Advertisement

ಸರಕಾರದಿಂದ ಹಿಂದೂ ಸಂಘಟನೆಗಳ ದಮನಿಸುವ ಯತ್ನ : ಹಿಂಜಾವೇ ಪ್ರತಿಭಟನೆ

03:43 PM Oct 31, 2017 | Team Udayavani |

ಪುತ್ತೂರು: ಪೊಲೀಸ್‌ ಬಲ ಪ್ರಯೋಗದ ಮೂಲಕ ಹಿಂದೂ ಸಂಘಟನೆಗಳನ್ನು ದಮನಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಇಲ್ಲಿನ ಗಾಂಧಿ ಕಟ್ಟೆಯ ಬಳಿ ಸೋಮವಾರ
ಪ್ರತಿಭಟನೆ ನಡೆಯಿತು.

Advertisement

ಹಲವು ದೇಶದ್ರೋಹಿ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿರುವ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆದ ಸಮಾವೇಶ ಹಾಗೂ ವಾಹನ ಜಾಥಾಕ್ಕೆ ಅಡ್ಡಿಪಡಿಸಿದ ಪೊಲೀಸ್‌ ಇಲಾಖೆ ವಿರುದ್ಧ, ಉಪ್ಪಿನಂಗಡಿ ಹಾಗೂ ಕಡಬಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣ ವಿರೋಧಿಸಿ, ಡಿವೈಎಸ್ಪಿ ಗಣಪತಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಸಿಬಿಐಯಿಂದ ಪರಿಗಣಿಸಲ್ಪಟ್ಟಿರುವ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಮತೀಯವಾದಿ ಭಯೋತ್ಪಾದನ ಸಂಘಟನೆಗಳಿಗೆ ಬೆಂಬಲಿಸಿ ಕಾರ್ಯನಿರ್ವಹಿಸುತ್ತಿರುವ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ಹಮ್ಮಿಕೊಂಡ ಸಮಾವೇಶ ಹಾಗೂ ವಾಹನ ರ‍್ಯಾಲಿಗೆ ಅನುಮತಿ ಪಡೆದಿದ್ದರೂ ಪೊಲೀಸ್‌ ಇಲಾಖೆ ಅಡ್ಡಿಪಡಿಸಿದೆ ಎಂದು ಆರೋಪಿಸಿದ ಅವರು, ಭಗವಧ್ವಜದ ಅಡಿಯಲ್ಲಿ
ಕೆಲಸ ಮಾಡಬಾರದು ಎನ್ನುವ ಪೊಲೀಸ್‌ ಇಲಾಖೆಗೆ ಸವಾಲು ಹಾಕಲು ನಾವು ಸಿದ್ಧರಿದ್ದೇವೆ. ಪ್ರಾಣವನ್ನಾದರೂ ಬಿಟ್ಟೇವು ಆದರೆ ಹಿಂದುತ್ವಕ್ಕಾಗಿನ ಹೋರಾಟ ಬಿಡಲಾರೆವು ಎಂದು ಎಚ್ಚರಿಸಿದರು.

ಯಾವ ನ್ಯಾಯ ?
ಪ್ರಧಾನಿ ನರೇಂದ್ರ ಮೋದಿ ಅವರ ಅವಹೇಳನ ಮಾಡಿದ ಕುರಿತು ದೂರು ನೀಡಿದರೂ ಆರೋಪಿಯ ವಿರುದ್ಧ ಇದು
ವರೆಗೂ ಪ್ರಕರಣ ದಾಖಲಿಸಿಲ್ಲ. ಆದರೆ ಕಡಬ ಹಾಗೂ ಉಪ್ಪಿನಂಗಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಗಳನ್ನು ಆತುರದಲ್ಲಿ ಬಂಧಿಸಿದ್ದಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದ ಅಜೆಂಡಾ ಕೆಲಸ ಮಾಡುವ ಇಲಾಖೆಗಳ ಧೋರಣೆಯನ್ನು ನಾವು ಎಂದಿಗೂ ಖಂಡಿಸುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಸುರೇಶ್‌ ಆಳ್ವ ಮಾತನಾಡಿದರು. ಬಿಜೆಪಿ ಮುಖಂಡ ರಾಜೇಶ್‌ ಬನ್ನೂರು, ಹಿಂಜಾವೇ ಮುಖಂಡರಾದ ಅಜಿತ್‌ ರೈ ಹೊಸಮನೆ, ಸಚಿನ್‌ ರೈ ಪಾಪೆಮಜಲು, ಕಾರ್ಯ ಕರ್ತರಾದ ಗಂಗಾ ಧರ ರೈ, ಪ್ರಸನ್ನ ಪಡುಮಲೆ, ನಾಗೇಶ್‌ ರೈ ಸಹಿತ ಹಲವು ಮಂದಿ ಕಾರ್ಯಕರ್ತರು ಪಾಲ್ಗೊಂಡರು. ಹಿಂಜಾವೇ ಮುಖಂಡ, ನ್ಯಾಯವಾದಿ ಚಿನ್ಮಯ ರೈ, ಸ್ವಾಗತಿಸಿ, ನಿರ್ವಹಿಸಿದರು. ನಗರ ಠಾಣೆಯ ಪೊಲೀಸರು ಬಂದೋಬಸ್ತ್ ನಡೆಸಿದರು. 

Advertisement

ಸವಾಲಿಗೆ ಸಿದ್ಧ
ಸರಕಾರ, ಇಲಾಖೆಗಳು ಸಂಘರ್ಷಕ್ಕೆ ಬೆಂಬಲಿಸಿದರೆ ಸವಾಲಿಗೆ ಹಿಂದೂ ಸಂಘಟನೆಗಳೂ ಸಿದ್ಧವಿವೆ ಎಂದು
ಎಚ್ಚರಿಸಿದ ಅವರು, ಷಡ್ಯಂತ್ರಗಳನ್ನು ಭೇದಿಸಿ ಹಿಂದೂ ಸಮುದಾಯ ಬೆಂಬಲಿಸಲು ಕಾರ್ಯಕರ್ತರು ನಿರಂತರ
ಶ್ರಮಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ಕೆಲಸ ಮಾಡುವ ಇಲಾಖೆಗಳಿಗೆ ಮುಂದಿನ ದಿನಗಳಲ್ಲಿ ತಕ್ಕ
ಶಾಸ್ತಿ ಕಾದಿದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next