ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿರುವ ಕಲಬುರಗಿ ಕ್ಷೇತ್ರದಲ್ಲಿ ಮತದಾರರಿಗೆ ದೊಡ್ಡ ಪ್ರಮಾಣದಲ್ಲಿ ಹಣ, ಹೆಂಡ ಪೂರೈಸಲು ಜಿಲ್ಲೆಯ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ.
ವಿಧಾನ ಪರಿಷತ್ ಸದಸ್ಯರಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
ಕಲಬುರಗಿ ಜಿಲ್ಲೆಯ ಕೆಲ ಅಧಿಕಾರಿಗಳು ಕಾಂಗ್ರೆಸ್‌ನವರು ಮತದಾರರಿಗೆ ಹಣ, ಹೆಂಡ ಹಂಚಲು ನೆರವಾಗುತ್ತಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಕುಂಬಾರಗಲ್ಲಿ ವೃತ್ತದಲ್ಲಿ ಕಾಂಗ್ರೆಸ್ಸಿಗರು ಹಣ, ಮದ್ಯ ಹಂಚುವುದನ್ನು ತಡೆಯಲು ಮುಂದಾದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ.
ಇಷ್ಟಾದರೂ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಏ.19ರಂದು ರಜೆ ಪಡೆದು ಕಲಬುರಗಿಗೆ ತೆರಳಿ ಕಾಂಗ್ರೆಸ್ ಪರವಾಗಿ ಪೊಲೀಸ್ ಸೇವೆ ಬಳಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಆ ಮೂಲಕ ಸ್ಥಳೀಯ ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ. ಜತೆಗೆ ಏ.20ರಂದು ಕಲಬುರಗಿಯಲ್ಲೇ ಇದ್ದು, ಪೊಲೀಸರು ಕಾಂಗ್ರೆಸ್‌ಗೆ ನೆರವಾಗುವಂತೆ ಪ್ರಭಾವ ಬೀರಿದ್ದಾರೆ. ಕ್ಷೇತ್ರದಲ್ಲಿ 516 ಸೂಕ್ಷ್ಮ ಮತಗಟ್ಟೆಗಳಿದ್ದು,
ಇವುಗಳಿಗೆ ಹೊರಗಿನ ಪೊಲೀಸರು ಅಥವಾ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಬೇಕು. ಬಹಳಷ್ಟು ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ವರ್ಗಾವಣೆ ಅಗತ್ಯವೆನಿಸಿದೆ ಎಂದು ದೂರಿನಲ್ಲಿ ಕೋರಲಾಗಿದೆ.