Advertisement

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

10:57 PM Dec 03, 2024 | Team Udayavani |

ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್‌ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಬೃಹತ್‌ ಜಾಥಾ ಹಾಗೂ ಪ್ರತಿಭಟನ ಸಭೆಯನ್ನು ಹಿಂದೂ ಹಿತರಕ್ಷಣ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ರಾಧಾಕೃಷ್ಣ ಮೆಂಡನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಧ್ಯಾಹ್ನ 3ಕ್ಕೆ ಜೋಡುಕಟ್ಟೆಯಿಂದ ಜಾಥಾ ಹೊರಟು, ಸರ್ವಿಸ್‌, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ ಪ್ರವೇಶಿಸಲಿದೆ.

ಅಲ್ಲಿ ಪ್ರತಿಭಟನೆ ಸಭೆ ನಡೆಯಲಿದ್ದು ಪರ್ಯಾಯ ಪುತ್ತಿಗೆ ಮಠಾಧೀಶರು ಮುಖ್ಯ ಭಾಷಣ ಮಾಡಲಿದ್ದಾರೆ. ಬಿಜೆಪಿ ಸಹಿತವಾಗಿ ವಿವಿಧ ಹಿಂದು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಉಡುಪಿ ಇಸ್ಕಾನ್‌ನ ಪ್ರಮುಖರು, ಭಕ್ತರು ಭಾಗವಹಿಸಲಿದ್ದಾರೆ.

ಪ್ರತಿಭಟನೆಯ ಅನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಿದ್ದೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರ ಇದಕ್ಕೊಂದು ಪರಿಹಾರ ಕಂಡುಹುಡುಕಬೇಕು. ಹಿಂದೂ ಮಹಿಳೆಯರ ಮೇಲೆ ನಿರಂತರ ದಬ್ಟಾಳಿಕೆ ಹಾಗೂ ಅತ್ಯಾಚಾರ ನಡೆಯುತ್ತಿದೆ. ಹಿಂದೂಗಳು ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉಡುಪಿ ಇಸ್ಕಾನ್‌ ಮುಖ್ಯಸ್ಥ ಗೋವಿಂದ ದಾಸ್‌ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ಧಮನ ಮಾಡುವ ಯತ್ನ ನಿರಂತರವಾಗಿ ನಡೆಯುತ್ತಿದೆ. ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಭಾರತ ಸರಕಾರವೂ ಕೂಡ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು.

Advertisement

1947ರಲ್ಲಿ ಶೇ.24ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಬಾಂಗ್ಲಾದಲ್ಲಿ ಹಿಂದೂಗಳೇ ಇಲ್ಲದಂತಾಗುತ್ತಾರೆ. ಮಂದಿರಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ನೈತಿಕ ಬೆಂಬಲ ಸೂಚಿಸುತ್ತಿದ್ದೇವೆ ಎಂದರು.

ಪ್ರಮುಖರಾದ ರಂಜಿತ್‌ ಹಾವಂಜೆ, ಅಖೀಲೇಶ್‌, ವಿಜಯ ಕೊಡವೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next