ಸಿಡ್ನಿ: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಸಿಡ್ನಿ ಟೆಸ್ಟ್ ಪಂದ್ಯವನ್ನು ಆರು ವಿಕೆಟ್ ಅಂತರದಿಂದ ಗೆದ್ದ ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಜಯಿಸಿತು. ದಶಕದ ಬಳಿಕ ಆಸ್ಟ್ರೇಲಿಯಾ ತಂಡವು ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯನ್ನು ಜಯಿಸಿತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುಲು ಭಾರತ ತಂಡಕ್ಕೆ ಸಿಡ್ನಿ ಟೆಸ್ಟ್ ಗೆಲುವು ಅಗತ್ಯವಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಬುಮ್ರಾ ಅಲಭ್ಯರಾಗಿದ್ದು ಟೀಂ ಇಂಡಿಯಾಗೆ ದೊಡ್ಡ ಸಮಸ್ಯೆಯಾಗಿ ಕಾಡಿತು. 162 ರನ್ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಇದರೊಂದಿಗೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತಲುಪುವ ಆಸೆ ಕಮರಿದೆ. ಸತತ ಎರಡು ಫೈನಲ್ ಆಡಿದ್ದ ಭಾರತ ತಂಡವು ಮೂರನೇ ಬಾರಿಯೂ ಫೈನಲ್ ತಲುಪುವ ಆಕಾಂಕ್ಷೆಯಿಂದ ಇತ್ತು. ಆದರೆ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ದದ ವೈಟ್ ವಾಶ್ ಸೋಲು, ಆಸೀಸ್ ನಲ್ಲಿ 3-1 ಸರಣಿಯ ಸೋಲು ಭಾರತದ ಕನಸಿಗೆ ಎಳ್ಳು ನೀರು ಬಿಟ್ಟಿದೆ.
ಬಾರ್ಡರ್ ಗಾವಸ್ಕರ್ ಸರಣಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಸತತ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಿದೆ. ಮತ್ತೊಂದೆಡೆ ಈಗಾಗಲೇ ದಕ್ಷಿಣ ಆಫ್ರಿಕಾ ತಂಡವು ಫೈನಲ್ ಪ್ರವೇಶ ಪಡೆದಿದೆ. ಹೀಗಾಗಿ ಜೂನ್ 11ರಿಂದ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.