Advertisement

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

12:56 AM Oct 26, 2024 | Team Udayavani |

ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಉದ್ಯೋಗಕ್ಕಾಗಿ ವಲಸೆ ಹೋಗುವ ವಿದ್ಯಾವಂತರ ಸಂಖ್ಯೆ ವರ್ಷಗಳುರುಳಿದಂತೆ ಹೆಚ್ಚುತ್ತಲೇ ಸಾಗಿದೆ. ಸರಕಾರಿ ಮತ್ತು ಖಾಸಗಿ ಸಂಸ್ಥೆ, ಕಂಪೆನಿಗಳ ನೇಮಕಾತಿ ವಿಧಾನದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಕಲಿತ ವಿಷಯಕ್ಕೂ ಉದ್ಯೋಗಕ್ಕೂ ಸಂಬಂಧವೇ ಇರದಂತಹ ಸ್ಥಿತಿ ಇದೆ. ಪರಿಸ್ಥಿತಿ ಹೀಗಿರುವಾಗ ತನಗೆ ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಪಡೆಯುವುದು ಅನಿವಾರ್ಯ ಮಾತ್ರವಲ್ಲ, ಆ ಉದ್ಯೋಗವನ್ನು ನಿರ್ಲಕ್ಷಿಸದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಶಾಲಾ ಶಿಕ್ಷಕನೋರ್ವ ತನ್ನ ಅರ್ಹತೆಗೆ ತಕ್ಕ ಉದ್ಯೋಗ ಇದಲ್ಲ, ತಾನು ಪದವಿ ಕಾಲೇಜಿನ ಅಥವಾ ವಿಶ್ವವಿದ್ಯಾನಿಲಯದ ಉಪನ್ಯಾಸಕನಾಗಬೇಕಿತ್ತು ಎಂದು ಬಯಸುವುದು, ಅದಕ್ಕಾಗಿ ಪ್ರಯತ್ನಿಸುವುದು ತಪ್ಪಲ್ಲ. ಆದರೆ ಅದು ದೊರಕದಿದ್ದಾಗ ಕೊರಗುತ್ತಾ ತಾನಿರುವ ಹುದ್ದೆಯನ್ನು ನಿರ್ಲಕ್ಷಿಸುವುದು ಸರ್ವಥಾ ಅಕ್ಷಮ್ಯ. ತನಗೆ ಆಸಕ್ತಿ ಇಲ್ಲದ ಹುದ್ದೆಯಲ್ಲೇ ಮುಂದುವರಿದು ಮಕ್ಕಳ ಭವಿಷ್ಯವನ್ನು ಹಾಳುಗೆಡಹುವುದಕ್ಕಿಂತ ಆ ಹುದ್ದೆಯನ್ನು ತ್ಯಜಿಸುವುದೇ ಒಳ್ಳೆಯದು.

Advertisement

ಇತ್ತೀಚೆಗೆ ಒಂದು ಉತ್ತಮ ಉದ್ಯೋಗ ಪಡೆಯುವುದು ಯುವ ಜನತೆಯ ಮುಂದಿರುವ ಪ್ರಮುಖ ಸವಾ ಲಾಗಿದೆ. ತಮಗೆ ಯಾವ ಉದ್ಯೋಗ ತೃಪ್ತಿ ನೀಡಬಹುದು ಎಂಬುದೂ ಜಟಿಲ ಪ್ರಶ್ನೆಯಾಗಿ ಕಾಡಬಹುದು. ಯಾವುದೋ ಒಂದು ಉದ್ಯೋಗ ವಿವಿಧ ಕಾರಣ ಗಳಿಗಾಗಿ ಯುವಕರನ್ನು ಆಕರ್ಷಿಸ ಬಹುದು. ಆ ಉದ್ಯೋಗವನ್ನು ಪಡೆ ಯಲು ಮಾನಸಿಕವಾಗಿ ಸಿದ್ಧರಾಗಿ ಅದಕ್ಕೆ ಬೇಕಾದ ಅರ್ಹತೆಯನ್ನು ಗಳಿಸುವುದಕ್ಕೆ ಉದ್ಯುಕ್ತರಾಗುತ್ತಾರೆ. ಅತ್ಯುತ್ತಮ ಅಂಕಗಳನ್ನು ಗಳಿಸಿದರೆ ಬಯಸಿದ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿರುವ ಕಾರಣ ಅತ್ಯಧಿಕ ಅಂಕ ಗಳಿಸಲು ಅಹರ್ನಿಶಿ ಪ್ರಯತ್ನಶೀಲರಾಗುತ್ತಾರೆ, ಯಶಸ್ಸನ್ನೂ ತಮ್ಮದಾಗಿಸಿಕೊಳ್ಳುತ್ತಾರೆ. ಕೆಲವರು ಅಡ್ಡ ದಾರಿಯನ್ನೂ ಹಿಡಿಯು ತ್ತಾರೆನ್ನುವುದಕ್ಕೆ ಅನೇಕ ಸಾಕ್ಷಿಗಳು ಲಭಿಸುತ್ತವೆ. ವಿವಿಧ ಶಿಸ್ತುಗಳಲ್ಲಿ ಪದವಿ ಪಡೆದು ಹೆಚ್ಚುವರಿ ಅರ್ಹತೆ ಗಳಿಸುವುದು ಈಗ ಪ್ರಚಲಿತ ಮತ್ತು ಅದು ಅನಿವಾ ರ್ಯವೂ ಆಗಿದೆ. ಉದಾಹರಣೆಗೆ ತಾಂತ್ರಿಕ ಶಿಕ್ಷಣ ಪಡೆದವರು ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪದವಿ ಪಡೆಯು ತ್ತಿರುವುದು. ಉದ್ಯೋಗ ಬೇಟೆಗೆ ಹೊರ ಡುವಾಗ ವಿವಿಧ ಆಯುಧಗಳ ಲಭ್ಯತೆಯು ಅಪೇಕ್ಷಣೀಯವೇ!

ಬೇಟೆ ಎನ್ನುವುದು ಅತ್ಯಂತ ಸೂಕ್ತ ಪದ ಎಂದು ಕೆಲವೊಮ್ಮೆ ಅನಿಸುವುದುಂಟು. ಬೇಟೆಯಲ್ಲಿ ತೀವ್ರ ಅನಿಶ್ಚಿತತೆ ಇದೆ. ಕೆಲವರಿಗೆ ದೊಡ್ಡ ಮಿಕ, ಕೆಲವರಿಗೆ ಚಿಕ್ಕದು, ಇನ್ನೂ ಹಲವರಿಗೆ ಬರಿಗೈಯೇ ಗತಿ! ಅಂತೆಯೇ ಉದ್ಯೋಗ ಬೇಟೆ ಯಲ್ಲಿಯೂ! ಯಾವ ಹುದ್ದೆ ನಮಗಾಗಿ ಕಾದಿದೆ ಎನ್ನುವುದು ನಮ್ಮ ಹಣೆಬರಹ ಬರೆದಾತನಿಗೇ ತಿಳಿದಿರುತ್ತದೆಯೋ ಏನೋ!! ಕೆಲವರಿಗೆ ಅನಾಯಾಸವಾಗಿ ಅತ್ಯುತ್ತಮ ಹುದ್ದೆ, ಕೆಲವರಿಗೆ ಪ್ರಯಾಸ ಪೂರ್ವಕವಾಗಿ ಬಯಸಿದ ಹುದ್ದೆ, ಕೆಲವರಿಗೆ “ಪಾಲಿಗೆ ಬಂದದ್ದು ಪಂಚಾ ಮೃತ’ ಎಂಬಂತೆ ಒಂದು ಉದ್ಯೋಗ, ಇನ್ನೂ ಕೆಲವರಿಗೆ ಸಿಕ್ಕ ಸಿಕ್ಕ ಕೆಲಸ ಮಾಡುವ ಯೋಗ, ಅನೇಕರಿಗೆ ಯಾವುದೇ ಉದ್ಯಮ ಕೈ ಹಿಡಿಯದೆ ಆಗಾಗ ಕೈ ಸುಟ್ಟುಕೊಳ್ಳುವ ಭಾಗ್ಯ!

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅಗಾಧವಾಗಿದೆ. ಅದೇ ದೇಶದ ಪ್ರಮುಖ ಸಮಸ್ಯೆ ಎಂದರೂ ತಪ್ಪಾಗಲಾರದು. ಎಷ್ಟರ ಮಟ್ಟಿಗೆ ಈ ಸಮಸ್ಯೆ ಕಾಡುತ್ತಿದೆ ಎಂದು ಊಹಿಸುವುದೂ ಕಷ್ಟ. ಉತ್ತರ ಪ್ರದೇಶ, ಗುಜರಾತ್‌, ಬಿಹಾರ ರಾಜ್ಯಗಳ ಉದಾಹರಣೆಗಳು ನಮ್ಮ ಅಭಿವೃದ್ಧಿಯ ಪಥವನ್ನೇ ಅಣಕಿಸುತ್ತಿವೆ. ಉತ್ತರ ಪ್ರದೇಶದಲ್ಲಿ 3,700 ಜನ ಪಿಎಚ್‌.ಡಿ. ಪದವೀಧರರು, 28,000 ಸ್ನಾತಕೋತ್ತರ ಪದವೀಧರರು, 50,000 ಪದವೀಧರರು ಅಲ್ಲಿನ ಪೊಲೀಸ್‌ ಇಲಾಖೆಯಲ್ಲಿ ಡಿ ದರ್ಜೆಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ವರದಿಯಾಗಿದೆ. ಆ ಹುದ್ದೆಗೆ ಅವಶ್ಯವಿದ್ದ ವಿದ್ಯಾರ್ಹತೆ ಐದನೇ ತರಗತಿ!

ದೇಶದಲ್ಲಿ ಯುವಜನತೆಯ ನಿರು ದ್ಯೋಗದ ಪ್ರಮಾಣ ಶೇ. 10ಕ್ಕಿಂತಲೂ ಹೆಚ್ಚಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟ ವಾಗಿದೆ. ಸಂಪೂರ್ಣ ಸಾಕ್ಷರತೆ ಹೊಂದಿದ ರಾಜ್ಯ ಕೇರಳ ನಿರುದ್ಯೋಗದ ವಿಚಾರದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವರದಿಗಳು ಹೇಳುತ್ತವೆ. ಉದ್ಯೋಗ ಅರಸಿಕೊಂಡು ವಿವಿಧ ರಾಜ್ಯಗಳ ಜನರು ನಮ್ಮ ರಾಜ್ಯಕ್ಕೂ ವಲಸೆ ಬರುತ್ತಾರೆ. ಇತ್ತೀಚೆಗೆ ಅವರ ಸಂಖ್ಯೆ ಏರಿಕೆಯಾಗಿರುವುದು ಸರ್ವವೇದ್ಯ. ಕನ್ನಡಿಗರೂ ಜೀವನೋ ಪಾಯಕ್ಕಾಗಿ ಬೇರೆಡೆ ವಲಸೆ ಹೋಗಿರುವುದೂ ಹೊಸ ತೇನಲ್ಲ.
ಈ ನಡುವೆ ಸರಕಾರೀ ಇಲಾ ಖೆಗಳಲ್ಲಿ ಅನೇಕ ವರ್ಷಗಳಿಂದ ನೇರ ನೇಮಕಾತಿಯ ಬದಲಿಗೆ ಗುತ್ತಿಗೆ ಆಧಾರಿತ ನೇಮಕಾತಿ ನಡೆಯುತ್ತಲೇ ಇದ್ದು, ಉದ್ಯೋಗ ಭದ್ರತೆ ಎನ್ನುವುದು ಕನಸಿನ ಮಾತಾಗಿದೆ! ವೇತನ, ಭತ್ತೆ ಇತ್ಯಾದಿಗಳ ವೆಚ್ಚ ಕಡಿಮೆ ಮಾಡುವ ವ್ಯವಸ್ಥಿತ ಯೋಜನೆಯಂತೆ ಇದು ಕಂಡರೆ ತಪ್ಪಲ್ಲ. ಇದು ಶೋಷಣೆಯ ಇನ್ನೊಂದು ಮುಖವಷ್ಟೆ.

Advertisement

ಪರಿಸ್ಥಿತಿ ಹೀಗಿರುವಾಗ ತನಗೆ ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಪಡೆಯುವುದು ಅನಿವಾರ್ಯ ಮಾತ್ರವಲ್ಲ, ಆ ಉದ್ಯೋಗವನ್ನು ನಿರ್ಲಕ್ಷಿಸದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನಿರ್ಲಕ್ಷ್ಯ ಸಮರ್ಥನೀಯವಲ್ಲ! ಉದಾಹರಣೆಗೆ, ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಯೊಬ್ಬ ವಾಹನ ಚಾಲಕ ಹುದ್ದೆಗೆ ಆಯ್ಕೆಯಾದ ಸಂದರ್ಭದಲ್ಲಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿದರೆ ಹೇಗಾ ದೀತು? ತನ್ನ ಮತ್ತು ಪ್ರಯಾಣಿಕರ ಸುರಕ್ಷೆ ಯನ್ನು ಅವಗಣಿಸಲಾದೀತೇ? ವಿದ್ಯುತ್ಛಕ್ತಿ ವಿತರಣ ಕಂಪೆನಿಗಳ ನೌಕರರು ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಅದಲ್ಲ ಎಂದು ಕೊರಗುತ್ತಾ ಕರ್ತವ್ಯಕ್ಕೆ ತೆರಳಿದರೆ, ಸಂಭಾವ್ಯ ಅವಘಡಗಳ ಹೊಣೆಯನ್ನು ಯಾರು ಹೊರಬೇಕು? ( ಬಿ.ಇಡಿ. ಪದವೀಧರರು ಲೈನ್‌ಮನ್‌ ಆಗಿ ದುಡಿಯುತ್ತಿರುವುದನ್ನು ಕಾಣ ಬಹುದು.)

“ವೈದ್ಯನೊಬ್ಬ ತಪ್ಪು ಮಾಡಿದರೆ ಒಬ್ಬ ರೋಗಿಯ ಆರೋಗ್ಯಕ್ಕೆ ಹಾನಿಯಾಗಬಹುದು, ಅಭಿಯಂ ತನೊಬ್ಬ ತಪ್ಪು ಮಾಡಿದರೆ ಒಂದು ಕಟ್ಟಡ ಹಾಳಾಗಬಹುದು. ಆದರೆ ಶಿಕ್ಷಕನೊಬ್ಬ ತಪ್ಪು ಮಾಡಿದರೆ ಒಂದು ಜನಾಂಗವೇ ಹಾಳಾಗುತ್ತದೆ’ ಇದು ಎಲ್ಲರೂ ಭಾಷಣಗಳಲ್ಲಿ ಕೇಳುವ ಮಾತು. ಮಾತ್ರವಲ್ಲ ಅಕ್ಷರಶಃ ಸತ್ಯ ಕೂಡ. ಶಾಲಾ ಶಿಕ್ಷಕನೋರ್ವ ತನ್ನ ಅರ್ಹತೆಗೆ ತಕ್ಕ ಉದ್ಯೋಗ ಇದಲ್ಲ, ತಾನು ಪದವಿ ಕಾಲೇಜಿನ ಅಥವಾ ವಿಶ್ವವಿದ್ಯಾನಿಲಯದ ಉಪನ್ಯಾಸಕನಾಗಬೇಕಿತ್ತು ಎಂದು ಬಯಸುವುದು, ಅದಕ್ಕಾಗಿ ಪ್ರಯತ್ನಿಸುವುದು ತಪ್ಪಲ್ಲ. ಆದರೆ ಅದು ದೊರಕದಿದ್ದಾಗ ಕೊರಗುತ್ತಾ ತಾನಿರುವ ಹುದ್ದೆಯನ್ನು ಅವಗಣಿಸುವುದು ಸರ್ವಥಾ ಅಕ್ಷಮ್ಯ. ತನಗೆ ಆಸಕ್ತಿ ಇಲ್ಲದ ಹುದ್ದೆಯಲ್ಲೇ ಮುಂದುವರಿದು ಮಕ್ಕಳ ಭವಿಷ್ಯವನ್ನು ಹಾಳುಗೆಡಹುವುದಕ್ಕಿಂತ ಆ ಹುದ್ದೆಯನ್ನು ತ್ಯಜಿಸುವುದೇ ಒಳ್ಳೆಯದು.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪದವಿ ಕಾಲೇಜುಗಳ ಉಪನ್ಯಾಸಕ ಹುದ್ದೆಗೆ ಭಡ್ತಿಯ ಅವಕಾಶ ಇಲ್ಲವಾಗಿದೆ. ಆದುದರಿಂದ ಅವರೆಲ್ಲ ಕೊರಗುತ್ತಿದ್ದಾರೆ ಎಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಖೇದಕರ ಸಂಗತಿ ಯಾಗಿದ್ದರೂ ತಾವಿರುವ ಹುದ್ದೆಯಲ್ಲಿನ ಕರ್ತವ್ಯವನ್ನು ನಿರ್ಲಕ್ಷಿಸಿದರೆ ಅದಕ್ಕೆ ಸಮರ್ಥನೆ ನೀಡಲಾಗದು.

ಕರ್ತವ್ಯವನ್ನು ಮರೆತು ಇತರ ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರೂ ಇದ್ದಾರೆ. ತನ್ನ ವೇತನದ ಸಣ್ಣ ಭಾಗವೊಂದನ್ನು ನೀಡಿ ತನ್ನ ಬದಲಿಗೆ ಬೇರೆಯವರನ್ನು ನಿಯೋಜಿ ಸುವವರೂ ಇದ್ದಾರೆ! ಇದು ಭ್ರಷ್ಟಾಚಾರವಲ್ಲವೆ? ಇವರೆಲ್ಲ ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಕೆಡಿಸುತ್ತಿದ್ದಾರೆ, ಮಾತ್ರವಲ್ಲ ದೇಶದ್ರೋಹ ಎಸಗುತ್ತಿದ್ದಾರೆಂದು ಹೇಳಿದರೆ ತಪ್ಪಾಗ ಲಾರದು. ಇಂಥವರೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

-ಸಂಪಿಗೆ ರಾಜಗೋಪಾಲ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next