ಉಡುಪಿ: ಹಿಂದೂ ಸಂಘಟ ನೆಯ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆಯಿಂದ ವಿನಾಕಾರಣ ಕಿರು ಕುಳ ನೀಡಲಾಗುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೂ ಸುಮೋಟೊ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಮತ್ತು ಆ ಪ್ರಕರಣಗಳನ್ನು ತತ್ಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಸಹಿತ ಹಿಂದೂ ಸಂಘಟನೆಗಳಿಂದ ಜಿಲ್ಲೆಯ ಶಾಸಕರ ಪಾಲ್ಗೊಳ್ಳು ವಿಕೆ ಯೊಂದಿಗೆ ಸೋಮವಾರ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿ ಕಾರಕ್ಕೆ ಬಂದ ಬಳಿಕ ವಿನಾಕಾರಣ ಪೊಲೀಸ್ ಇಲಾಖೆ ಮೂಲಕ ಹಿಂದೂ ಕಾರ್ಯಕರ್ತರಿಗೆ ಸಮಸ್ಯೆ ನೀಡಲಾ ಗುತ್ತಿದೆ. ಇಂಥ ದಬ್ಟಾಳಿಕೆಗೆ ಬಗ್ಗುವುದಿಲ್ಲ ಎಂದರಲ್ಲದೇ, ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾವಿಸು ವುದಾಗಿ ಹೇಳಿದರು. ದೇವಸ್ಥಾನಗಳ ಜಾತ್ರೆ, ಉತ್ಸವದ ಸಂದರ್ಭದಲ್ಲಿ ಹಿಂದೂಗಳಿಗೆ ಆದ್ಯತೆ ನೀಡಬೇಕು ಎನ್ನುವುದೇ ತಪ್ಪೇ? ಹಾಗಾದರೆ ಹಿಂದೂ ಕಾರ್ಯಕರ್ತರಿಗೆ ವಾಕ್ ಸ್ವಾತಂತ್ರ್ಯವೂ ಇಲ್ಲವೇ ಎಂದು ಪ್ರಶ್ನಿಸಿದರು.
ಪ್ರಾಂತಧರ್ಮ ಜಾಗರಣಪ್ರಮುಖ್ ಸುನಿಲ್ ಕೆ.ಆರ್. ಮಾತನಾಡಿ, ಪೊಲೀಸ್ ವರಿಷ್ಠಾಧಿಕಾರಿ ಗಳು ಸರಕಾರದ ಏಜೆಂಟರಂತೆ ವರ್ತಿಸಬಾರದು. ಹಿಂದೂ ಸಂಘಟನೆಗಳು ಯಾರಿಗೂ ಸಮಸ್ಯೆ ನೀಡುವುದಿಲ್ಲ. ವಿನಾಕಾರಣ ಪ್ರಕರಣ ದಾಖಲಿಸಿದರೆ ಸುಮ್ಮನಿರೆವು ಎಂದರು.
ಹಿಂದೂ ಜಾಗರಣ ವೇದಿಕೆಯ ಪ್ರಶಾಂತ್ ಮಾತನಾಡಿ, ಹಿಂದೂ ಸಮಾಜ ಎಲ್ಲವನ್ನು ಸಹಿಸಿಕೊಳ್ಳುತ್ತದೆ ಎನ್ನುವ ಭ್ರಮೆ ಪೊಲೀಸ್ ಇಲಾಖೆಯಲ್ಲಿ ಇರಬಾರದು. ಎಲ್ಲದಕ್ಕೂ ಸಮಾಜವೇ ತಕ್ಕ ಉತ್ತರ ನೀಡಲಿದೆ ಎಂದರು.
ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ವಿಜಯ ಕೊಡವೂರು, ಶ್ಯಾಮಲಾ ಕುಂದರ್ ಮತ್ತಿತರರು ಹಾಗೂ ವಿವಿಧ ಹಿಂದೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಬಿಗಿ ಬಂದೋಬಸ್ತ್
ಎಸ್ಪಿ ಕಚೇರಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬನ್ನಂಜೆಯಿಂದ ಎಸ್ಪಿ ಕಚೇರಿ ಮಾರ್ಗವಾಗಿ ಬ್ರಹ್ಮಗಿರಿ ವರೆಗೂ ಪೊಲೀಸರ ಸರ್ಪಗಾವಲಿತ್ತು. ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರಕಾರ, ಪೊಲೀಸ್ ಇಲಾಖೆ ಹಾಗೂ ಎಸ್ಪಿ ವಿರುದ್ಧ ಘೋಷಣೆ ಕೂಗಲಾಯಿತು.