ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಪ್ರಭಾವಿ ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಜಗತ್ತಿನ ನಂ ವನ್ ಶ್ರೀಮಂತ ಎಲಾನ್ ಮಸ್ಕ್ ಬರೋಬ್ಬರಿ 44 ಬಿಲಿಯನ್ ಡಾಲರ್ ಬೃಹತ್ ಮೊತ್ತಕ್ಕೆ ಖರೀದಿಸಿದ್ದ ಬೆನ್ನಲ್ಲೇ ಷೇರುಪೇಟೆಯಲ್ಲಿ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ.
ಇದನ್ನೂ ಓದಿ:ಅನಾವಶ್ಯಕ ನಿರ್ಬಂಧ ಹೇರದಂತೆ ಪ್ರಧಾನಿ ಸೂಚಿಸಿದ್ದಾರೆ : ಸಿಎಂ ಬೊಮ್ಮಾಯಿ
ಮಾಧ್ಯಮದ ವರದಿಯ ಪ್ರಕಾರ, ವಾಲ್ ಸ್ಟ್ರೀಟ್ ಷೇರುಮಾರುಕಟ್ಟೆಯಲ್ಲಿ ಟೆಸ್ಲಾ ಕಂಪನಿಯ ಶೇರು ಮೌಲ್ಯ ಬರೋಬ್ಬರಿ ಶೇ.12.2ರಷ್ಟು ಮೌಲ್ಯ ಕುಸಿತಗೊಂಡಿತ್ತು. ಇದರಿಂದಾಗಿ ಕಂಪನಿ 125 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಟೆಸ್ಲಾ 10 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿರುವುದಾಗಿ ತಿಳಿಸಿದೆ.
ಮುಕ್ತ ಮಾತುಕತೆಗೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಚೀನಾ ಜತೆಗೆ ಸಂಘರ್ಷ ಏರ್ಪಟ್ಟಿದ್ದು, ಈ ಜಟಾಪಟಿ ಬೆನ್ನಲ್ಲೇ ಮಸ್ಕ್ ಟ್ವೀಟರ್ ಖರೀದಿಸಿದ್ದಾರೆ. ಚೀನಾದ ಶಾಂಘೈನಲ್ಲಿನ ಗಿಗಾಫ್ಯಾಕ್ಟರಿಯಲ್ಲಿ ತನ್ನ ವಾಹನಗಳ ತಯಾರಿಸುತ್ತಿದ್ದು, ಟೆಸ್ಲಾಗೆ ಪ್ರಮುಖ ಮಾರುಕಟ್ಟೆಯಾಗಿದೆ.
ಟ್ವೀಟರ್ ಖರೀದಿಯ ನಂತರ ಎಲಾನ್ ಮಸ್ಕ್ ಗಮನವನ್ನು ಬೇರೆಡೆ ಸೆಳೆಯುವ ಅಪಾಯವಿದೆ ಎಂದು ಎನ್ ಪಿಆರ್ ವರದಿ ಮಾಡಿದೆ. ಏತನ್ಮಧ್ಯೆ ಮಸ್ಕ್ ಟ್ವೀಟರ್ ಖರೀದಿಯ ಸುದ್ದಿ ಹೊರಬೀಳುತ್ತಿದ್ದಂತೆಯೇ ಟೆಸ್ಲಾ ಶೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರುವುದಾಗಿ ವರದಿ ವಿವರಿಸಿದೆ.
ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್ ಸಂಪತ್ತಿನ ಒಟ್ಟು ಮೌಲ್ಯ 257 ಬಿಲಿಯನ್ ಡಾಲರ್. ಆದರೆ ಇದರಲ್ಲಿ ಮೂರನೇ ಎರಡರಷ್ಟು ಸಂಪತ್ತು ಟೆಸ್ಲಾ ಶೇರು ಮೌಲ್ಯದ್ದಾಗಿದೆ ಎಂದು ವರದಿ ತಿಳಿಸಿದೆ. ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಚ್ ಕಮಿಷನ್ ಗೆ ಸಲ್ಲಿಸಿದ ನೂತನ ವಾರ್ಷಿಕ ವರದಿಯಲ್ಲಿ ಕಂಪನಿ ಹೂಡಿಕೆದಾರರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ವರದಿ ಹೇಳಿದೆ.
ಒಂದು ವೇಳೆ ಎಲಾನ್ ಮಸ್ಕ್ ಅವರು ತಮ್ಮ ವೈಯಕ್ತಿಕ ಸಾಲದ ಭದ್ರತೆಗಾಗಿ ನಮ್ಮ ಸಾಮಾನ್ಯ ಶೇರುಗಳನ್ನು ಮಾರಾಟ ಮಾಡಲು ಒತ್ತಾಯಿಸಿದರೆ, ಅಂತಹ ಶೇರುಗಳು ನಮ್ಮ ಶೇರುಗಳ ಬೆಲೆ ಕುಸಿಯಲು ಕಾರಣವಾಗಬಹುದು ಎಂದು ಟೆಸ್ಲಾ ಕಂಪನಿ ತಿಳಿಸಿದೆ.