Advertisement

ಟಿಇಟಿ ಪರೀಕ್ಷೆ ಬರೆದ 3.32 ಲಕ್ಷ ಅಭ್ಯರ್ಥಿಗಳು

09:14 PM Nov 06, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ-2022) ಭಾನುವಾರ ನಡೆದಿದ್ದು, ಒಟ್ಟು 3,32,913 (ಶೇ.92.12) ಮಂದಿ ಪರೀಕ್ಷೆ ಬರೆದಿದ್ದಾರೆ. ಕೆಲವೆಡೆ ಆನ್‌ಲೈನ್‌ ಯಡವಟ್ಟಿನಿಂದ ಕೆಲ ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

Advertisement

ಟಿಇಟಿ ಪರೀಕ್ಷೆ ಪತ್ರಿಕೆ-1ಕ್ಕೆ ಬಂದ 1,54,929 ಅರ್ಜಿಗಳ ಪೈಕಿ 1,40,801(ಶೇ.90.88) ಮಂದಿ ಪರೀಕ್ಷೆ ಬರೆದರೆ, ಪತ್ರಿಕೆ-2ಕ್ಕೆ ಬಂದ 2,06,455 ಅರ್ಜಿಗಳಲ್ಲಿ 1,92,112(ಶೇ.93.05) ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಪತ್ರಿಕೆ-1ರಲ್ಲಿ 14,128 ವಿದ್ಯಾರ್ಥಿಗಳು ಹಾಗೂ ಪತ್ರಿಕೆ-2ರಲ್ಲಿ 14,343 ಸೇರಿ ಒಟ್ಟು 28,471 ಮಂದಿ ಗೈರು ಹಾಜರಾಗಿದ್ದಾರೆ.

ರಾಜ್ಯಾದ್ಯಂತ 35 ಶೈಕ್ಷಣಿಕ ಜಿಲ್ಲೆಗಳಲ್ಲಿ 1,370 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಚಿಕ್ಕಮಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ಪರೀಕ್ಷೆ ವೇಳೆ ಕೊಂಚ ಸಮಸ್ಯೆಯಾಗಿದೆ. ಆನ್‌ಲೈನ್‌ನಲ್ಲಿ ಎರಡು ಪ್ರತ್ಯೇಕ ಸೆಂಟರ್‌ ತೋರಿಸಿದ ಪರಿಣಾಮ ಕೆಲವರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಅಕ್ರಮ ನಡೆಯದಂತೆ ನಿಗಾ:
ಬೆಳಗ್ಗೆ 9.30ರಿಂದ 12ರ ವರೆಗೆ ಪತ್ರಿಕೆ-1ರ ಪರೀಕ್ಷೆ ನಡೆದರೆ, ಮಧ್ಯಾಹ್ನ 2 ರಿಂದ 4.30ರ ವರೆಗೆ ಪತ್ರಿಕೆ-2ರ ಪರೀಕ್ಷೆಗಳು ನಡೆದಿವೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ನಡೆಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳ ಮೇಲೆ ಪೊಲೀಸರು ಸದಾ ನಿಗಾ ಇಟ್ಟಿದ್ದರು. ಪರೀಕ್ಷಾ ಕೇಂದ್ರದ ಸುತ್ತ-ಮುತ್ತ 200 ಮೀಟರ್‌ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ರಾಜಧಾನಿಯಲ್ಲೂ ಮುನ್ನೆಚ್ಚರಿಕೆ:
ಬೆಂಗಳೂರಿನ ಎಲ್ಲ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ಪರೀಕ್ಷೆ ನಡೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಅಹಿತಕರ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

Advertisement

ಎಲ್ಲೂ ಸಮಸ್ಯೆಗಳಾದ ಬಗ್ಗೆ ಮಾಹಿತಿ ಬಂದಿಲ್ಲ. ಪತ್ರಿಕೆ-1ರಲ್ಲಿ ಬೆಂಗಳೂರಿನ ಉತ್ತರ ವಿಭಾಗದಲ್ಲಿ 3,871(ಶೇ.87.40) ಹಾಗೂ ಪೇಪರ್‌-2ನಲ್ಲಿ 5,843(ಶೇ.89.64), ದಕ್ಷಿಣ 3,555 (ಶೇ.85.31) ಹಾಗೂ ಪೇಪರ್‌-2ನಲ್ಲಿ 5,516 (ಶೇ.89.16), ಬೆಂ. ಗ್ರಾಮಾಂತರದಲ್ಲಿ 788 (ಶೇ.86.78) ಹಾಗೂ ಪೇಪರ್‌-2ನಲ್ಲಿ 1060(ಶೇ.89.83) ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next