ಕೊಲಂಬೊ: ಪ್ರವಾಸಿ ಭಾರತದೆದುರಿನ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಆಲ್ ರೌಂಡರ್ ದಸುನ್ ಶಣಕ ಈತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಳೆದ 4 ವರ್ಷಗಳಲ್ಲಿ ಲಂಕಾ ತಂಡ 10ನೇ ನಾಯಕನ್ನು ಕಂಡಂತಾಗಿದೆ.
ಶ್ರೀಲಂಕಾದ ಕ್ರೀಡಾ ಸಚಿವ, ಪ್ರಧಾನಿ ಮಹಿಂದ ರಾಜಪಕ್ಷ ಅವರ ಪುತ್ರನೂ ಆಗಿರುವ ನಮಲ್ ರಾಜಪಕ್ಷ ಅವರ ಅನುಮತಿ ಬಳಿಕ ಶುಕ್ರವಾರ 23 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು.
2017ರಿಂದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ದಿಮ್ಮುತ್ ಕರುಣರತ್ನೆ, ಉಪುಲ್ ತರಂಗ, ಕುಸಾಲ್ ಪೆರೇರ, ದಿನೇಶ್ ಚಾಂಡಿಮಾಲ್, ಆ್ಯಂಜಲೋ ಮ್ಯಾಥ್ಯೂಸ್, ಕಪುಗೆಡರ, ತಿಸ್ಸರ ಪೆರೇರ, ರಂಗನ ಹೆರಾತ್, ಲಸಿತ್ ಮಾಲಿಂಗ, ಸುರಂಗ ಲಕ್ಮಲ್ ನಾಯಕರಾಗಿದ್ದಾರೆ. ದಿನಕಳೆದಂತೆ ಕ್ರಿಕೆಟ್ ಕ್ವಾಲಿಟಿ ಕಡಿಮೆಯಾಗುತ್ತಿರವುದು ಇದಕ್ಕೆ ಹಿಡಿದ ಕನ್ನಡಿಯಾಗಿದೆ.
ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ಡಾಟಾ ವಿಶ್ಲೇಷಕ ಜಿ.ಟಿ.ನಿರೋಷನ್ ಹೊರತುಪಡಿಸಿ ಇಂಗ್ಲೆಂಡ್‌ನಿಂದ ಮರಳಿದ ಲಂಕಾ ತಂಡದ ಬೇರೆ ಯಾವ ಸದಸ್ಯರಲ್ಲೂ ಕೋವಿಡ್ ಕಂಡುಬಂದಿಲ್ಲ ಎಂದು ವರದಿಯಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜು.18ರಂದು ಆರಂಭವಾಗಲಿದೆ. ಮೂರು ಏಕದಿನ ಪಂದ್ಯಗಳ ಬಳಿಕ ಮೂರು ಟಿ20 ಪಂದ್ಯಗಳು ನಡೆಯಲಿದೆ.