Advertisement

ಗುತ್ತಿಗೆ ಪೌರ ಕಾರ್ಮಿಕರ ಹುದ್ದೆ ಕಾಯಂ

12:22 PM Mar 22, 2018 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ಪೌರ ಕಾರ್ಮಿಕರ ಸಮುದಾಯ ವೇದಿಕೆ ವತಿಯಿಂದ ಬುಧವಾರ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಬಿಬಿಎಂಪಿ ಪೌರ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಂದು ಪೌರಕಾರ್ಮಿಕರಿಗೆ ನೀಡುವ ಭತ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.

ಪೌರಕಾರ್ಮಿಕರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ರಾಜ್ಯ ಸರ್ಕಾರವೇ ನೇರ ಹೊಣೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಿಮ್ಮ ಬಹುತೇಕ ಸಮಸ್ಯೆಗೆ ಪರಿಹಾರ ನೀಡಲಿದ್ದೇವೆ ಎಂದು ಹೇಳಿದರು.

ಕೆಲಸ ಕೀಳಲ್ಲ: ಪೌರ ಕಾರ್ಮಿಕರ ಮಕ್ಕಳು, ಶಿಕ್ಷಣ ಪಡೆಯಲು ಮುಂದೆ ಬರಬೇಕು. ಕೆಲಸದಲ್ಲಿ ಯಾವುದೂ ಮೇಲಲ್ಲ ಮತ್ತು ಕೀಳಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಚಿ.ನಾ.ರಾಮೂ ಮಾತನಾಡಿ, ಪೌರ ಕಾರ್ಮಿಕರು ಕೆಲಸ ಮಾಡದೇ ಇದ್ದರೆ ನಗರದಲ್ಲಿ ಹತ್ತಾರು ರೋಗ ಕಾಣಿಸಿಕೊಳ್ಳುತ್ತದೆ. ಇದು ಸರ್ಕಾರಕ್ಕೆ ಗೊತ್ತಿದ್ದರೂ, ಪೌರ ಕಾರ್ಮಿಕರ ರಕ್ಷಣೆ, ಮೂಲಸೌಕರ್ಯ ನೀಡುತ್ತಿಲ್ಲ ಎಂದು ದೂರಿದರು.

ಏಕರೂಪ ವೇತನ ಪದ್ಧತಿ: ವೇದಿಕೆ ಅಧ್ಯಕ್ಷ ಎಂ.ಸುಬ್ಬರಾಯುಡು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆ ಹಾಗೂ ಕಾಯಂ ಪೌರ ಕಾರ್ಮಿಕರಿಗೆ ಸರ್ಕಾರ ಮತ್ತು ಪಾಲಿಕೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಏಕರೂಪ ವೇತನ ಪದ್ಧತಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು. ಲಹರಿ ವೇಲು, ಬಿಬಿಎಂಪಿ ಸದಸ್ಯೆ ಶಶಿಕಲಾ, ಬಿಜೆಪಿ ಮುಖಂಡರಾದ ಎನ್‌.ಆರ್‌.ರಮೇಶ್‌, ಕೋಂದಡರಾಮ, ವಾಸು ದೇವನ್‌, ವೇದಿಕೆಯ ಜಯರಾಮ್‌, ಎಂ.ಎನ್‌.ಶ್ರೀರಾಮ್‌ ಇದ್ದರು.

Advertisement

ಏ.3ಕ್ಕೆ ಬಿಜೆಪಿಯಿಂದ ಹಿಂದುಳಿದ ವರ್ಗದವರ ಸಮಾವೇಶ: ಬೆಂಗಳೂರು: ಕನಕದಾಸರ ನೆಲೆ ಕಾಗಿನೆಲೆಯಲ್ಲಿ ಏಪ್ರಿಲ್‌ 3ರಂದು ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸಲಿದ್ದಾರೆಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದ ಕೊಡವ ಸಮಾಜದಲ್ಲಿ ನಡೆದ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಬಳಿಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮೊಂದಿಗೆ ಹಿಂದುಳಿದ ವರ್ಗದವರಿದ್ದಾರೆ ಎಂದುಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾದ ನಂತರ ಹಿಂದುಳಿದವರು, ದಲಿತರನ್ನು ಮರೆತಿದ್ದಾರೆ ಎಂದರು.

ಪೌರಕಾರ್ಮಿಕರಿಗೆ ನೀನೇನು ಮಾಡಿದ್ದೀರಿ ಸಿದ್ದರಾಮಯ್ಯ? ಯುಗಾದಿ ಬಂದರೂ ಪೌರಕಾರ್ಮಿಕರಿಗೆ ನಾಲ್ಕು ತಿಂಗಳ ವೇತನ ಬಂದಿಲ್ಲ. ಬೆಂಗಳೂರು ನಗರ ಸ್ವತ್ಛ ಮಾಡುವ ಪೌರ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದೀರಿ.
-ಎ.ಜೈರೀಮ್‌, ಅಧ್ಯಕ್ಷ, ಪೌರಕಾರ್ಮಿಕರ ಮಹಾಸಂಘ

Advertisement

Udayavani is now on Telegram. Click here to join our channel and stay updated with the latest news.

Next