Advertisement

ನ್ಯಾಯಮೂರ್ತಿಗಳ ನೇಮಕಕ್ಕೆ ಹಿರಿತನಕ್ಕಿಂತ ಅರ್ಹತೆ ಮುಖ್ಯ

12:50 PM Mar 14, 2017 | Team Udayavani |

ಬೆಂಗಳೂರು: “ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ ಹಿರಿತನಕ್ಕಿಂತ ಅರ್ಹತೆ ಮಾನದಂಡವಾಗಿ ಪರಿಗಣಿಸುವುದು ಸೂಕ್ತ ,” ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅಭಿಪ್ರಾಯಪಟ್ಟರು.

Advertisement

ಬೆಂಗಳೂರು ವಕೀಲರ ಸಂಘ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಗೆ ನಿಯೋಜನೆಗೊಂಡ ನ್ಯಾಯಮೂರ್ತಿಗಳಾದ ಮೋಹನ್‌ ಎಂ. ಶಾಂತನಗೌಡರ್‌ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದರು.

“ಸುಪ್ರೀಂ ಕೋರ್ಟ್‌ಗೆ ಮಾತ್ರವಲ್ಲ ಹೈಕೋರ್ಟ್‌ಗೂ ನ್ಯಾಯಮೂರ್ತಿಗಳ ಆಯ್ಕೆ ವೇಳೆ ಹಿರಿತನಕ್ಕಿಂತ ಅರ್ಹತೆ ಮಾನದಂಡವಾಗಬೇಕು. ಬೆಂಗಳೂರು ವಕೀಲರ ಸಂಘದ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನಿಯೋಜನೆಗೊಂಡಿರುವುದು ಶ್ಲಾಘನೀಯ. ಈ ಇಬ್ಬರು ನ್ಯಾಯಮೂರ್ತಿಗಳು ಸರಿಸುಮಾರು ಎರಡು ವರ್ಷಗಳಿಂದ ನನಗೆ ಅಗತ್ಯ ಸಹಕಾರ ನೀಡಿದ್ದು, ಅವರ ಸೇವೆ ಸ್ಮರಿಸುತ್ತೇನೆ,” ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೋಹನ್‌ ಎಂ. ಶಾಂತನಗೌಡರ್‌, “ಅಭಿನಂದನೆ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಎಚ್ಚರಿಕೆಯಿಂದ ನ್ಯಾಯದಾನ ಮಾಡುವತ್ತ ಗಮನ ಹರಿಸುತ್ತೇವೆ. ರಾಜ್ಯಕ್ಕೆ ಕಳಂಕ ತಾರದಂತೆ ಕಾರ್ಯನಿರ್ವಹಿಸುತ್ತೇವೆ” ಎಂದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮತ್ತೂಬ್ಬ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌, “ನ್ಯಾಯಾಂಗ ಕ್ಷೇತ್ರದಲ್ಲಿರುವವರು ಮಾದರಿಯಾಗಿರಬೇಕು. ನ್ಯಾಯಸಮ್ಮತ ನಡವಳಿಕೆಯ ಮೂಲಕ ಇತರರು ಅನುಕರಿಸುವಂತಿರಬೇಕು. ಯಾರೊಬ್ಬರೂ ನ್ಯಾಯಾಂಗ ಸೇವೆಯಿಂದ ವಂಚಿತರಾಗುವಂತಾಗಬಾರದು. ಎಲ್ಲರನ್ನು ಒಳಗೊಂಡ ನ್ಯಾಯಾಂಗ ವ್ಯವಸ್ಥೆಯಿರಬೇಕು’ ಎಂದು ಹೇಳಿದರು.

Advertisement

ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ, “ಸುಪ್ರೀಂ ಕೋರ್ಟ್‌ ಗೆ ಈ ಹಿಂದೆಯೂ ರಾಜ್ಯದಿಂದ ಅತ್ಯುತ್ತಮ ನ್ಯಾಯಮೂರ್ತಿಗಳು ನೇಮಕಗೊಂಡಿದ್ದರು. ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ನಿಯೋಜನೆಗೊಂಡಾಗ ಸುಪ್ರೀಂ ಕೋರ್ಟ್‌ಗೆ ರತ್ನವೊಂದು ನೇಮಕಗೊಂಡಿದೆ ಎಂದು ಹೇಳಿದ್ದೆ. ಇದೀಗ ಮತ್ತೆರಡು ರತ್ನಗಳು ಸುಪ್ರೀಂ ಕೋರ್ಟ್‌ಗೆ ಸೇರ್ಪಡೆಯಾಗಿವೆ,” ಎಂದರು.

“ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ ಹಿರಿತನಕ್ಕಿಂತ ಅರ್ಹತೆಯನ್ನು ಪರಿಗಣಿಸುವುದು ಸೂಕ್ತ. ನ್ಯಾಯಮೂರ್ತಿಗಳಾದವರು ಹಿಂದಿನ ತೀರ್ಪುಗಳನ್ನೇ ಉಲ್ಲೇಖೀಸಿ ಆದೇಶ ಬರೆಯುವುದಕ್ಕಿಂತ ತಕ್ಷಣವೇ ತ್ವರಿತವಾಗಿ ನ್ಯಾಯದಾನ ನೀಡುವಂತಾಗಬೇಕು,” ಎಂದರು. 

ಸಚಿವ ಟಿ.ಬಿ.ಜಯಚಂದ್ರ, “ರಾಜ್ಯದ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಸುಪ್ರೀಂ ಕೋರ್ಟ್‌ನಲ್ಲೂ ಎಲ್ಲರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ರೀತಿಯುಲ್ಲಿ ಕಾರ್ಯ ನಿರ್ವಹಿಸಲಿ,” ಎಂದು ಆಶಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next