Advertisement
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಸದ ನಳೀನಕುಮಾರ ಕಟೀಲ ನೇಮಕಗೊಂಡ ನಂತರ ಪಕ್ಷದ ಮಹತ್ವದ ಹುದ್ದೆಯೊಂದಕ್ಕೆ ನೇಮಕ ಮಾಡಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯೊಂದಕ್ಕೆ ಮಾತ್ರ ನೇಮಕ ಆದೇಶ ಹೊರಡಿಸಿರುವುದು ವಿಶೇಷವಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಎಂದರೆ ರಾಜ್ಯ ಘಟಕದಲ್ಲಿ ರಾಜ್ಯಾಧ್ಯಕ್ಷರ ನಂತರದ ಮಹತ್ವದ ಸ್ಥಾನ. ಅಂತಹ ಹುದ್ದೆಗೆ ಮಹೇಶ ಟೆಂಗಿನಕಾಯಿ ಅವರ ನೇಮಕ ಬಹುತೇಕ ರಾಜ್ಯ ನಾಯಕರ ಗಮನಕ್ಕೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.
Related Articles
Advertisement
ಇದೀಗ ಹುಬ್ಬಳ್ಳಿಯವರೇ ಆದ ಮಹೇಶ ಟೆಂಗಿನಕಾಯಿ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಉತ್ತರದ ಬಿಜೆಪಿ ಶಕ್ತಿ ಕೇಂದ್ರವಾದ ಹುಬ್ಬಳ್ಳಿಗೆ ಮಹತ್ವದ ಸ್ಥಾನ ನೀಡಿದಂತಾಗಿದೆ. ಧಾರವಾಡ ವಿಭಾಗದ ಸಹ ಪ್ರಭಾರಿಯಾಗಿ ಹುಬ್ಬಳ್ಳಿಯಲ್ಲೇ ಇದ್ದ ಎನ್.ರವಿಕುಮಾರ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ನೇಮಿಸಿದ್ದರು.
ಸಂತೋಷ ಬಲ?: ಮಹೇಶ ಟೆಂಗಿನಕಾಯಿ ಬಿಜೆಪಿಯಲ್ಲಿ ಪ್ರಮುಖ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಸೇರಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಧಾರವಾಡ ವಿಭಾಗೀಯ ಸಹ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ರಾಜ್ಯ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಹುದ್ದೆಗೆ ನೇಮಕಗೊಂಡಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ವೀಕ್ಷಕರಾಗಿ ನೇಮಕವಾಗುವ ಮೂಲಕ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಆಗಿತ್ತಾದರೂ, ನಂತರದಲ್ಲಿ ಇವರ ಬದಲಿಗೆ ಸಿ.ಎಂ.ನಿಂಬಣ್ಣನವರಿಗೆ ಟಿಕೆಟ್ ನೀಡಲಾಗಿತ್ತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗೆ ಮಹೇಶ ಟೆಂಗಿನಕಾಯಿ ಅವರ ನೇಮಕ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಮಹತ್ವದ ರೀತಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ ಟೆಂಗಿನಕಾಯಿ ಅವರು ಸಂತೋಷ ಅವರ ಆಪ್ತ ಬಳಗದಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರ ಕಾರಣದಿಂದಲೇ ಟೆಂಗಿನಕಾಯಿ ಅವರಿಗೆ ತೆಲಂಗಾಣ ಚುನಾವಣೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಜವಾಬ್ದಾರಿ ನೀಡಲಾಗಿತ್ತು. ಅಲ್ಲಿ ಉತ್ತಮ ಕಾರ್ಯನಿರ್ವಹಣೆ ಆಧಾರದಲ್ಲಿ ಇದೀಗ ಮಹತ್ವದ ಹುದ್ದೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಹಾಗೂ ಹಲವು ಕಾರ್ಯ-ಯೋಜನೆಗಳು ಚಾಚು ತಪ್ಪದೆ ಅನುಷ್ಠಾನಕ್ಕೆ ನಂಬಿಗೆಯಸ್ಥರೊಬ್ಬರನ್ನು ಪ್ರಮುಖ ಸ್ಥಾನಕ್ಕೆ ತರಬೇಕು ಎಂಬ ಉದ್ದೇಶದೊಂದಿಗೆ ಸಂತೋಷ ಅವರು ಪಕ್ಷದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ, ಮಹೇಶ ಟೆಂಗಿನಕಾಯಿ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಜ್ಯ ಘಟಕದಲ್ಲಿ ಕೇವಲ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅದು ಒಬ್ಬರನ್ನೇ ನೇಮಕ ಮಾಡಿ ಆದೇಶ ಹೊರಡಿಸಿರುವುದು ನೋಡಿದರೆ, ಇದೊಂದು ಅಚ್ಚರಿಯ ತೀರ್ಮಾನ ಎಂದೇ ಹೇಳಬಹುದಾಗಿದೆ.
ಪಕ್ಷದ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ನನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವೆ. ಪಕ್ಷ ಇಂತಹದ್ದೊಂದು ದೊಡ್ಡ ಜವಾಬ್ದಾರಿ ನೀಡುತ್ತದೆ ಎಂಬ ಸುಳಿವು ನನಗೂ ಇರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಂದ ನೇಮಕ ಆದೇಶ ನೋಡಿದ ನಂತರವೇ ನನಗೆ ತಿಳಿದಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.-ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ * ಅಮರೇಗೌಡ ಗೋನವಾರ