Advertisement

ಪ್ರಶಸ್ತಿ ಅಭಿವೃದ್ಧಿಯ ಸೂಚಕವಲ್ಲ!

10:14 AM Apr 26, 2017 | |

ರಾಜ್ಯದ ಗ್ರಾ. ಪಂ.ಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ

Advertisement

ಒಂದು ಗ್ರಾಮವನ್ನು ಅಭಿವೃದ್ಧಿ ಪಡಿಸಲು ಬೇಕಾಗಿರುವುದು ಪ್ರಶಸ್ತಿ ಗ‌ಳಿಕೆಯಲ್ಲ. ಬದಲಾಗಿ ಜನರ ಸಹಭಾಗಿತ್ವ, ಸಹೃದಯವುಳ್ಳ ಪರಿಶುದ್ಧ ಹೃದಯವಂತಿಕೆ, ಶಿಸ್ತುಪಾಲನೆ, ಪಾರದರ್ಶಕತೆ, ಸಮರ್ಥ ನಾಯಕತ್ವ, ಅಭಿವೃದ್ಧಿಯ ಉತ್ಕಟ ಇಚ್ಛೆ, ಸಂಪನ್ಮೂಲ ಕ್ರೋಡೀಕರಣ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ, ಜಿ. ಪಂ., ತಾ. ಪಂ.ಗಳ ಸಹಕಾರ, ಮೂಲಭೂತ ಸೌಲಭ್ಯಗಳು, ಜನರ ತಿಳುವಳಿಕೆ ಮಟ್ಟ- ಈ ಎಲ್ಲ ಅಂಶಗಳು ಒಂದು ಗ್ರಾ. ಪಂ. ಅಭಿವೃದ್ಧಿಯಲ್ಲಿ ಪ್ರಮುಖವೆನಿಸುತ್ತವೆ.

ನಮ್ಮ ದೇಶದ ಪ್ರಜಾಪ್ರಭುತ್ವ ವಿಕೇಂದ್ರೀಕರಣದ ತಳಹದಿಯ ಮೇಲೆ ನಿಂತಿದೆ. ಈ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿಯೂ ಸುಮಾರು 70ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಜಿ.ಪಂ., ತಾ.ಪಂ. ಮತ್ತು ಗ್ರಾ. ಪಂ.ಗಳು ಹೆಚ್ಚಿನ ಪ್ರಾಮುಖ್ಯವನ್ನು ಪಡೆದುಕೊಂಡಿವೆ. ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಪ್ರಜೆಗಳ ಅಥವಾ ಜನರ ಆಯ್ಕೆಯೇ ಅಂತಿಮ. ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮದ ಜನರಿಗೆ ನೇರವಾಗಿ ಹಾಗೂ ಕೈಗೆಟಕುವ ಸರಕಾರ ಎನಿಸಿರುವ ಗ್ರಾ. ಪಂ. ಪಾತ್ರ ಬಹು ಪ್ರಮುಖ. ನಮ್ಮಲ್ಲಿ ಏಳು ದಶಕಗಳ ಹಿಂದೆಯೇ ಗ್ರಾಮ ಸ್ವರಾಜ್‌ ತತ್ವಗಳಿಗೆ ಮಹಾತ್ಮಾ ಗಾಂಧಿಯವರು ಒತ್ತು ನೀಡಿದ್ದಾರೆ. ಇದಲ್ಲದೇ ಸ್ವಾತಂತ್ರ್ಯದ ಅನಂತರ ಗ್ರಾಮ ಸರಕಾರಗಳನ್ನು ಸದೃಢಗೊಳಿಸುವ ಸಲುವಾಗಿ ಅನೇಕ ಸಮಿತಿಗಳನ್ನು ಮತ್ತು ಕೆಲವೊಂದು ಮಾರ್ಪಾಡುಗಳನ್ನು ತರಲಾಗಿದೆ. 

ಇದೆಲ್ಲವುಗಳ ಪ್ರಭಾವದಿಂದಾಗಿ ಏಪ್ರಿಲ್‌ 24, 1993ರಲ್ಲಿ ದೇಶಕ್ಕೆ ಏಕರೂಪದ ಪಂಚಾಯತ್‌ ರಾಜ್‌ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ತಿದ್ದುಪಡಿಯನ್ನು ದೇಶದ ಕೆಲವು ರಾಜ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ, ಇನ್ನೂ ಕೆಲವು ರಾಜ್ಯಗಳು ತಮ್ಮ ಪ್ರಾದೇಶಿಕ ನೆಲಗಟ್ಟಿನ ಆಧಾರದ ಮೇಲೆ ಕೆಲವೊಂದು ಮಾರ್ಪಾಟು ತಂದು ಜಾರಿಗೊಳಿಸಿದವು. ಪಂಚಾಯತ್‌ ರಾಜ್‌ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು 25 ವರ್ಷ ಸಮೀಪಿಸುತ್ತಿದ್ದರೂ ಸಹ ಇನ್ನೂ ನಮ್ಮ ದೇಶದ ಗ್ರಾಮಗಳ ಅಭಿವೃದ್ಧಿಯು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಕೇರಳ, ಕರ್ನಾಟಕ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಮಹಾರಾಷ್ಟ್ರ ಪಂಚಾಯತ್‌ ರಾಜ್‌ ತಿದ್ದುಪಡಿಯಲ್ಲಿ ಗ್ರಾಮ ಸರಕಾರಕ್ಕೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿವೆ. ಆದರೆ ಆಂಧ್ರ ಪ್ರದೇಶ, ಗುಜರಾತ್‌, ಬಿಹಾರ, ಒಡಿಶಾ, ಪಂಜಾಬ್‌ ರಾಜ್ಯಗಳಲ್ಲಿ ಗ್ರಾಮ ಸರಕಾರಗಳನ್ನು ಅಷ್ಟೊಂದು ಗಣನೆಗೆ ತೆಗೆದುಕೊಂಡಿಲ್ಲ. ಕೇಂದ್ರ ಸರಕಾರವೂ ಗ್ರಾಮಾಭಿವೃದ್ಧಿ ಸಲುವಾಗಿ ಸ್ಮಾರ್ಟ್‌ ವಿಲೇಜ್‌, ಸಂಸದ್‌ ಆದರ್ಶ ಗ್ರಾಮ ಯೋಜನೆ, ಡಿಜಿಟಲ್‌ ಇಂಡಿಯಾ, ರೂರ್ಬನ್‌ ಯೋಜನೆಗಳನ್ನು ಜಾರಿಗೊಳಿಸಿದರೂ ದೇಶಾದ್ಯಂತ ಕೆಲವೇ ಗ್ರಾ. ಪಂ.ಗಳನ್ನು ಹೊರತುಪಡಿಸಿ ಹೆಚ್ಚಿನವು ಅಭಿವೃದ್ಧಿ ಪಥದಲ್ಲಿ ಗುರುತಿಸಿಕೊಂಡಿಲ್ಲ. 

ಪ್ರಶಸ್ತಿ ಪಡೆದಿದ್ದರೂ ಸುಧಾರಣೆ ಆಗಬೇಕಿದೆ
ಕರ್ನಾಟಕ ರಾಜ್ಯವು ಪ್ರತಿ ವರ್ಷ ಏ.24ರಂದು ಕೇಂದ್ರ ಸರಕಾರದಿಂದ ನಡೆಯುವ ಪಂಚಾಯತ್‌ ರಾಜ್‌ ದಿವಸದಂದು ಒಂದಲ್ಲ ಒಂದು ಕಾರಣಕ್ಕೆ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತ ಬಂದಿದೆ. ಇದಲ್ಲದೇ ಕಳೆದ ವರ್ಷ ಮೂರು ಪ್ರಶಸ್ತಿಗಳನ್ನು ಹಣಕಾಸು ವಿಕೇಂದ್ರೀಕರಣ, ವಿಕೇಂದ್ರೀಕರಣ ಮತ್ತು ಪಂಚಾಯತ್‌ ರಾಜ್‌ ನೀತಿ ವಿಕೇಂದ್ರೀಕರಣವನ್ನು ಸಮರ್ಪಕವಾಗಿ ಅಳವಡಿಸಿಕೊಂಡ ಸಲುವಾಗಿ ಗಳಿಸಿಕೊಂಡಿದೆ. ಅಲ್ಲದೇ ಮೂರು ಜಿ.ಪಂ.ಗಳ ಅಧ್ಯಕ್ಷರು ಹಾಗೂ 43 ಪಂಚಾಯತ್‌ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಪ್ರಶಸ್ತಿ ಪಡೆದಿದ್ದಾರೆ. ಇಡೀ ದೇಶದಲ್ಲಿಯೇ ಪಂ.ರಾಜ್‌ ವ್ಯವಸ್ಥೆಯಲ್ಲಿ ಕರ್ನಾಟಕ ಸರಕಾರ ಉತ್ತಮ ಹೆಸರು ಗಳಿಸಿದ್ದರೂ ಅನೇಕ ತೊಡಕುಗಳು ಇನ್ನೂ ಇವೆ. ರಾಜ್ಯದ ಬೆರಳೆಣಿಕೆಯ ಗ್ರಾ. ಪಂ.ಗಳು ಮಾತ್ರ ದೇಶದ‌ಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಗುರುತಿಸಿಕೊಂಡಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶದ ಗ್ರಾ. ಪಂ.ಗಳನ್ನು ಹೊರತುಪಡಿಸಿ, ಉಳಿದ ಅನೇಕ ಗ್ರಾ. ಪಂ.ಗಳು, ಅದರಲ್ಲೂ ಮುಖ್ಯವಾಗಿ ಹಿಂದುಳಿದ ತಾಲೂಕುಗಳ ಗ್ರಾ. ಪಂ.ಗಳು ಇನ್ನೂ ಬಹಳಷ್ಟು ಸುಧಾರಿಸಬೇಕಿದೆ. 

Advertisement

ಕರ್ನಾಟಕದಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ, ಸಂಜೀವಿನಿ, ಗ್ರಾಮೀಣಾಭಿವೃದ್ಧಿಯ ವಿಷಯಗಳ ಅಧ್ಯಯನಕ್ಕಾಗಿ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯ, ಸುಮಾರು 600 ಪಂಚಾಯತ್‌ಗಳಲ್ಲಿ ಕೇರಳ ಮಾದರಿಯ ಕುಟುಂಬ ಶ್ರೀ ಯೋಜನೆಯ ಅನುಷ್ಠಾನ, ಸುಮಾರು 7,000 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ, ಗ್ರಾಮ ಸ್ವರಾಜ್ಯ ಯೋಜನೆಗಳ ಮೂಲಕ ಯೋಜನೆ, ಗ್ರಾಮಾಭಿವೃದ್ಧಿ ಸಾಧಿಸಲು ಒತ್ತು ನೀಡಿದ್ದರೂ ಅದರ ಪ್ರಗತಿ ನಿಧಾನಗತಿಯಲ್ಲಿದೆ. ಉದಾಹರಣೆಗೆ, ಎಷ್ಟೋ ಗ್ರಾಮಗಳಲ್ಲಿ ಸರಿಯಾದ ರಸ್ತೆ, ಶಾಲೆ, ಬೆಳಕು ಕುಡಿಯುವ ನೀರು ಮತ್ತು ನೈರ್ಮಲೀಕರಣದಂತಹ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ. 

ಕರ್ನಾಟಕದಲ್ಲಿ ಕೇಂದ್ರ ಸರಕಾರದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮಗಳ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಬಾರದು ಮತ್ತು ಬಡತನ ನಿರ್ಮೂಲನೆ ಮಾಡುವ ಸದುದ್ದೇಶದಿಂದ ಜಾರಿಗೆ ತಂದಿತು. ಪ್ರಾರಂಭದಲ್ಲಿ ಈ ಯೋಜನೆಯಲ್ಲಿ ಜನರು ತುಂಬಾ ಭರವಸೆಯಿಟ್ಟು ಪಂಚಾಯತ್‌ ಅಭಿವೃದ್ಧಿ ಕೆಲಸಕ್ಕೆ ಹೋಗುತ್ತಿದ್ದು, ಇತ್ತೀಚಿಗೆ ಸರಿಯಾದ ಸಂಬಳ ಸಿಗದ ಕಾರಣ ಮತ್ತು ಯಾವಾಗ ಕೆಲಸ ನೀಡುತ್ತಾರೆ ಎನ್ನುವ ಮಾಹಿತಿ ಕೊರತೆಯಿಂದ ನಗರಗಳಿಗೆ ವಲಸೆ ಹೋಗುವ ಕೂಲಿ-ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಯೋಜನೆ ಬಂದು ಸುಮಾರು ಹತ್ತು ವರ್ಷ ಕಳೆಯುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗದಿರುವುದು ದುರದೃಷ್ಟಕರ. ಈ ಯೋಜನೆಯಲ್ಲಿ ಅವ್ಯವಹಾರ, ಲೋಪದೋಷಗಳಿದ್ದರೂ ಸಹ ಯಾರೊಬ್ಬ ಅಧಿಕಾರಿಗಳೂ ಪಂಚಾಯತ್‌ ಪ್ರತಿನಿಧಿಗಳು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ. 

ಗ್ರಾ.ಪಂ. ಮಟ್ಟದಲ್ಲೂ ಭ್ರಷ್ಟಾಚಾರ
ಕೇಂದ್ರ ಸರಕಾರವು ಗ್ರಾಮದ ತೀವ್ರಗತಿ ಅಭಿವೃದ್ಧಿ ಸಲುವಾಗಿ 14ನೇ ಹಣಕಾಸಿನಿಂದ ಬರುವ ಅನುದಾನವನ್ನು ನೇರವಾಗಿ ಗ್ರಾ. ಪಂ.ಗಳಿಗೆ ನೀಡುತ್ತಿದೆ. ಇದರಲ್ಲಿ ಗ್ರಾಮಸ್ಥರು ಯೋಜನೆಗಳನ್ನು ತಯಾರಿಸಿಕೊಂಡು ತಮ್ಮ ಗ್ರಾಮಕ್ಕೆ ಮುಖ್ಯವಾಗಿ ಬೇಕಾಗುವ ಕೆಲಸ-ಕಾರ್ಯಗಳನ್ನು ಈ ಯೋಜನೆಯಡಿಯಲ್ಲಿ ಮಾಡಿಕೊಳ್ಳಬಹುದು. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಒಂದು ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಕೇವಲ ನಾಲ್ಕು-ಐದು ವರ್ಷಗಳಲ್ಲಿ ಸಾಧಿಸಬಹುದಾಗಿದೆ. ಪ್ರತಿ ಗ್ರಾ. ಪಂ.ಗೆ ರೂ.10ರಿಂದ 20 ಲಕ್ಷ ಬರುತ್ತಿದ್ದರೂ ಚುನಾಯಿತ ಪ್ರತಿನಿಧಿಗಳ ಸ್ವಾರ್ಥದಿಂದ ಪ್ರತಿಯೊಬ್ಬರೂ ಕೆಲಸ ಮಾಡಲು ಈ ಹಣವನ್ನು ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೇ ಪಂಚಾಯತ್‌ ಚುನಾವಣೆಯಲ್ಲಿ ಪ್ರತಿನಿಧಿಸುವುದು ಕೇವಲ ಹಣ ಗಳಿಸುವ ಸಾಧನವೆಂದು ತಿಳಿದುಕೊಂಡಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ.  

ನಮ್ಮ ರಾಜ್ಯದಲ್ಲಿ ಗ್ರಾ. ಪಂ. ಆಡಳಿತ ವಿಷಯದಲ್ಲಿ ಪಂಚಾಯತ್‌ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಹಿಸುತ್ತಿದ್ದು ಮತ್ತು ಪಿಡಿಒ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಿದ್ದರೂ ಕೆಲವು ಗುತ್ತಿಗೆದಾರರು ಅಧ್ಯಕ್ಷರುಗಳಿಗೆ, ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕಮಿಷನ್‌ ಆಸೆ ತೋರಿಸಿ ಗ್ರಾಮಾಭಿವೃದ್ಧಿಗೆ ಬರುವ ಅನುದಾನಗ‌ಳಲ್ಲಿ ಕೇವಲ ಶೇ. 20ರಿಂದ 30ರಷ್ಟನ್ನು ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿ ಉಳಿದ ಹಣವನ್ನು ಪರ್ಸೆಂಟೇಜ್‌ ಮೂಲಕ ಮೇಲಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಪರಿಪಾಠದಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಇದಲ್ಲದೇ ಹೆಚ್ಚಿನ ಗ್ರಾ. ಪಂ.ಗಳಲ್ಲಿ ಸಂಪನ್ಮೂಲ/ತೆರಿಗೆ ಸಂಗ್ರಹಣೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇರುವುದನ್ನು ನಾವು ಗಮನಿಸಬಹುದು. ಗ್ರಾಮೀಣ ಮಟ್ಟದಲ್ಲಿ ಗ್ರಾ. ಪಂ.ಗಳ ಮೂಲಕ ಪ್ರತಿ ಕುಟುಂಬದಿಂದ ತೆರಿಗೆಯನ್ನು ಸಮರ್ಪಕವಾಗಿ ಸಂಗ್ರಹಿಸದೇ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 

ಪ್ರಶಸ್ತಿಗೋಸ್ಕರ ಅಭಿವೃದ್ಧಿ!
ಗ್ರಾಮಾಭಿವೃದ್ಧಿ ಎನ್ನುವುದು ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ-ಸೌಲಭ್ಯಗಳನ್ನು ಒದಗಿಸುವುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಬರುವ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ, ರಸ್ತೆಗಳ ನಿರ್ಮಾಣಕ್ಕೆ ಮಾತ್ರ ಬಳಸುತ್ತಿರುವುದು ದುರದೃಷ್ಟಕರ. ಹೆಚ್ಚಿನ ಗ್ರಾ. ಪಂ.ಗಳು ಕೇವಲ ಶೇ.50ರಷ್ಟು ಮಾತ್ರ ಅಭಿವೃದ್ಧಿ ಹೊಂದಿದ್ದರೂ ಗಾಂಧಿ ಪುರಸ್ಕಾರ, ರಾಷ್ಟ್ರೀಯ ಪಂಚಾಯತ್‌ ಗೌರವ ಪ್ರಶಸ್ತಿಯನ್ನು ರಾಜಕೀಯ ಒತ್ತಡಗಳಿಂದ ಪಡೆದುಕೊಳ್ಳುತ್ತಿವೆ. ಕೇವಲ ಪ್ರಶಸ್ತಿ ಗಳಿಸುವಿಕೆಯಿಂದ ಗ್ರಾಮಾಭಿವೃದ್ಧಿ ಆಗಲಾರದು.
 
ಒಂದು ಗ್ರಾಮವನ್ನು ಅಭಿವೃದ್ಧಿ ಪಡಿಸಲು ಬೇಕಾಗಿರುವುದು ಪ್ರಶಸ್ತಿ ಗ‌ಳಿಕೆಯಲ್ಲ. ಬದಲಾಗಿ ಜನರ ಸಹಭಾಗಿತ್ವ, ಸಹೃದಯವುಳ್ಳ ಪರಿಶುದ್ಧ ಹೃದಯವಂತಿಕೆ, ಶಿಸ್ತುಪಾಲನೆ, ಪಾರದರ್ಶಕತೆ, ಸಮರ್ಥ ನಾಯಕತ್ವ, ಅಭಿವೃದ್ಧಿಯ ಉತ್ಕಟ ಇಚ್ಛೆ, ಸಂಪನ್ಮೂಲ ಕ್ರೋಢೀಕರಣ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ, ಜಿ. ಪಂ., ತಾ. ಪಂ.ಗಳ ಸಹಕಾರ, ಮೂಲಭೂತ ಸೌಲಭ್ಯಗಳು, ಜನರ ತಿಳುವಳಿಕೆ ಮಟ್ಟ- ಈ ಎಲ್ಲ ಅಂಶಗಳು ಒಂದು ಗ್ರಾ. ಪಂ. ಅಭಿವೃದ್ಧಿಯಲ್ಲಿ ಪ್ರಮುಖವೆನಿಸುತ್ತವೆ. ಇದಲ್ಲದೇ ಗ್ರಾ. ಪಂ.ಗಳು ಕೆಲವು ಮುಖ್ಯವಾದ ಕಾರ್ಯಗಳನ್ನು ಮಾಡಬೇಕಾಗಿವೆ. ಗ್ರಾಮದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಜನರ ಭಾಗವಹಿಸುವಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಆ ದಿಸೆಯಲ್ಲಿ ನಮ್ಮ ರಾಜ್ಯದ ಎಲ್ಲ ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಜನರು ಒಗ್ಗೂಡಿ, ಈಗಾಗಲೇ ಇರುವ ಮಾದರಿ ಗ್ರಾ. ಪಂ.ಗಳಿಗೆ ಪೈಪೋಟಿ ನೀಡುವಂತೆ ತಮ್ಮ ತಮ್ಮ ಪಂಚಾಯತ್‌ಗಳನ್ನು ಅಭಿವೃದ್ಧಿಗೊಳಿಸಬೇಕಾಗಿದೆ.

– ಡಾ| ನಾರಾಯಣ ಬಿಲ್ಲವ

Advertisement

Udayavani is now on Telegram. Click here to join our channel and stay updated with the latest news.

Next