ಥಾಣೆ: ಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನಿಗೆ ಕಾಲು ನೋವಿನ ಶಸ್ತ್ರ ಚಿಕಿತ್ಸೆಗೆ ಬದಲಾಗಿ ಖಾಸಗಿ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆರೋಪಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ವೈದ್ಯರು ತಮ್ಮ ಮಗನಿಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕಳೆದ ತಿಂಗಳು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ 9 ವರ್ಷದ ಬಾಲಕನಿಗೆ ಕಾಲಿಗೆ ಗಾಯವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು ಎಂದು ಪೋಷಕರು ಹೇಳಿದ್ದಾರೆ.
ಜೂ.15ರಂದು ಶಹಾಪುರದ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಬಾಲಕನ ಗಾಯಗೊಂಡ ಕಾಲಿನ ಬದಲಾಗಿ ಆತನ ಖಾಸಗಿ ಭಾಗಕ್ಕೆ ಸುನ್ನತಿ ಶಸ್ತ್ರಚಿಕಿತ್ಸೆ (Circumcision surgery) ಮಾಡಿಸಲಾಗಿದೆ” ಎಂದು ಬಾಲಕನ ಪೋಷಕರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದಾದ ಬಳಿಕ ತನ್ನ ನಿರ್ಲಕ್ಷ್ಯತನವನ್ನು ಅರಿತ ವೈದ್ಯರು ಗಾಯಗೊಂಡ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಬಗ್ಗೆ ಪೋಷಕರು ವೈದ್ಯರ ನಿರ್ಲಕ್ಷ್ಯಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
“ಬಾಲಕನಿಗೆ ಕಾಲಿನ ಗಾಯದ ಜೊತೆಗೆ ಫಿಮೊಸಿಸ್ (ಬಿಗಿಯಾದ ಮುಂದೊಗಲು) ಸಮಸ್ಯೆಯೂ ಇತ್ತು. ನಾವು ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿತ್ತು. ಎರಡನೇ ಆಪರೇಷನ್ ಬಗ್ಗೆ ಪೋಷಕರಿಗೆ ತಿಳಿಸುವುದನ್ನು ವೈದ್ಯರು ಮರೆತಿರಬಹುದು ಆಸ್ಪತ್ರೆಯ ವೈದ್ಯಾಧಿಕಾರಿ ಗಜೇಂದ್ರ ಪವಾರ್ ಹೇಳಿದ್ದಾರೆ.