ಬೆಂಗಳೂರು: ಕಂಪನಿಯ ಇಂಟರ್ನೆಟ್ ಆಕ್ಸೆಸ್ ಕಳುವು ಮಾಡಿ 12.5 ಕೋಟಿ ರೂ. ವಂಚನೆ ಎಸಗಿದ್ದ ನಾಲ್ವರನ್ನು ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ನೇಹಾ ಬೆನ್, ಶುಭಂ, ವೈಭವ್ ಪಿತಾಡಿಯಾ, ಶೈಲೇಶ್ ಬಂಧಿತರು.
ಬೆಂಗಳೂರು ಮೂಲದ ಸಿಆರ್ಇಡಿ ಕಂಪನಿಯ ನೋಡಲ್ ಮತ್ತು ಕರೆಂಟ್ ಬ್ಯಾಂಕ್ ಖಾತೆಗಳು, ಆಕ್ಸಿಸ್ ಬ್ಯಾಂಕ್ ಇಂದಿರಾನಗರ ಶಾಖೆಯಲ್ಲಿವೆ. ಈ ಖಾತೆಗಳಿಗೆ ಲಿಂಕ್ ಇರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಹಾಗೂ ಕಂಪನಿಯ ಮಾಹಿತಿಯ ಡೇಟಾವನ್ನು ಆರೋಪಿಗಳು ಕಳವು ಮಾಡಿದ್ದರು. ಬಳಿಕ ಕಾರ್ಪೊರೇಟ್ ಇಂಟರ್ ನೆಟ್ ಬ್ಯಾಂಕಿಂಗ್ (ಸಿಐಬಿ) ಫಾರ್ಮ್ಗಳನ್ನು ನಕಲು ಮಾಡಿ, ಈ ಫಾರ್ಮ್ಗಳಲ್ಲಿ ಸಹಿ ಮತ್ತು ಸೀಲುಗಳನ್ನು ಸಹ ನಕಲು ಮಾಡಿ ಕಂಪನಿಗೆ ಸಂಬಂಧಿಸಿದ 12.51 ಕೋಟಿ ರೂ. ಅನ್ನು 17 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಇದು ಕಂಪನಿಯ ಮುಖ್ಯಸ್ಥರ ಗಮನಕ್ಕೆ ಬಂದು ಕಂಪನಿ ನಿರ್ದೇಶಕ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದರು.
ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಆರೋಪಿ ವೈಭವ್ ಗುಜರಾತ್ ರಾಜ್ಯದ ಅಕ್ಸಿಸ್ ಬ್ಯಾಂಕ್ ನ ಕಾರ್ಪೋರೆಟ್ ವಿಭಾಗದ ಮ್ಯಾನೇಜರ್ ಆಗಿರುವುದು ಕಂಡು ಬಂದಿತ್ತು. ದೂರುದಾರರ ಕಂಪನಿಯ ಖಾತೆಗಳ ಡೇಟಾವನ್ನು ಆರೋಪಿಗಳು ಕಳವು ಮಾಡಿ, ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ನಕಲಿ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಫಾರ್ಮ್ ಹಾಗೂ ಕಂಪನಿಯ ಬೋರ್ಡ್ ರೆಸಲ್ಯೂಷನ್ ದಾಖಲೆಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿತ್ತು. ನಂತರ ಗುಜರಾತ್ ರಾಜ್ಯದ ಬರೂಚ್ ಜಿಲ್ಲೆಯ ಅಂಕಲೇಶ್ವರದ ಅಕ್ಸಿಸ್ ಬ್ಯಾಂಕ್ನಲ್ಲಿ ಅದನ್ನು ಸಲ್ಲಿಸಿದ್ದರು. ಅಲ್ಲಿಂದ ದೂರುದಾರರ ಕಂಪನಿಯ ನೋಡಲ್ ಬ್ಯಾಂಕ್ ಖಾತೆಗಳ ಇಂಟರ್ನೆಟ್ ಬ್ಯಾಂಕಿಂಗ್ ವಶಕ್ಕೆ ತೆಗೆದುಕೊಳ್ಳುತ್ತಿದ್ದ. ಆ ಮೂಲಕ ಗುಜರಾತ್ ಮತ್ತು ರಾಜಸ್ತಾನ ರಾಜ್ಯದ 17 ಮ್ಯೂಲ್ ಬ್ಯಾಂಕ್ ಖಾತೆಗಳಿಗೆ ಒಟ್ಟು 12.50 ಕೋಟಿ ರೂ. ವರ್ಗಾಯಿಸಿಕೊಂಡು ಮೋಸ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿತ್ತು.
ಆ್ಯಕಿಸ್ ಬ್ಯಾಂಕ್ ನಲಿ ಮ್ಯಾನೇಜರ್ ಆಗಿದ್ದ ವೈಭವ್!
ಆ್ಯಕ್ಸಿಸ್ ಬ್ಯಾಂಕ್ನ ಗುಜರಾತ್ ಕಾರ್ಪೋರೆಟ್ ವಿಭಾಗದಲ್ಲಿ ಆರೋಪಿ ವೈಭವ್ ಮ್ಯಾನೇಜರ್ ಆಗಿದ್ದ. ಕಂಪನಿಯ ಬ್ಯಾಂಕ್ ಡೇಟಾ ಕಳವು ಮಾಡಿ ಆರೋಪಿಗಳ ಜೊತೆ ಸೇರಿ ಹಣ ಲಪಟಾಯಿಸಲು ಸಂಚು ರೂಪಿಸಿದ್ದ. ಅಪರಿಚಿತ ಖಾತೆಗಳನ್ನು ಹುಡುಕಿ ಕೊಡುವ ಕೆಲಸವನ್ನು ನೇಹಾ ನಿರ್ವಹಿಸುತ್ತಿದ್ದರೆ, ಅಕೌಂಟ್ ಹೋಲ್ಡರ್ ಶುಭಂ ಸಹ ವಂಚನೆಯಲ್ಲಿ ಕೈ ಜೋಡಿಸಿದ್ದ ಎಂದು ತಿಳಿದು ಬಂದಿದೆ.