ಮಹದೇವಪುರ: ಬೆಳ್ಳಂದೂರು ಬಳಿಯ ಹೊರವರ್ತುಲ ರಸ್ತೆ ಬದಿಯಲ್ಲಿರುವ ಜಾಹಿರಾತು ಪಲಕಗಳ ವೀಕ್ಷಣೆಗೆ ಅಡ್ಡಲಾಗಿವೆ ಎಂಬ ಕಾರಣಕ್ಕೆ, ರಸ್ತೆ ವಿಭಜಕದಲ್ಲಿ ಬೆಳೆಸಲಾಗಿದ್ದ 24 ಮರಗಳನ್ನು ರಾತ್ರೋರಾತ್ರಿ ಕತ್ತರಿಸಲಾಗಿದೆ. ಜಾಹೀರಾತು ಮಾಫಿಯಾದವರ ಈ ಕೃತ್ಯಕ್ಕೆ ಸ್ಥಳೀಯ ನಾಗರಿಕರು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿನ ಬೆಳ್ಳಂದೂರು ಬಳಿಯ ಇಬ್ಬಲೂರು ಮೇಲ್ಸೇತುವೆ ರಸ್ತೆ ಸಮೀಪ ಮೇ 9ರ ತಡರಾತ್ರಿ ಘಟನೆ ನಡೆದಿದೆ. ಜಾಹಿರಾತು ಫಲಕಗಳ ವೀಕ್ಷಣೆಗೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ವಿಭಜಕದಲ್ಲಿನ ಮಗಳನ್ನು ಕಡಿದ ನಾಲ್ಕನೇ ಪ್ರಕರಣ ಇದಾಗಿದ್ದು, ಈವರೆಗೆ ಒಂದು ಪ್ರಕರಣ ಸಂಬಂಧವೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮರಗಳನ್ನು ಕಡಿದ ವಿಷಯ ತಿಳಿದು ಭಾನುವಾರ ವೃಕ್ಷ ವೈದ್ಯ ವಿಜಯ್ ನಿಶಾಂತ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ ಇಬ್ಬಲೂರು, ಬೆಳ್ಳಂದೂರು, ಎಚ್‌ಎಸ್‌ಆರ್ ಬಡಾವಣೆ ನಿವಾಸಿಗಳು, ಕತ್ತರಿಸಿದ ಮರಗಳ ಕೊಂಬೆಗಳು ಮತ್ತೆ ಬೆಳೆಯುವಂತಾಗಲು ಹಾಗೂ ಸೋಂಕು ತಗುಲದಂತೆ ಶಿಲಿಂದ್ರ ನಾಶಕ ಔಷಧ ಲೇಪಿಸಿ, ಚಿಕಿತ್ಸೆ ನೀಡಿದ್ದಾರೆ. ಹಾಗೇ ಮರ ಕಡಿದ ಮಾಫಿಆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ.
ಮಾರತ್ತಹಳ್ಳಿ, ಮಹದೇವಪುರ ಮತ್ತು ಬೆಳ್ಳಂದೂರು ಭಾಗದ ಹೊರವರ್ತುಲ ರಸ್ತೆಯಲ್ಲಿ ಜಾಹಿರಾತು ಫಲಕ ಅಳವಡಿಸುವ ಖಾಸಗಿ ಸಂಸ್ಥೆಗಳು, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತಮ್ಮ ಜಾಹಿರಾತುಗಳು ಸ್ಪಷ್ಟವಾಗಿ ಕಾಣಲಿ ಎಂಬ ಉದ್ದೇಶದಿಂದ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ.
ಸ್ವಾರ್ಥಕ್ಕಾಗಿ ಮತ ಕಡಿಯುವ ದುಷ್ಕರ್ಮಿಗಳ ವಿರುದ್ಧ ನಾಗರಿಕರು ಧ್ವನಿ ಎತ್ತಬೇಕಿದೆ. ಜಾಹಿರಾತು ಪಲಕದ ವೀಕ್ಷಣೆಗೆ ಅಡ್ಡಿಯಾಗುತ್ತದೆ ಎಂದು ಮರ ಕತ್ತರಿಸುವುದು ಕಾನೂನು ಬಾಹಿರವಾದ್ದು, ಹೀಗೆ ಮರ ಕತ್ತರಿಸಿದ ಸಂಸ್ಥೆಯ ಪರವಾನಗಿ ರದ್ದು ಮಾಡುವ ಜತೆಗೆ ಜಾಹಿರಾತು ಪಲಕ ತೆರವು ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದರು. 24 ಮರಗಳನ್ನು ಕತ್ತರಿಸಿದ ಪ್ರಕರಣ ವಿರೋಧಿಸಿ ಮೇ 17ರ ಗುರುವಾರ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಲಿದ್ದೇವೆ ಎಂದು ವೃಕ್ಷ ವೈದ್ಯ ವಿಜಯ್ ನಿಶಾಂತ್ ತಿಳಿಸಿದ್ದಾರೆ.
ಜಾಹೀರಾತು ಫಲಕ ಕಾಣುವುದಿಲ್ಲವೆಂಬ ಕಾರಣದಿಂದ ಎರಡು ಮೂರು ವರ್ಷದ ಮರಗಳನ್ನು ಕತ್ತರಿಸಲಾಗಿದ್ದು, ಸ್ಥಳೀಯ ನಾಗರಿಕ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮರಗಳ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಾಲಿಕೆಯ ಅಧಿಕಾರಿಗಳನ್ನು ಒತ್ತಾಯಿಸಲಾಗಿದ್ದು, ದೂರು ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ.
-ವಿಜಯ್ ನಿಶಾಂತ್, ಪರಿಸರ ಪ್ರೇಮಿ