ಬೆಳಗಾವಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಡಿ.25ರ ಬುಧವಾರ ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಡಿ. 27ರಂದು ನಡೆಯುವ ಸಾರ್ವಜನಿಕ ಬೃಹತ್ ಸಮಾವೇಶದ ಸ್ಥಳಕ್ಕೆ ಮಹಾತ್ಮಾ ಗಾಂಧಿ ನವನಗರ ಎಂದು ನಾಮಕರಣ ಮಾಡಲಾಗುವುದು. ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ ಎಂದು ಹೇಳಿದರು.
ಜೈ ಬಾಪು ಜೈ ಭೀಮ ಜೈ ಸಂವಿಧಾನ ಎಂದು ಘೋಷಣೆ ಮಾಡಿದ್ದೇವೆ ಎಂದ ಅವರು, ಡಿ. 26ರ ಗುರುವಾರ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದರು.
1924ರಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ಟಿಳಕವಾಡಿಯ ಪ್ರದೇಶದಲ್ಲಿ ನಡೆದಿತ್ತು. ಅದಕ್ಕೆ ಈಗ ವೀರಸೌಧ ಎಂದು ನಾಮಕರಣ ಮಾಡಲಾಗಿದೆ ಎಂದ ಸವರು, ಆಗ ಅಧಿವೇಶನ ನಡೆದ ವೀರಸೌಧ ಸ್ಥಳದಲ್ಲಿ ಈಗ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಹೇಳಿದರು.
ಈ ಸಭೆ ಸುಮಾರು 3 ರಿಂದ ಸುಮಾರು 4 ತಾಸುಗಳ ಕಾಲ ನಡೆಯಲಿದ್ದು, ಸಭೆಯಲ್ಲಿ ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನ, ಕೇಂದ್ರ ಸರ್ಕಾರದ ವಿರೋಧಿ ನೀತಿ ಸಂವಿಧಾನ ತಿದ್ದುಪಡಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಇದೇ ಸ್ಥಳದಲ್ಲಿ ಮಹಾತ್ಮಾ ಗಾಂಧಿ ಅವರ ಪುತ್ಥಳಿ ಅನಾವರಣ ನಡೆಯಲಿದೆ. ಇದಲ್ಲದೆ ಡಿ. 27ರಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಅನಾವರಣ ನಡೆಯಲಿದ್ದು, ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿರೋದ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.