ನವದೆಹಲಿ: ಬಿಸಿಸಿಐನ ವಿರೋಧದ ಮಧ್ಯೆಯೂ ಕಳೆದ ವರ್ಷ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಕದಿನ ಕ್ರಿಕೆಟ್ ಲೀಗ್ ಆರಂಭಿಸಲು ತೀರ್ಮಾನ ಮಾಡಿತ್ತು. ಈಗ ಅದರ ರೂಪುರೇಷೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
2019ರಿಂದ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, 2021ಕ್ಕೆ ಮುಗಿಯಲಿದೆ. 2020ರಿಂದ ಆರಂಭವಾಗುವ ವಿಶ್ವ ಏಕದಿನ ಲೀಗ್ 2022ಕ್ಕೆ ಮುಗಿಯಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಮುಂದಿನವರ್ಷ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
ಹೇಗಿರಲಿದೆ ಮಾದರಿ?: ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ 9 ತಂಡಗಳು ಆಡಲಿವೆ. ಪ್ರತಿ ತಂಡಗಳು 2 ವರ್ಷದ ಅವಧಿಯಲ್ಲಿ 6 ಸರಣಿಗಳನ್ನು ಆಡಲಿವೆ. ಒಮ್ಮೆ ತಮ್ಮ ನೆಲದಲ್ಲಿ ಆಡಿದರೆ, ಇನ್ನೊಮ್ಮೆ ವಿದೇಶಿ ನೆಲದಲ್ಲಿ ಆಡಲಿವೆ. ಇದರಲ್ಲಿ ಅಗ್ರಸ್ಥಾನ ಗಳಿಸಿದ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖೀಯಾಗುವ ಮೂಲಕ ವಿಜೇತರ ನಿರ್ಧಾರವಾಗಲಿದೆ.
ಏಕದಿನ ಮಾದರಿ ಹೇಗೆ?: ಏಕದಿನ ಲೀಗ್‌ನಲ್ಲಿ 13 ತಂಡಗಳು ಆಡಲಿವೆ. ಇದರಲ್ಲಿ ಟೆಸ್ಟ್ ಆಡುವ 12 ತಂಡಗಳು ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅರ್ಹತೆ ಪಡೆದಿರುವ ಹಾಲೆಂಡ್‌ಗಳು ಆಡಲಿವೆ. ಇಲ್ಲೂ ಕೂಡ ತಂಡಗಳು ತಮ್ಮ ನೆಲ ಮತ್ತು ಎದುರಾಳಿ ನೆಲದಲ್ಲಿ ತಲಾ 3 ಪಂದ್ಯಗಳ ಸರಣಿಯಾಡಲಿವೆ. 2 ವರ್ಷದ ಅವಧಿಯಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳ ನಡುವೆ ಅಂತಿಮ ಪಂದ್ಯ ನಡೆದು ವಿಜೇತರ ನಿರ್ಧಾರವಾಗಲಿದೆ.
ಈ ಕೂಟಗಳು ನಡೆಯುವ ಅವಧಿಯಲ್ಲಿ ದಾಖಲಾಗುವ ಎಲ್ಲ ಸರಣಿಗಳು ಈ ವ್ಯಾಪ್ತಿಗೇ ಬರುವುದಿಲ್ಲ. ಈ ಸಂದರ್ಭದಲ್ಲಿ ಆ್ಯಷಸ್‌ನಂತಹ ಅನ್ಯ ಸರಣಿಗಳೂ ನಡೆಯಲಿವೆ. ಅವು ಪ್ರತ್ಯೇಕವಾಗಿಯೇ ಇರುತ್ತವೆ.