Advertisement

Wimbledon ಜೊಕೋವಿಕ್‌ ಮುನ್ನಡೆ; ಸಿಸಿಪಸ್‌ ಔಟ್‌

11:47 PM Jul 10, 2023 | Team Udayavani |

ಲಂಡನ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೋವಿಕ್‌ ಮತ್ತು ಎಲೆನಾ ರಿಬಾಕಿನಾ 2023ರ ವಿಂಬಲ್ಡನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇವರ ಹಾದಿಯಲ್ಲಿ ಸಾಗಿದ ಇತರರೆಂದರೆ ಡ್ಯಾನಿಲ್‌ ಮೆಡ್ವೆಡೇವ್‌, ಮ್ಯಾಡಿಸನ್‌ ಕೀಸ್‌, ಅರಿನಾ ಸಬಲೆಂಕಾ, ಇಗಾ ಸ್ವಿಯಾಟೆಕ್‌ ಮತ್ತು ಎಲಿನಾ ಸ್ವಿಟೋಲಿನಾ. ಆದರೆ ಗ್ರೀಸ್‌ನ ದೈತ್ಯ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ 4ನೇ ಸುತ್ತಿನಲ್ಲಿ ಸೋಲುಂಡು ಕೂಟದಿಂದ ಹೊರಬಿದ್ದರು.

Advertisement

ಸಿಸಿಪಸ್‌ ಅವರನ್ನು ಸೋಲಿಸಿದವರು ಅಮೆರಿಕದ ಕ್ರಿಸ್ಟೋಫ‌ರ್‌ ಯುಬ್ಯಾಂಕ್ಸ್‌. 5 ಸೆಟ್‌ಗಳ ಹೋರಾಟದಲ್ಲಿ ಅವರು 3-6, 7-6 (7-4), 3-6, 6-4, 6-4 ಅಂತರದ ಜಯ ಸಾಧಿಸಿ ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌ ತಲುಪಿದರು.

ನೊವಾಕ್‌ ಜೊಕೋವಿಕ್‌ 4ನೇ ಸುತ್ತು ದಾಟಲು ತುಸು ಹೆಚ್ಚೇ ಎನಿಸುವಷ್ಟು ಶ್ರಮ ಹಾಕಬೇಕಾಯಿತು. ಪೋಲೆಂಡ್‌ನ‌ ಹ್ಯೂಬರ್ಟ್‌ ಹುರ್ಕಾಜ್‌ ಈ ಚಾಂಪಿಯನ್‌ ಆಟಗಾರನೆದುರು ನಿರೀಕ್ಷೆಗೂ ಮೀರಿದ ಪ್ರದರ್ಶನವಿತ್ತರು. ಕೊನೆಗೂ ಜೊಕೋವಿಕ್‌ 7-6 (8-6), 7-6 (8-6), 5-7, 6-4 ಅಂತರದಿಂದ ಗೆದ್ದು ಬಂದರು.

ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಮೊದಲ ಸಲ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದರು. ಎದುರಾಳಿ ಜಿರಿ ಲೆಹೆಕ ಮೊದಲೆರಡು ಸೆಟ್‌ಗಳನ್ನು ಕಳೆದುಕೊಂಡ ಬಳಿಕ (4-6, 2-6) ಗಾಯಾಳಾದ ಕಾರಣ ಹಿಂದೆ ಸರಿದರು.

ಹಿಂದೆ ಸರಿದ ಮಯಾ
ಎಲೆನಾ ರಿಬಾಕಿನಾ ಸುಲಭದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಬ್ರಝಿಲ್‌ನ ಎದುರಾಳಿ ಬೀಟ್ರಿಝ್ ಹದ್ದಾದ್‌ ಮಯಾ ಮೊದಲ ಸೆಟ್‌ ವೇಳೆ ಬೆನ್ನುನೋವಿಗೆ ಸಿಲುಕಿದ್ದರಿಂದ ಪಂದ್ಯವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದರು. ಆಗ ಮಯಾ 1-3ರ ಹಿನ್ನಡೆಯಲ್ಲಿದ್ದರು. ಅರಿನಾ ಸಬಲೆಂಕಾ 6-4, 6-0 ಅಂತರದಿಂದ ಎಕಟೆರಿನಾ ಅಲೆಕ್ಸಾಂಡ್ರೋವಾ ಅವರ ಆಟ ಮುಗಿಸಿದರು.

Advertisement

ಆ್ಯಂಡ್ರೀವಾ ಪರಾಭವ
ಸೋಮವಾರದ ಇನ್ನೊಂದು ಪಂದ್ಯದಲ್ಲಿ ಮಿರ್ರಾ ಆ್ಯಂಡ್ರೀವಾ ಅವರ ಕನಸಿನ ಓಟಕ್ಕೆ ಅಮೆರಿಕದ ಮ್ಯಾಡಿಸನ್‌ ಕೀಸ್‌ ಬ್ರೇಕ್‌ ಹಾಕಿದರು. ರಷ್ಯಾದ ಯುವ ಆಟಗಾರ್ತಿಯನ್ನು ಕೀಸ್‌ 3-6, 7-6 (4), 6-2 ಅಂತರದಿಂದ ಪರಾಭವಗೊಳಿಸಿದರು. 16 ವರ್ಷದ ಆ್ಯಂಡ್ರೀವಾ ಗೆದ್ದು ಬಂದದ್ದಿದ್ದರೆ 1997ರ ಬಳಿಕ ವಿಂಬಲ್ಡನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಅತೀ ಕಿರಿಯ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು. ಅಂದು ಅನ್ನಾ ಕುರ್ನಿಕೋವಾ ಈ ಸಾಧನೆಗೈದಿದ್ದರು.

ರವಿವಾರ ರಾತ್ರಿಯ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್‌ ಮತ್ತು ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದ ಎಲಿನಾ ಸ್ವಿಟೋಲಿನಾ ಕ್ವಾರ್ಟರ್‌ ಫೈನಲ್‌ ತಲುಪಿದರು. ಸ್ವಿಯಾಟೆಕ್‌ 6-7 (4), 7-6 (2), 6-3ರಿಂದ ಬೆಲಿಂಡಾ ಬೆನ್ಸಿಕ್‌ ಅವರನ್ನು ಮಣಿಸಿದರೆ, ಸ್ವಿಟೋಲಿನಾ 2-6, 6-4, 7-6 (9) ಅಂತರದಿಂದ ವಿಕ್ಟೋರಿಯಾ ಅಜರೆಂಕಾ ಆಟಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next