ಬೆಂಗಳೂರು: ಪಶ್ಚಿಮ ಘಟ್ಟದ ಹಸಿರು ರಾಶಿ ಸದ್ಯದಲ್ಲೇ ಸಿಲಿಕಾನ್ ಸಿಟಿಯ ಕೆಂಪು ತೋಟದಲ್ಲಿ ಕಂಗೊಳಿಸಲಿದೆ. ಲಾಲ್‌ಬಾಗ್‌ನ ಸಿದ್ದಾಪುರ ಗೇಟ್ ಬಳಿ ಇರುವ 20-30 ಎಕರೆ ಪ್ರದೇಶದಲ್ಲಿ ಚಿಟ್ಟೆವನ, ಪಶ್ಚಿಮಘಟ್ಟದಲ್ಲಿರುವ ಸಸ್ಯಗಳ ಕಿರುವನ, ಹೈ ಡೆನ್ಸಿಟಿ ಕಿರುವನ, ಅಳಿವಿನ ಅಂಚಿನಲ್ಲಿರುವ ಗಿಡಗಳ ಕಿರುವನ, ಟ್ಯಾಕ್ಸ್ ಸೊನಾಮಿ ಪ್ರಭೇಧಗಳ ಕಿರುವನ ಈ 5 ಬಗೆಯ ಕಿರುವನಗಳನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಲಾಲ್‌ಬಾಗ್‌ನಲ್ಲಿ ಐದು ಪರಿಕಲ್ಪನೆಯುಳ್ಳ ಕಿರುವನ ನಿರ್ಮಾಣ ಸಂಬಂಧ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಮಂಡಳಿ ಸದಸ್ಯರು ಮತ್ತು ತಜ್ಞರೊಂದಿಗೆ ಮುಂದಿನ ಸೋಮವಾರ ಸಭೆ ನಡೆಸಲಾಗುವುದು. ನಂತರ ಮುಂದಿನ ಎರಡು ವಾರದೊಳಗಾಗಿ ಗಿಡ ನೆಡುವ ಕೆಲಸ ಆರಂಭಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್)ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ ತಿಳಿಸಿದ್ದಾರೆ.
ಇದು ಲಾಲ್‌ಬಾಗ್ ಕೆರೆಗೆ ಸಂಪರ್ಕಿಸುವ ಸ್ಥಳವಾಗಿರುವ ಕಾರಣ ಇಲ್ಲಿ ಪಶ್ಚಿಮ ಘಟ್ಟದ ಗಿಡಗಳು ಸೊಂಪಾಗಿ ಬೆಳೆಯಲಿವೆ. ಆದ್ದರಿಂದ ಇಲ್ಲಿ ಮಲೆನಾಡು ಭಾಗದ ವಿವಿಧ ಸಸ್ಯ ಪ್ರಭೇದಗಳನ್ನು ಬೆಳೆಸಲಾಗುವುದು. ಪಶ್ಚಿಮ ಘಟ್ಟದ ಸಸ್ಯಗಳ ಕಿರುವನಕ್ಕೆ ಸಂಬಂಧಿಸಿದಂತೆ 500 ಗಿಡಗಳು ಲಾಲ್‌ಬಾಗ್‌ನಲ್ಲಿವೆ.
ಆದರೆ ಇವುಗಳಲ್ಲಿ ಯಾವುದು ಈ ಕಿರುವನಕ್ಕೆ ಹೊಂದಿಕೆಯಾಗುತ್ತವೆ ಎಂದು ತಜ್ಞರಿಂದ ತಿಳಿದುಕೊಳ್ಳಬೇಕು. ನಂತರ ಲಾಲ್‌ಬಾಗ್‌ನಲ್ಲಿರುವ ಗಿಡಗಳನ್ನು ನೆಡಲಾಗುವುದು. ಉಳಿದ ಗಿಡಗಳನ್ನು ಮಲೆನಾಡು ಭಾಗದ ನರ್ಸರಿಗಳಿಂದ ಹಾಗೂ ಅರಣ್ಯ ಇಲಾಖೆಯ ನರ್ಸರಿಗಳಿಂದ ತರಸಿಕೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾವೆಲ್ಲಾ ಗಿಡಗಳು?: ಐದು ಕಿರುವನಗಳಲ್ಲಿ ಒಟ್ಟು 700ರಿಂದ 800 ಜಾತಿಯ ಗಿಡಗಳನ್ನು ಬೆಳೆಸುವ ಉದ್ದೇಶವಿದೆ. ಅದರಲ್ಲಿ ಪಶ್ಚಿಮ ಘಟ್ಟದ 100ರಿಂದ 150 ಗಿಡಗಳನ್ನು ಬೆಳೆಸಲು ಚಿಂತಿಸಲಾಗಿದೆ. ಪಶ್ಚಿಮ ಘಟ್ಟದ 25ಕ್ಕೂ ಹೆಚ್ಚು ಹಣ್ಣು ಬಿಡುವ ಗಿಡಗಳನ್ನು ನೆಡಲಾಗುವುದು.
ಇದರಿಂದ ಪಕ್ಷಿ ಸಂಕುಲವನ್ನು ಈ ಕಿರುವನ ಆಕರ್ಷಿಸಲಿದೆ. ಪಕ್ಷಿ ಸಂಕುಲಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿಯೇ ಪಶ್ಚಿಮ ಘಟ್ಟದ ಕಿರುವನ ನಿರ್ಮಾಣ ಮಾಡಲಾಗುವುದು. ಸದ್ಯ ಈ ಪರಿಕಲ್ಪನೆಯ ಕಿರುವನ ಯೋಜನೆಯ ಹಂತದಲ್ಲಿದೆ. ಆಗಸ್ಟ್ ನಂತರ ಇದನ್ನು ಕಾರ್ಯರೂಪಕ್ಕೆ ತರಲಾಗುವುದು. ನಂತರ ಈ ಕಿರುವನಕ್ಕೆ ಸಾರ್ವಜನಿಕರಿಗೂ ಪ್ರವೇಶ ಕಲ್ಪಿಸಲಾಗುವುದು ಎಂದು ಹೇಳಿದರು.