ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪೋಸ್ಟರ್, ಫ್ಲೆಕ್ಸ್ ರಹಿತ ನಗರ ಮಾಡುವುದು ಹಾಗೂ ಕಸ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಬಳಸುವ ಸಂಬಂಧ ಬಿ-ಪ್ಯಾಕ್ ನೀಡಿರುವ ಸಲಹೆಗಳನ್ನು ಒಂದು ವರ್ಷದಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಬಿ-ಪ್ಯಾಕ್ ಸಂಸ್ಥೆ ಕಚೇರಿಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿಗಳು, ಈಗಾಗಲೇ ಚಾಲ್ತಿಯಲ್ಲಿರುವ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು, ತೀವ್ರ ಸಂಚಾರ ದಟ್ಟಣೆ ಕಾರಿಡಾರ್, ವೈಟ್‌ಟಾಪಿಂಗ್, ಕಸ ವಿಲೇವಾರಿ ಮತ್ತು ಮೆಟ್ರೋ ಯೋಜನೆ ಕುರಿತು ಬಿ-ಪ್ಯಾಕ್ ತಂಡದೊಂದಿಗೆ ಚರ್ಚಿಸಿದರು.
ಹಾಗೇ ಚರ್ಚೆ ವೇಳೆ ತಂಡ ನೀಡಿರುವ ಸಲಹೆ, ಅಭಿಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು, ಶೀಘ್ರವೇ ಕಾರ್ಯರೂಪಕ್ಕೆ ತರುವುದಾಗಿ ಸಿಎಂ ತಿಳಿಸಿದರು. ಘನತ್ಯಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಕೆರೆಗಳ ಪುನಶ್ಚೇತನಕ್ಕೆ ಈ ಹಿಂದಿನ ಸರ್ಕಾರ ಆರಂಭಿಸಿದ್ದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಸಮ್ಮಿಶ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ಬಿ-ಪ್ಯಾಕ್ ಸದಸ್ಯರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಜತೆ ಈ ಬಗ್ಗೆ ಚರ್ಚಿಸಲಾಗುವುದು. ನಗರಾಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು, ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಸಿಎಂ ಭೇಟಿ ವೇಳೆ ಬಿ-ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಉಪಾಧ್ಯಕ್ಷರಾದ ಮೋಹನ್‌ದಾಸ್ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್, ಪದಾಧಿಕಾರಿಗಳಾದ ಆರ್.ಕೆ.ಮಿಶ್ರಾ, ಆನಂದ ಗುಂಡೂರಾವ್ ಭಾಗವಹಿಸಿದ್ದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಇದ್ದರು.