ಮಂಡ್ಯ: ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಡೆಸುವ ವಿಚಾರವಾಗಿ ತೀವ್ರ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪುಣೆ ವಿಜ್ಞಾನಿಗಳ ತಂಡ ಸೋಮವಾರ (ಜ.28)ದಿಂದ ಐದು ದಿನ ಅಣೆಕಟ್ಟು ಸುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲಿದೆ. ಪರೀಕ್ಷಾರ್ಥ ಸ್ಫೋಟದ ಹಲವು ನಿಗೂಢತೆಗಳು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪುಣೆಯ ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯ, ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ ಪರಿಣಿತರು ಈ ಪರೀಕ್ಷಾರ್ಥ ಸ್ಫೋಟ ನಡೆಸಲಿದ್ದು, ಪ್ರೊ| ಎ.ಕೆ.ಘೋಷ್ ನೇತೃತ್ವದ ಐವರು ವಿಜ್ಞಾನಿಗಳ ತಂಡ ರವಿವಾರ ರಾತ್ರಿಯೇ ಕೆಆರ್‌ಎಸ್‌ಗೆ ಆಗಮಿಸಿದೆ.
ತಾಂತ್ರಿಕ ವರದಿ ಕೆಲಸ
ಕೆಆರ್‌ಎಸ್ ಸುತ್ತ ಲಿನ ಕಲ್ಲು ಗಣಿ ಪ್ರದೇಶಗಳಿಂದ ವಿವಿಧ ಅಂತರಗಳಲ್ಲಿ ಕಡಿಮೆಯಿಂದ ಹೆಚ್ಚಿನ ತೀವ್ರತೆಯ ಸ್ಫೋಟಕಗಳನ್ನು ಪರೀಕ್ಷಾರ್ಥವಾಗಿ ಸ್ಫೋಟಿಸಲಿದೆ. ಯಾವ ಪ್ರಮಾಣದಲ್ಲಿ ಸ್ಫೋಟಕ ಗಳನ್ನು ಬಳಸಿದರೆ ಎಷ್ಟರಮಟ್ಟಿಗೆ ಹಾನಿಯಾಗುತ್ತದೆ ಮತ್ತು ಜಲಾಶಯದಿಂದ ಎಷ್ಟು ದೂರದಲ್ಲಿ ಸ್ಫೋಟಕ ಮಾಡಿದರೆ ಎಷ್ಟು ಹಾನಿ ಸಂಭವಿಸಬಹುದು ಎನ್ನುವುದನ್ನು ವೈಜ್ಞಾನಿಕವಾಗಿ ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ತಾಂತ್ರಿಕ ವರದಿ ನೀಡುವುದಷ್ಟೇ ಈ ತಂಡದ ಕೆಲಸ.
ಆದರೆ ಕೆಆರ್‌ಎಸ್ ಸುತ್ತ ಐದು ದಿನಗಳ ಕಾಲ ನಡೆಯುವ ಪರೀಕ್ಷಾರ್ಥ ಸ್ಫೋಟಕ್ಕೆ ಯಾವ ಯಾವ ಜಾಗಗಳನ್ನು ಗುರುತಿಸಲಾಗಿದೆ. ಉತ್ತರ ದಂಡೆಯ ಎಲ್ಲೆಲ್ಲಿ ಸ್ಫೋಟ ನಡೆಯಲಿದೆ. ಪರೀಕ್ಷಾರ್ಥ ಸ್ಫೋಟದ ತೀವ್ರತೆಯ ಪ್ರಮಾಣ ಎಷ್ಟಿರುತ್ತದೆ. ಎಷ್ಟು ಅಡಿ ಆಳದಲ್ಲಿ ಸ್ಫೋಟ ನಡೆಸಲಾಗುತ್ತದೆ ಎಂಬುದು ಸೇರಿದಂತೆ ಹಲವು ತಾಂತ್ರಿಕ ಸಂಗತಿಗಳನ್ನು ರಹಸ್ಯವಾಗಿ ಇಡಲಾಗಿದೆ.
ಸದ್ಯ ಗಣಿಗಾರಿಕೆಗೆ ನಿಷೇಧ
ಕೆಆರ್‌ಎಸ್‌ನಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಹಾಗೂ ನಿರ್ವಹಣಾ ಕೇಂದ್ರ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಗಂಡಾಂತರವಿದ್ದು, ಅಣೆಕಟ್ಟೆ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಹಾಗೂ ಅಣೆಕಟ್ಟು ಸುರಕ್ಷತೆ ಕುರಿತು ಅಣೆಕಟ್ಟು ಸುರಕ್ಷತಾ ಸಮಿತಿಯಿಂದ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಕೇಂದ್ರದ ವರದಿ ಆಧರಿಸಿ ಸೆ.27ರಿಂದ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.