Advertisement

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭ

09:24 AM May 13, 2020 | Suhan S |

ಕಲಘಟಗಿ: ತಾಲೂಕಿನಾದ್ಯಂತ ಉತ್ತಮ ಫಲವತ್ತತೆಗೆ ಅನುಗುಣವಾಗಿ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ರೈತರು ಹೊಲದತ್ತ ಮುಖಮಾಡಿ ಭೂಮಿ ಹಸನು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.

Advertisement

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ರೈತರಲ್ಲಿ ಹರ್ಷ ಮೂಡಿದೆ. ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಬೆಳೆದ ಬೆಳೆಗಳೆಲ್ಲವೂ ನಾಶವಾಗಿ ವ್ಯವಸಾಯಕ್ಕಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಯಾವುದೇ ಆದಾಯವಿಲ್ಲದೇ ವರ್ಷವಿಡಿ ಸಂಕಟದಲ್ಲಿಯೇ ಜೀವನ ಸಾಗಿಸುವಂತಾಗಿತ್ತು.

ಪ್ರಸಕ್ತ ವರ್ಷವಾದರೂ ಮಳೆ ಕೃಪೆ ತೋರಿದರೆ ಉತ್ತಮ ಬೆಳೆ ಪಡೆದು ನೆಮ್ಮದಿ ಜೀವನ ಸಾಗಿಸುವ ತವಕದಲ್ಲಿ ರೈತರಿದ್ದಾರೆ. ಈಗಾಗಲೇ ಹಿಂಗಾರು ಬೆಳೆ ಸಂದರ್ಭದಲ್ಲಿ ಕೋವಿಡ್ ಲಾಕ್‌ಡೌನ್‌ ಕಾರಣದಿಂದಾಗಿ ಸತತ 45 ದಿನಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆದ ರೈತರು ಇದೀಗ ಮುಂಗಾರು ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ. ಇದಕ್ಕಾಗಿ ಎತ್ತು ಹಾಗೂ ಟ್ರ್ಯಾಕ್ಟರ್‌ ಸಹಾಯದಿಂದ ಹೊಲಗದ್ದೆ ಸ್ವಚ್ಛಗೊಳಿಸಿ, ನೇಗಿಲುಹೊಡೆದು ಭೂಮಿ ಹದಗೊಳಿಸಿದ್ದಾರೆ. ನಿರೀಕ್ಷೆಯಂತೆ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿವೆ.

ಭತ್ತದ ಕಣಜವಾಗಿದ್ದ ಈ ಭಾಗದಲ್ಲಿ ವಾಣಿಜ್ಯ ಬೆಳೆಗಳೆ ಪಾರುಪಥ್ಯ ನಡೆಸಿವೆ. ಗೋವಿನಜೋಳ ಸುಮಾರು 18 ಸಾವಿರ ಹೆಕ್ಟೇರ್‌, ಸೋಯಾಬಿನ್‌ ಸುಮಾರು 12 ಸಾವಿರ ಹೆಕ್ಟೇರ್‌, ಭತ್ತ ಹಾಗೂ ಕಬ್ಬು ಪ್ರತ್ಯೇಕವಾಗಿ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಹತ್ತಿ ಸೇರಿದಂತೆ ಒಟ್ಟು 43 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಾಲೂಕಿನಾದ್ಯಂತ ವಿವಿಧ ಬೀಜಗಳ ಬಿತ್ತನೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಾದ್ಯಂತ ರೈತರು ಶೇ. 75ರಷ್ಟು ಭೂಮಿಯನ್ನು ಹಸನುಗೊಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ. ತಾಲೂಕಿನ ಕಲಘಟಗಿ, ತಬಕದಹೊನ್ನಿಹಳ್ಳಿ, ದುಮ್ಮವಾಡ ರೈತ ಸಂಪರ್ಕ ಕೇಂದ್ರಗಳು ಹಾಗೂ ತಾವರಗೇರೆ, ಮಿಶ್ರಿಕೋಟಿ, ಗಂಜಿಗಟ್ಟಿ , ಬೇಗೂರ ( ಪಟ್ಟಣದ ಕಿಲ್ಲಾ ) ಹೆಚ್ಚುವರಿ ಬೀಜ ವಿತರಣಾಕೇಂದ್ರಗಳಲ್ಲಿ ಇಲಾಖೆಯು ರಿಯಾಯ್ತಿ ದರದಲ್ಲಿ ರೈತರಿಗೆ ಅವಶ್ಯಕವಾದ ಬೀಜ, ಗೊಬ್ಬರ ಪೂರೈಸಲು ವ್ಯವಸ್ಥೆ ಮಾಡಲಾಗುವುದು.  –ಕೆ.ಎಫ್‌. ಕಟ್ಟೆಗೌಡರ, ಸಹಾಯಕ ಕೃಷಿ ನಿರ್ದೇಶಕ

Advertisement

ಒಂದು ವಾರದಿಂದ ಸಮರ್ಪಕ ಮಳೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿತ್ತುವಷ್ಟು ಹಾಗೂ ಸಸಿ ಹುಟ್ಟುವಷ್ಟು ಭೂಮಿಪಲವತ್ತತೆಯಿಂದ ಕೂಡಿದೆ. ಈ ವರ್ಷವಾದರೂ ಸಮರ್ಪಕ ಮಳೆಯಾದರೆ ನಾವು ಭೂಮಿಗೆ ಹಾಕಿದ ಬೆವರಿನ ಫಲವನ್ನಾದರೂ ಮರಳಿ ಪಡೆಯಬಹುದು.  –ಕಮಲಪ್ಪ ರಾಠೊಡ, ರೈತ, ಹುಲಗಿನಕಟ್ಟಿ

 

-ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next