣವೇ?
ಹೌದು. ಪತ್ರಿಕಾ ಸ್ವಾತಂತ್ರ್ಯವನ್ನು ಬೇರೆ ಬೇರೆ ರೀತಿ ಹತ್ತಿಕ್ಕುವ ಕಾರ್ಯ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಗೌರಿ ಕೊಲೆ ದೈಹಿಕ ಬೆದರಿಕೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಕಾನೂನಿನಡಿಯ ಬೆದರಿಕೆ. ಯಾವುದೇ ಸಂಸ್ಥೆ ಅಥವಾ ಸರಕಾರದ ತಪ್ಪುಗಳನ್ನು
ಪ್ರಶ್ನಿಸುವ ಪತ್ರಕರ್ತರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಇದು ಗಂಭೀರ ವಿಚಾರ.

ವರದಿ ರಾಜಕೀಯ ಪ್ರೇರಿತವೇ?
ರಾಜಕಾರಣಿಗಳ ಹಗರಣ ಬಯಲಿಗೆಳೆದಾಗ ಇಂತಹ ಆರೋಪ ಸಹಜ. ಹಿಂದೆ ರಾಬರ್ಟ್‌ ವಾದ್ರಾ ವಿರುದ್ಧವೂ ಇಂತಹ ವರದಿ
ಪ್ರಕಟಿಸಿದ್ದೆವು. ವಾದ್ರಾ ಎಕ್ಸ್‌ಪೋಸ್‌ ಮಾಡಿದರೆ ಕಾಂಗ್ರೆಸ್‌ ವಿರೋಧಿ; ಜಯ್‌ಶಾ ವಿರುದ್ಧ ವರದಿ ಮಾಡಿದರೆ ಬಿಜೆಪಿ ವಿರೋಧಿ
ಎಂದು ವಾಖ್ಯಾನಿಸುವುದು ಎಷ್ಟು ಸರಿ?

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next