ಮಣಿಪಾಲ: ಸುಮಾರು 14 ವರ್ಷಗಳ ಬಳಿಕ ಕರ್ನಾಟಕ ಕರಾವಳಿ, ಮಲೆನಾಡು ಭಾಗದಲ್ಲಿ ನಕ್ಸಲ್ ನೆತ್ತರು ಹರಿದಿದೆ. ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಬಳಿಯ ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎಎನ್ಎಫ್ ಪಡೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ.
ಹಾಗಾದರೆ ಕರ್ನಾಟಕದಲ್ಲಿ ಈ ಹಿಂದೆ ಎಷ್ಟು ಬಾರಿ ನಕ್ಸಲ್ ಎನ್‌ಕೌಂಟರ್ ನಡೆದಿದೆ? ಎಷ್ಟು ಬಾರಿ ನಕ್ಸಲ್ ದಾಳಿ ನಡೆದಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೊದಲ ಸುಳಿವು
2002ರ ನವೆಂಬರ್ ನಲ್ಲಿ ಪಶ್ಚಿಮ ಘಟ್ಟದ ನಕ್ಸಲರ ತರಬೇತಿಯಲ್ಲಿ ಆಕಸ್ಮಿಕ ಗುಂಡು ಹಾರಿ ವೃದ್ಧೆಯೊಬ್ಬರಿಗೆ ಗಾಯವಾಗಿತ್ತು. ಹೀಗಾಗಿ ಮೊದಲ ಬಾರಿಗೆ ಕರ್ನಾಟಕದ ನಕ್ಸಲ್ ಚಟುವಟಿಕೆ ಹೊರ ಪ್ರಪಂಚಕ್ಕೆ ಬಯಲಾಗಿತ್ತು.
ಪ್ರಥಮ ಮುಖಾಮುಖಿ
ಆಗಸ್ಟ್ 6 2003: ಕುದುರೆಮುಖದ ಸಮೀಪದ ಸಿಂಗ್ಸಾರ್ ಗ್ರಾಮದ ರಾಮಚಂದ್ರ ಗೌಡ ಎಂಬವರ ಮನೆಯ ಬಳಿ ಪೊಲೀಸರು ಹಾಗೂ ನಕ್ಸಲರ ನಡುವೆ ಮೊದಲ ಬಾರಿ ಗುಂಡಿನ ಚಕಮಕಿ ನಡೆದಿತ್ತು.
ಈದುವಿನ ಮೊದಲ ಶೂಟ್ಔಟ್
ನವೆಂಬರ್ 17 2003: ಕಾರ್ಕಳದಿಂದ ಸುಮಾರು 15-20 ಕಿ.ಮಿ ದೂರ ಇರುವ ಈದುವಿನಲ್ಲಿ ಬೊಳ್ಳೆಟ್ಟು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಅಡಗಿದ್ದ ಹಾಜಿಮಾ ಹಾಗೂ ಪಾರ್ವತಿಯು ಹತ್ಯೆಯಾಗಿತ್ತು. ಯಶೋದಾ ಎಂಬಾಕೆಯನ್ನು ವಶಪಡಿಸಲಾಗಿತ್ತು.
ಕಬ್ಬಿನಾಲೆ ನೆಲಬಾಂಬ್ ಸ್ಫೋಟ
2004ರಲ್ಲಿ ಕಬ್ಬಿನಾಲೆಯಲ್ಲಿ ನಕ್ಸಲ್ ಕಾರ್ಯಾಚರಣೆ ಹೊರಟಿದ್ದ ಪೊಲೀಸ್ ತಂಡವನ್ನು ಗುರಿಯಾಗಿಸಿ ನಕ್ಸಲೀಯರು ನೆಲ ಬಾಂಬ್ ಸ್ಪೋಟಿಸಿದ್ದರು. ಘಟನೆಯಲ್ಲಿ ಹೆಬ್ರಿ ಪೊಲೀಸ್ ತಂಡವು ಸ್ವಲ್ಪದರಲ್ಲೇ ಜೀವಪಾಯದಿಂದ ಪಾರಾಗಿದ್ದರು.
2005ರ ಮೆಣಸಿನಹಾಡ್ಯ ಶೂಟೌಟ್: ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್ ಹಾಗೂ ಸಹಚರ ಶಿವಲಿಂಗು ಹತ್ಯೆಯಾಗಿತ್ತು.
ಮೇ 17 2005: ಪೋಲಿಸರಿಗೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಗಿರಿಜನ ಮುಖಂಡ ಶೇಷಯ್ಯ ಅವರನ್ನು ನಕ್ಸಲರು ಅಮಾನುಷವಾಗಿ ಹತ್ಯೆ ಮಾಡಿದ್ದರು.
ಜೂನ್ 23 2005: ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ದೇವರಬಾಳುವಿನಲ್ಲಿ 2005 ರ ಜೂ. 23ರಂದು ನಕ್ಸಲರೆಂದು ಗುರುತಿಸಿಕೊಂಡ ಅಜಿತ್ ಹಾಗೂ ಉಮೇಶ್ ಅವರನ್ನು ಆಗಿನ ಉಡುಪಿ ಎಸ್ಪಿಯಾಗಿದ್ದ ಮುರುಗನ್ ನೇತೃತ್ವದ ವಿಶೇಷ ಪೊಲೀಸ್ ತಂಡ ಹಾಗೂ ನಕ್ಸಲ್ ನಿಗ್ರಹ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು.
ಮುಟ್ಲುಪಾಡಿಯಲ್ಲಿ ನಕ್ಸಲ್ ದಾಳಿ
2006 ರಲ್ಲಿ ಕಾರ್ಕಳ ತಾಲೂಕಿನ ಮುಟ್ಲುಪಾಡಿ ಗ್ರಾಮದ ಸದಾನಂದ ಶೆಟ್ಟಿ ಎಂಬವರ ಮನೆಗೆ ದಾಳಿ ಮಾಡಿ ಅವರನ್ನು ಮರಕ್ಕೆ ಕಟ್ಟಿ ಹಾಕಿ ನಕ್ಸಲೀರು ಹಲ್ಲೆ ಮಾಡಿದ್ದರು. ಅಲ್ಲದೆ ಅವರ ಮೋಟಾರ್ ಬೈಕ್‌ಗೆ ಬೆಂಕಿ ಹಚ್ಚಿದ್ದರು. ಅನ್ಯಾಯದ ವಿರುದ್ದ ನಮ್ಮ ಹೋರಾಟ ಎನ್ನುವ ಪತ್ರವನ್ನು ಶಾಲಾ ಗೋಡೆಯ ಮೇಲೆ ಅಂಟಿಸಿ ಹೋಗಿದ್ದರು.
2006ರಲ್ಲಿ ಶೃಂಗೇರಿಯ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮೇಲೆ ನಕ್ಸಲ್ ದಾಳಿಯಾಗಿತ್ತು.
2006ರ ಡಿ. 26ರಂದು ಶೃಂಗೇರಿ ತಾಲೂಕಿನ ಕೆಸಮುಡಿ ಬಳಿ ನಡೆದ ಎನ್‌ಕೌಂಟರ್ ನಲ್ಲಿ ಕುತ್ಲೂರಿನ ದಿನಕರ ಮೃತನಾಗಿದ್ದ.
ಬಸ್‌ಗೆ ಬೆಂಕಿಯಿಟ್ಟಿದ್ದ ವಿಕ್ರಂ ಗೌಡ ತಂಡ
2007ರ ಜುಲೈನಲ್ಲಿ ಆಗುಂಬೆಯ ತಲ್ಲೂರು ಅಂಗಡಿಯ ಬಳಿ ವಿಕ್ರಂ ಗೌಡ ಸೇರಿ 9 ಮಂದಿಯಿದ್ದ ನಕ್ಸಲ್ ತಂಡ ಕೆಎಸ್‌ಆರ್‌ಟಿಸಿ ಬಸ್ ಅಡ್ಡ ಹಾಕಿ ಬಸ್ ಗೆ ಬೆಂಕಿ ಹಚ್ಚಿತ್ತು.
2007ರ ಜುಲೈನಲ್ಲಿ ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿಯಲ್ಲಿ ಎಸ್ಐ ವೆಂಕಟೇಶ್ ಹತ್ಯೆ ಮಾಡಲಾಗಿತ್ತು.
ಸೀತಾನದಿಯಲ್ಲಿ ನೆತ್ತರು ಹರಿಸಿದ್ದ ನಕ್ಸಲರು
2008ರ ಮೇ ತಿಂಗಳಲ್ಲಿ ಹೆಬ್ರಿ ಸಮೀಪದ ಸೀತಾನದಿ ನಾಡ್ಪಾಲುವಿನಲ್ಲಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಚಿಕ್ಕಮ್ಮನ ಮಗ ಸುರೇಶ್ ಶೆಟ್ಟಿ ಬಲಿಯಾಗಿದ್ದರು.
2008: ಬಂಧಿತ ನಕ್ಸಲೈಟ್ ಕೃಷ್ಣ ಯಾನೆ ಕಿರಣ್ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ಕುತ್ಲೂರ್ ಮತ್ತು ಕಾರ್ಕಳದ ತಿಂಗಳಮಕ್ಕಿಯಲ್ಲಿ ಹೂತಿಟ್ಟ ಅಪಾರ ಶಸ್ತ್ರಾಸ್ತ್ರ ಪತ್ತೆಯಾಗಿತ್ತು.
ಡಿಸೆಂಬರ್ 7 2008: ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ ಕೃಷಿಕ ಕೇಶವ ಯಡಿಯಾಳ ಎಂಬವರ ಬರ್ಬರ ಹತ್ಯೆಯಾಗಿತ್ತು.
ಕೂಡ್ಲು ಜಲವಿದ್ಯುತ್ ಗೆ ಬೆದರಿಕೆ
ಫೆಬ್ರವರಿ 14 2009: ಕೂಡ್ಲು ಜಲವಿದ್ಯುತ್ ಆರಂಭಕ್ಕೆ ನಕ್ಸಲರು ವಿರೋಧ ವ್ಯಕ್ತಪಡಿಸಿದ್ದರು, ಅಲ್ಲದೆ ಬೆದರಿಕೆ ಹಾಕಿದ್ದರು.
2009ರ ಅಗಸ್ಟ್ 22: ಕಿಗ್ಗ ಎನ್ ಕೌಂಟರ್
2009ರ ಅಗಸ್ಟ್19: ಶೃಂಗೇರಿಯ ನರಸಿಂಹಮೂರ್ತಿ ಯಾನೆಮಂಜಯ್ಯ ಮನೆಗೆ ನುಗ್ಗಿ ಬಿಜೆಪಿಯನ್ನು ಬೆಂಬಲಿಸದಂತೆ ಎಚ್ಚರಿಕೆ.
ನವೆಂಬರ್ 11 2009: ಉಡುಪಿ- ಶಿವಮೊಗ್ಗ-ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 1500 ಪೋಲಿಸರು ಏಕಕಾಲದಲ್ಲಿ ಐಟಿ ತಂತ್ರಗಾರಿಕೆಯನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಯೋಗ ನಡೆಸಿದ್ದರು.
ನವೆಂಬರ್ 20 2009: ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ರಾಯಚೂರು ಮೂಲದ ಶಂಕಿತ ನಕ್ಸಲ್ ಮಲ್ಲೇಶ್ ಎಂಬಾತನ ಬಂಧನ.
ನಕ್ಸಲ್ ವಸಂತ ಯಾನೆ ಆನಂದ್ ಹತ್ಯೆ
ಮಾರ್ಚ್ 1 2010ರ ಮುಂಜಾನೆ ಮುಟ್ಲುಪಾಡಿಯ ಕಾನನದಲ್ಲಿ ಪೊಲೀಸರ ಗುಂಡೇಟಿಗೆ ನಕ್ಸಲ್ ವಸಂತ ಯಾನೆ ಹತ್ಯೆಯಾಗಿದೆ.
ಡಿಸೆಂಬರ್ 10 2010ರಂದು ಶಂಕರನಾರಾಯಣ ಪೊಲೀಸರಿಂದ ನಕ್ಸಲ್ ಮುಖಂಡ ಶೇಖರ್ ಯಾನೆ ಪ್ರೇಮ್ ಯಾನೆ ರಂಜಿತ್ ಎಂಬಾತನ ಬಂಧನ.
ಸದಾಶಿವ ಗೌಡರ ಹತ್ಯೆ:
2011 ಡಿಸೆಂಬರ್ 19: ಕಬ್ಬಿನಾಲೆಯ ಸದಾಶಿವ ಗೌಡ ನಕ್ಸಲ್‌ರಿಂದ ಅಪಹರಣ, ಡಿ.28ರಂದು ತೆಂಗಮಾರು ಬಳಿ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲರ ಗುಂಡಿಗೆ ಬಲಿಯಾಗಿ ಕೊಳೆತ ಸ್ಥತಿಯಲ್ಲಿ ಸದಾಶಿವ ಗೌಡರ ಶವ ಪತ್ತೆ.
2012ರ ಮಾ. 10ರಂದು ಮಲವಂತಿಗೆ ಗ್ರಾಮದ ಪಶ್ಚಿಮಘಟ್ಟದ ಜಲಪಾತದ ಬಳಿ ಗುಂಡಿನ ಚಕಮಕಿ, ಅಂತಾರಾಜ್ಯ ಸಮಾವೇಶದ ಕ್ಯಾಂಪ್ ಪತ್ತೆ, ಶಸ್ತ್ರಾಸ್ತ್ರ, ಗ್ರೆನೇಡ್, ಸಾಹಿತ್ಯ ವಶ.
2012ರಲ್ಲಿ ಆ. 30 ಮತ್ತು 31ರಂದು ಮೊದಲ ಬಾರಿಗೆ ಬೆಳ್ತಂಗಡಿ ಪರಿಸರದ ಶಿಶಿಲ, ಶಿರಾಡಿ, ಅಡ್ಡೊಳೆಯ ಮನೆಗಳಿಗೆ 9 ಮಂದಿ ಸಶಸ್ತ್ರ ನಕ್ಸಲರು ಭೇಟಿ. ಸುಬ್ರಹ್ಮಣ್ಯದ ಪಳ್ಳಿಗದ್ದೆಯಲ್ಲೂ ಭೇಟಿ.