ಮುದ್ದೇಬಿಹಾಳ: ಪಟ್ಟಣದಲ್ಲಿ 4-5 ತಿಂಗಳಿಂದ ಒಳಚರಂಡಿ (ಯುಜಿಡಿ) ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಎಲ್ಲೆಂದರಲ್ಲಿ ನೆಲ ಅಗೆಯುವ ಕಾರ್ಯ ಪ್ರಗತಿಯಲ್ಲಿದೆ. ಇಂತಹ ಸಂದರ್ಭ ಯುಜಿಡಿ ಕಾರ್ಮಿಕರು ಜೆಸಿಬಿ ಯಂತ್ರ ಬಳಸಿ ನೆಲ ಅಗೆಯುವಾಗಿ ಬಿಎಸ್‌ಎನ್‌ಎಲ್ ಕೇಬಲ್
ತುಂಡಾಗಿರುತ್ತದೆ. ಅದರೆ ತುಂಡಾದ ಕೇಬಲ್ ಶೀಘ್ರ ದುರಸ್ತಿ ಆಗದ ಪರಿಣಾಮ ಇಲ್ಲಿನ ಬಿಎಸ್‌ಎನ್‌ಎಲ್ ಗ್ರಾಹಕರು ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮ ಇಂಟರ್ನೆಟ್ ಬಳಕೆ ಮಾಡುವ ಗ್ರಾಹಕರು ಬಿಎಸ್‌ಎನ್‌ಎಲ್ ಸೇವೆಯಿಂದ ಬೇರೊಂದು ಕಂಪನಿಯ ನೆಟ್‌ವರ್ಕ್ ಸೇವೆಗೆ ವಲಸೆ ಹೋಗತೊಡಗಿದ್ದಾರೆ. ಹೀಗಾಗಿ ಭಾರತ್ ಸಂಚಾರ ನಿಗಮ ಲಿಮಿಟೆಡ್ ಅನ್ನೋದು ಬಾರದ ಸಂಚಾರ ನಾಟವರ್ಕ್ ಲಿಮಿಟೆಡ್ ಅನ್ನೋ ಟೀಕೆಗೊಳಗಾಗತೊಡಗಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಲ್ಲಿ ಎಲ್ಲವೂ ಸರಿಯಿಲ್ಲ. ಕೇಬಲ್ ತುಂಡಾದ ಕೂಡಲೇ, ಸಂಪರ್ಕದಲ್ಲಿ ವ್ಯತ್ಯಯ ಆದಲ್ಲಿ ತಕ್ಷಣವೇ ಸ್ಪಂ ದಿಸುವ ಕರ್ತವ್ಯ ಇಲ್ಲಿನ ದೂರಸಂಪರ್ಕ ಕೇಂದ್ರದ ಸಿಬ್ಬಂದಿಯದ್ದಾಗಿದೆ. ಆದರೆ ಕೇಂದ್ರದಲ್ಲಿ ಲೈನ್‌ಮನ್‌ಗಳ ಕೊರತೆ ಇರುವುದು ಸಮಸ್ಯೆ
ಗಂಭೀರಗೊಳ್ಳಲು ಕಾರಣವಾಗಿದೆ. ಇಡೀ ಪಟ್ಟಣಕ್ಕೆ ಇಬ್ಬರೇ ಲೈನ್‌ಮನ್‌ಗಳಿದ್ದು ಒಂದಿಬ್ಬರು ಹೊರ ಗುತ್ತಿಗೆಯವರ ಸಹಕಾರದೊಂದಿಗೆ ಸಮಸ್ಯೆ ಪರಿಹಾರಕ್ಕೆ ಹೆಣಗುವ ದುಸ್ಥಿತಿ ಇದೆ. ಹೀಗಾಗಿ ಎಲ್ಲೇ ಸಂಪರ್ಕ ಸ್ಥಗಿತಗೊಂಡರೂ ತಕ್ಷಣದ ದುರಸ್ಥಿ ಸಾಧ್ಯವೇ ಎಲ್ಲ ಎನ್ನುವಂತಾಗಿದೆ ಎಂದು ಜನತೆ
ಟೀಕಿಸುತ್ತಿದ್ದಾರೆ.
ಒಳಚರಂಡಿ ಗುತ್ತಿಗೆದಾರರು ನೆಲ ಅಗೆಯುವಾಗ ಎಲ್ಲೆಲ್ಲಿ ಬಿಎಸ್‌ಎನ್‌ಎಲ್ ಅಂಡರಗ್ರೌಂಡ್ ಕೇಬಲ್ ಇವೆಯೋ ಅಲ್ಲೆಲ್ಲ ಬಿಎಸ್‌ಎನ್‌ಎಲ್ ಲೆ„ನಮನ್‌ಗಳ ಎದುರಲ್ಲೇ ಕೇಬಲ್‌ಗೆ ಧಕ್ಕೆ ಆಗದಂತೆ ಅಗೆಯಬೇಕು ಎನ್ನುವ ನಿಯಮ ಇದೆ. ಆದರೆ ಸಿಬ್ಬಂದಿ ಕೊರತೆಯಿಂದನೆಲ ಅಗೆಯುವಾಗ ಲೈನ್‌ಮನ್‌ಗಳ ಉಪಸ್ಥಿತಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೆಸಿಬಿ ಆಪರೇಟರುಗಳು ಎಂದಿನಂತೆ ತಮ್ಮ ನೆಲ ಅಗೆಯುವ ಕಾರ್ಯವನ್ನು ಯಾರ ಬರುವಿಕೆಗೂ ಕಾಯದೆ ನಡೆಸುತ್ತಾರೆ. ಅಗೆಯುವಾಗ ಕೇಬಲ್ ಜೆಸಿಬಿ ಬಕೆಟ್‌ಗೆ ಸಿಕ್ಕಲ್ಲಿ ಹಿಂದೆ ಮುಂದೆ ನೋಡದೆ ಕಿತ್ತಿ ಬಿಡುತ್ತಾರೆ. ಆಗ ಕೇಬಲ್ ಅಗೆದ ಸ್ಥಳದಲ್ಲಿ ಮಾತ್ರ ತುಂಡಾಗದೆ ನೆಲದ ಒಳಗಡೆನೇ ಎಲ್ಲಿ ಬೇಕಲ್ಲಿ ತುಂಡಾಗಿ ದುರಸ್ತಿಗೆ ಸಾಕಷ್ಟು ಸಮಸ್ಯೆ ತಂದೊಡ್ಡತೊಡಗಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ವಿದ್ಯಾನಗರ, ಮಾರುತಿನಗರ, ಪುರಸಭೆ, ಡಾ| ಪದಕಿ ಆಸ್ಪತ್ರೆ, ಹಳೆ ಡಿಸಿಸಿ ಬ್ಯಾಂಕ್ ಏರಿಯಾದಲ್ಲಿ ಸಾಕಷ್ಟು ಜನರು ತಮ್ಮ ಮನೆಗಳಲ್ಲಿ, ಸೈಬರ್ ಕೆಫೆಗಳಲ್ಲಿ, ಡಿಟಿಪಿ ಕೇಂದ್ರಗಳಲ್ಲಿ, ಪುರಸಭೆ ಕಚೇರಿಯಲ್ಲಿ ಬಿಎಸ್ ಎನ್‌ಎಲ್ ಸೇವೆ ಪಡೆದುಕೊಂಡಿದ್ದಾರೆ. ಈಗ್ಗೆ 15 ದಿನಗಳಿಂದ ತುಂಡಾದ ಕೇಬಲ್ ದುರಸ್ತಿ ಮಾಡದ ಪರಿಣಾಮ ಈ ಭಾಗದಲ್ಲೆಲ್ಲ ಸೇವೆ ಬಂದ್ ಆಗಿದೆ. ದೂರವಾಣಿಗಳು ಡೆಡ್ ಆಗಿವೆ. ಪರಿಸ್ಥಿತಿ ಹೀಗಿದ್ದರೂ ಯುಜಿಡಿಯವರಾಗಲಿ, ಬಿಎಸ್‌ಎನ್ನೆಲ್‌ನವರಾಗಲು ದುರಸ್ತಿಗೆ ಮುಂದಾಗದಿರುವುದು ಪರಿಸ್ಥಿತಿ ಕೈಮೀರಲು ಅವಕಾಶ ಮಾಡಿಕೊಟ್ಟಂತಾಗಿದೆ. ಸಂಪರ್ಕ ಹಲವು ದಿನಗಳಿಂದ ಬಂದ್ ಆಗಿದ್ದರೂ ಬಿಎಸ್‌ಎನ್ನೆಲ್‌ನವರು ಮಾಸಿಕ ಬಿಲ್ ತುಂಬದಿದ್ದರೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿ ಬಲವಂತವಾಗಿ ಬಿಲ್ ತುಂಬಿಸಿಕೊಳ್ಳುತ್ತಿರುವುದು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ. ಯುಜಿಡಿ ಗುತ್ತಿಗೆದಾರರು, ಬಿಎಸ್ಸೆನ್ನೆಲ್ ಅ ಕಾರಿಗಳು ಪರಸ್ಪರ ಸಮನ್ವಯ ಸಾ ಸಿಕೊಂಡು ಕೂಡಲೇ ದುರಸ್ಥಿಗೆ ಕ್ರಮ ಕೈಗೊಂಡು ಎಂದಿನಂತೆ ಸೇವೆ ಒದಗಿಸದಿದ್ದರೆ ಸಾರ್ವಜನಿಕ ಸಂಘಟನೆಗಳ ಸಹಯೋಗದೊಂದಿಗೆ ಯುಜಿಡಿ ಕಾಮಗಾರಿ ಬಂದ್ ಮಾಡಿಸಿ ಬಿಎಸ್ಸೆನ್ನೆಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜನತೆ ಎಚ್ಚರಿಸಿದ್ದಾರೆ. ಈಗಲಾದರೂ ಯುಜಿಡಿ ಕಾಮಗಾರಿ ನಿರ್ವಹಿಸುವವರು ಎಚ್ಚೆತ್ತುಕೊಂಡು ಬಿಎಸ್ಸೆನ್ನೆಲ್ ಮೇಲೆ ಒತ್ತಡ ಹೇರಿ, ಖಾಸಗಿ ಸಿಬ್ಬಂದಿಯನ್ನಾದರೂ ಬಳಸಿಕೊಂಡು ಮೊದಲಿನಂತೆ ಬಿಎಸ್ಸೆನ್ನೆಲ್ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸಿ ಕೋರ್ಟಿನಲ್ಲಿ
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.
15 ದಿನದಿಂದ ನಮ್ಮ ಮನೆಗೆ
ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಇಲ್ಲವಾಗಿದೆ. ಯುಜಿಡಿ ಕಾಮಗಾರಿ ನಿರ್ವಹಿಸುವವರಿಗೆ ಮತ್ತು ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ. ಏನೂ ಪ್ರಯೋಜನ ಆಗುತ್ತಿಲ್ಲ. ಪ್ರತಿಭಟನೆ ಮತ್ತು ಕೋರ್ಟ್ ಮೊರೆ ಹೋಗುವುದೊಂದೇ ಈಗ ಉಳಿದಿರುವ ದಾರಿ.
ಮುತ್ತು ವಡವಡಗಿ, ಬಿಎಸ್ಸೆನ್ನೆಲ್ ಗ್ರಾಹಕ
ನಾವು ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ನೆಲ ಅಗೆಯುವಾಗ ಒಬ್ಬ ಲೈನ್ ಮನ್ ಕೂಡ ಬರುವುದಿಲ್ಲ. ಕೇಬಲ್ ತುಂಡಾದಾಗ ತಕ್ಷಣ ದುರಸ್ತಿ ಮಾಡುವಂತೆ ಮಾಹಿತಿ ನೀಡಿದರೂ ಗಂಭಿರವಾಗಿ ಪರಿಗಣಿಸುವುದಿಲ್ಲ. ಕೇಳಿದರೆ ಸಿಬ್ಬಂದಿ ಇಲ್ಲ ಅನ್ನೋ ನೆಪ ಹೇಳುತ್ತಾರೆ.
ನವೀನ್ ಎನ್. ಯುಜಿಡಿ ಕಾಮಗಾರಿ ಉಸ್ತುವಾರಿ ಎಂಜಿನೀಯರ್
ಸಿಬ್ಬಂದಿ ಕೊರತೆಯಿಂದ ಎಲ್ಲ ಕಡೆ ಕೇಬಲ್ ದುರಸ್ತಿ ಸಾಧ್ಯವಾಗುತ್ತಿಲ್ಲ. ಒಂದೊಂದು ಕಡೆ ಕೇಬಲ್ ದುರಸ್ತಿ ಮಾಡಿಕೊಂಡು ಬರಲಾಗುತ್ತಿದೆ. ತಾಳಿಕೋಟೆ ಎಸ್ ಡಿಇ ಕೇಂದ್ರದಿಂದಲೂ ಲೈನ್‌ಮನ್ ಕರೆಸಿ ಕೆಲಸ ಮಾಡಿಸಲಾಗುತ್ತಿದೆ. ನಮ್ಮ ಸಮಸ್ಯೆಯನ್ನೂ ಅರಿತುಕೊಳ್ಳಬೇಕು.
ವಿ.ಐ.ಹಿರೇಮಠ,. ಪ್ರಭಾರ ಎಸ್ಡಿಸಿ, ದೂರಸಂಪರ್ಕ ಕೇಂದ್ರ, ಮುದ್ದೇಬಿಹಾಳ